Bengaluru Opposition Meet: ಬೆಂಗಳೂರಿನ ಪ್ರತಿಪಕ್ಷಗಳ ಸಭೆಗೆ ಯಾರು ಹಾಜರು, ಯಾರು ಗೈರು? ವಿವರ ತಿಳಿಯಿರಿ
ಬೆಂಗಳೂರು, ಜುಲೈ 15: ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಜುಲೈ 17 ಮತ್ತು 18 ರಂದು ಪ್ರತಿಪಕ್ಷಗಳು ಬೆಂಗಳೂರಿನಲ್ಲಿ ಸಭೆ ಸೇರಲಿವೆ. ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ವಿರೋಧ ಪಕ್ಷಗಳು ಸಭೆ ಸೇರುತ್ತಿರುವ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಪ್ರತಿಪಕ್ಷಗಳು ಎರಡನೇ ಬಾರಿಗೆ ಸಭೆ ನಡೆಸಲು ಮುಂದಾಗಿವೆ. ಈ ಮೊದಲು ಬಿಹಾರ ರಾಜಧಾನಿ ಪಟ್ನಾದಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದವು.
24 ವಿರೋಧ ಪಕ್ಷದ ನಾಯಕರನ್ನು ಸಭೆಗೆ ಆಹ್ವಾನಿಸಲಾಗಿದೆ. ರಾಷ್ಟ್ರದ ಹಲವಾರು ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ. ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ನಿಗದಿಯಾಗಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸಿದ್ಧತೆಯ ಉಸ್ತುವಾರಿ ವಹಿಸಲಾಗಿದೆ.
ಜೂನ್ 23 ರಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಪಾಟ್ನಾದಲ್ಲಿ ಮೊದಲ ಪ್ರತಿಪಕ್ಷ ನಾಯಕರ ಸಭೆ ನಡೆಯಿತು. 15 ವಿರೋಧ ಪಕ್ಷದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
ವರದಿಗಳ ಪ್ರಕಾರ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿನಿಧಿಯನ್ನು ಕಳುಹಿಸುವುದಕ್ಕಿಂತ ಖುದ್ದಾಗಿ ಸಭೆಗೆ ಹಾಜರಾಗುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸೋನಿಯಾ ಗಾಂಧಿ ಫೋನ್ ಕರೆ ಮೂಲಕ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಕಾಂಗ್ರೆಸ್‌ನೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಈ ಸಭೆಯಲ್ಲಿ ಭಾಗವಹಿಸಬಹುದು.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಖಿಲೇಶ್ ಯಾದವ್ ಅವರೊಂದಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಕೂಡ ಆಗಮಿಸುವ ಸಾಧ್ಯತೆಯಿದೆ. ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಜಯಂತ್ ಚೌಧರಿ ಅವರು ವಿರೋಧ ಪಕ್ಷದ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಬೆಂಗಳೂರಿನಲ್ಲಿ ನಡೆಯುವ ಎರಡು ದಿನಗಳ ಪ್ರತಿಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಏತನ್ಮಧ್ಯೆ, ಭಾರತ್ ರಾಷ್ಟ್ರ ಸಮಿತಿ ( BRS ) ಮುಖ್ಯಸ್ಥ ಕೆ ಚಂದ್ರಶೇಖರ ರಾವ್ ಅವರು ಪಾಟ್ನಾದಲ್ಲಿ ಪ್ರತಿಪಕ್ಷಗಳ ಸಭೆಯಿಂದ ದೂರ ಉಳಿದಿದ್ದರು. ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲೂ ಅವರು ಪಾಲ್ಗೊಳ್ಳುವ ಸಾಧ್ಯತೆಯಿಲ್ಲ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳು ಕಾರ್ಯತಂತ್ರವನ್ನು ಯೋಜಿಸುವ ನಿರೀಕ್ಷೆಯಿದೆ. ಕೆಲವು ವರದಿಗಳು ಮಹಾಮೈತ್ರಿಕೂಟಕ್ಕೆ ಹೆಸರನ್ನು ನೀಡಬಹುದು ಎಂದೂ ಹೇಳಿವೆ. ಸೀಟು ಹಂಚಿಕೆಯ ಬಗ್ಗೆ ಚರ್ಚೆಗಳೂ ಆರಂಭವಾಗಬಹುದು ಎಂದು ಹೇಳಲಾಗುತ್ತಿದೆ.












Click it and Unblock the Notifications