Opposition Meeting in Bengaluru:ಸರ್ವಾಧಿಕಾರಿ ಪ್ರಭುತ್ವದ ವಿರುದ್ದದ ಹೋರಾಟ- ವಿಪಕ್ಷ ನಾಯಕರನ್ನು ಸ್ವಾಗತಿಸಿದ ಸಿದ್ದರಾಮಯ್ಯ
ಬೆಂಗಳೂರು, ಜುಲೈ 17: ಬೆಂಗಳೂರಿನಲ್ಲಿ ಇಂದು ಆರಂಭವಾಗಲಿರುವ ವಿಪಕ್ಷಗಳ ಸಭೆಯಲ್ಲಿ ದೇಶದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯು ಭಾರೀ ಮಹತ್ವ ಪಡೆದುಕೊಂಡಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ತಂತ್ರಗಳನ್ನು ರೂಪಿಸುವುದು ಈ ಸಭೆಯ ಉದ್ದೇಶವಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಸರ್ವಾಧಿಕಾರಿ, ಕೋಮುವಾದಿ ಮತ್ತು ಭ್ರಷ್ಟ ಪ್ರಭುತ್ವದ ವಿರುದ್ದದ ಹೋರಾಟದಲ್ಲಿ ಒಂದಾಗಲು ಆಗಮಿಸುತ್ತಿರುವ ದೇಶದ ಪ್ರಮುಖ ವಿರೋಧಪಕ್ಷಗಳ ನಾಯಕರನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ' ಎಂದು ಹೇಳಿದ್ದಾರೆ.

'ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಪ್ರಭುತ್ವದ ಆಶಯಗಳ ಕೂಡು ಬದುಕಿನ ದೀರ್ಘ ಪರಂಪರೆ ಹೊಂದಿರುವ ಸರ್ವಜನಾಂಗದ ಶಾಂತಿಯ ತೋಟದಲ್ಲಿ ಬಿತ್ತಿದ ಬೀಜ, ಬೆಳೆದು ಫಲ ನೀಡಲಿ ಎನ್ನುವುದು ಕನ್ನಡಿಗರೆಲ್ಲರ ಒಕ್ಕೊರಲಿನ ಹಾರೈಕೆ' ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಕರೆದಿರುವ ಸಭೆಯಲ್ಲಿ 24 ವಿರೋಧ ಪಕ್ಷಗಳು ಭಾಗವಹಿಸುವ ನಿರೀಕ್ಷೆಯಿದೆ. ವಿರೋಧ ಪಕ್ಷಗಳ ನಾಯಕರು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಮಾತುಕತೆ ಮೂಲಕ ಒಂದಾಗಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
2024ರ ಲೋಕಸಭಾ ಚುನಾವಣೆಗೆ ವಿರೋಧ ಪಕ್ಷಗಳ ಮೈತ್ರಿಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಮತ್ತು ಸಂವಹನ ಅಂಶಗಳನ್ನು ರೂಪಿಸಲು ಉಪಸಮಿತಿಯನ್ನು ರಚಿಸುವ ಪ್ರಸ್ತಾವನೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಮೈತ್ರಿಕೂಟಕ್ಕೆ ಹೆಸರನ್ನು ನೀಡಲು ವಿರೋಧ ಪಕ್ಷಗಳ ನಾಯಕರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿನ್ನೆ ದಿನಗಟ್ಟಲೆ ಚರ್ಚಿಸಿದ ನಂತರ ಆಮ್ ಆದ್ಮಿ ಪಕ್ಷ ಕೂಡ ಸಭೆಯಲ್ಲಿ ಭಾಗವಹಿಸುವುದಾಗಿ ಘೋಷಿಸಿದೆ. ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ದೆಹಲಿಯ ಸುಗ್ರೀವಾಜ್ಞೆಗೆ ಕಾಂಗ್ರೆಸ್ ಬೆಂಬಲವನ್ನು ವ್ಯಕ್ತಪಡಿಸಿದ ನಂತರ ಕೇಜ್ರಿವಾಲ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಎಂಕೆ ಸ್ಟಾಲಿನ್, ನಿತೀಶ್ ಕುಮಾರ್ ಮತ್ತು ಹೇಮಂತ್ ಸೊರೆನ್ ಸಭೆಯಲ್ಲಿ ಭಾಗವಹಿಸುವ ಪ್ರಮುಖರಾಗಿದ್ದಾರೆ. ಕೆ ಚಂದ್ರಶೇಖರ್ ರಾವ್, ಜಗನ್ ಮೋಹನ್ ರೆಡ್ಡಿ, ಚಂದ್ರಬಾಬು ನಾಯ್ಡು ಮತ್ತು ನವೀನ್ ಪಟ್ನಾಯಕ್ ಈ ಸಭೆಯಿಂದ ದೂರ ಉಳಿಯಲಿದ್ದಾರೆ.

ಜೂನ್ 23 ರಂದು ಪಾಟ್ನಾದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆಯೋಜಿಸಿದ್ದ ಪ್ರತಿಪಕ್ಷಗಳ ಒಗ್ಗಟ್ಟಿನ ಸಭೆಯಲ್ಲಿ 15 ಪಕ್ಷಗಳು ಭಾಗವಹಿಸಿದ್ದವು.












Click it and Unblock the Notifications