ಕೊಲೆ ಆರೋಪಿ ದರ್ಶನ್ ಕಾಪಾಡುವಂತೆ ಗೃಹ ಸಚಿವರ ಕಾಲು ಹಿಡಿದ ಸಚಿವ? ಮುಂದೇನಾಯ್ತು?
ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ಬಂಧನವಾಗಿ ಸಂಪೂರ್ಣ ಒಂದು ವಾರ ಕಳೆದಿದ್ದು ಕಳೆದ ಎಂಟು ದಿನಗಳಿಂದ ನಟ ಪೊಲೀಸ್ ಠಾಣೆಯಲ್ಲಿದ್ದಾರೆ. ಚಿತ್ರರಂಗದಲ್ಲಿ, ರಾಜಕೀಯ ರಂಗದಲ್ಲಿ ಹತ್ತಾರು ಗಣ್ಯರ ಸ್ನೇಹ ಹೊಂದಿರುವ ದರ್ಶನ್ ಅವರನ್ನು ಬಿಡಿಸುವ ಪ್ರಯತ್ನ ಯಾರೂ ಮಾಡಲಿಲ್ಲವೇ ಎನ್ನುವ ಪ್ರಶ್ನೆ ಎಲ್ಲರ ತಲೆಯಲ್ಲಿದೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ವಕೀಲರನ್ನು ಸಂಪರ್ಕಿಸಿ ದರ್ಶನ್ ಪರ ಜಾಮೀನು ಪಡೆಯಲು ಹೋರಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ದರ್ಶನ್ ಆಪ್ತರೆನಿಸಿಕೊಂಡವರು ಏನೂ ಮಾಡುತ್ತಿಲ್ಲವೇ ಎನ್ನುವ ಪ್ರಶ್ನೆ ಹಲವರಲ್ಲಿದೆ. ಆದರೆ ಹಲವರು ಈ ಪ್ರಕರಣದಿಂದ ಅಂತರ ಆಯ್ದುಕೊಂಡಿದ್ದರೆ, ಆ ಒಬ್ಬ ವ್ಯಕ್ತಿ ಮಾತ್ರ ದರ್ಶನ್ ಪರ ಹೋರಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಖ್ಯಾತ ರಾಜಕಾರಣಿ ಮಾತ್ರವಲ್ಲದೇ ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದ ಸಚಿವರೊಬ್ಬರು ದರ್ಶನ್ ಬಿಡುಗಡೆಗೆ ಶತ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ಪ್ರಯತ್ನಿಸಿ ಹಿಂದೇಟು ಅನುಭವಿಸಿದ್ದ ಸಚಿವರು ಇದೀಗ ನೇರವಾಗಿ ಗೃಹ ಮಂತ್ರಿ ಪರಮೇಶ್ವರ್ ಅವರನ್ನು ಭೇಟಿಯಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಪದೇ ಪದೇ ದರ್ಶನ್ ಪರ ವಹಿಸುತ್ತಿರುವ ಈ ಸಚಿವರಿಗೆ ಪ್ರಕರಣದ ಗಂಭೀರತೆ ಬಗ್ಗೆ ತಿಳಿಸಿಲು ಗೃಹ ಸಚಿವ ಪರಮೇಶ್ವರ್, ಕಾನೂನು ಸಚಿವ ಹೆಚ್.ಕೆ ಪಾಟೀಲ್ಗೆ ಕರೆ ಮಾಡಿ ತಮ್ಮ ನಿವಾಸಕ್ಕೆ ಬರ ಹೇಳಿದ್ದಾರಂತೆ. ಡಾ.ಜಿ.ಪರಮೇಶ್ವರ್ ನಿವಾಸಕ್ಕೆ ಆಗಮಿಸಿದ ಕಾನೂನು ಸಚಿವರು ಮೊದಲು ದರ್ಶನ್ ಪರ ಬಂದ ಸಚಿವರಿಗೆ ಪ್ರಕರಣದ ಗಂಭೀರತೆ ಬಗ್ಗೆ ತಿಳಿ ಹೇಳಿದ್ದಾರಂತೆ.
ಗೃಹ ಸಚಿವರು ಹಾಗೂ ಕಾನೂನು ಸಚಿವರು ದರ್ಶನ್ಗೆ ಮುಂದೆ ಬರಬಹುದಾದ ಸಂಕಷ್ಟದ ಬಗ್ಗೆ ಚರ್ಚೆ ನಡೆಸಿ. ಈ ಪ್ರಕರಣದಲ್ಲಿ ನೀವು ಬಂದರೆ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ತನಿಖೆ ವೇಳೆ ಮಧ್ಯಪ್ರವೇಶಿಸುವುದು ಕಷ್ಟ. ಪ್ರಭಾವಿಗಳು ಬಂದರೆ ಅವರು ಕೂಡ ಸಿಲುಕಿಕೊಳ್ಳಬೇಕಾಗುತ್ತದೆ. ನೀವು ಕೂಡ ಸಿಲುಕಿ ಹಾಕಿಕೊಳ್ಳಬಹುದು ಎಂದು ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ.
ಈ ವೇಳೆ ದರ್ಶನ್ ಪರ ಬಂದ ಸಚಿವರು ಆತನನ್ನು ಕಾಪಾಡಿ ಎಂದು ಕಣ್ಣೀರಿಟ್ಟು ಗೃಹ ಸಚಿವ ಪರಮೇಶ್ವರ್ ಅವರ ಕಾಲಿಗೆ ಬೀಳಲು ಮುಂದಾಗಿದ್ದರು ಎಂದು ವರದಿಯಾಗಿದೆ. ಸಚಿವರು ಹಾಗೂ ದರ್ಶನ್ ಆಪ್ತತತೆ ಬಗ್ಗೆ ಅರಿತಿದ್ದ ಗೃಹ ಸಚಿವರು ಪ್ರಕರಣದ ತನಿಖೆಯಲ್ಲಿ ತಲೆ ಹಾಕುವುದು ಸೂಕ್ತವಲ್ಲ ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಸದ್ಯ ಈ ಪ್ರಕರಣವನ್ನು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸರು ಕೂಡ ನಿಷ್ಪಕ್ಷಪಾತವಾಗಿ ತೀವ್ರ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎನ್ನುವ ನಿಟ್ಟಿನಲ್ಲಿ ತನಿಖೆ ಚುರುಕಾಗಿ ನಡೆಯುತ್ತಿದೆ.












Click it and Unblock the Notifications