ಆಪ್ ಆಧಾರಿತ ಆಟೋ ಸೇವೆ ವಿವಾದ: ಪ್ರಯಾಣ ಶುಲ್ಕ ನಿಗದಿಗೆ 15 ದಿನ ಗಡುವು ನೀಡಿದ ಹೈಕೋರ್ಟ್
ಬೆಂಗಳೂರು, ಅ.14. ಆಪ್ ಆಧಾರಿತ ಆಟೋರಿಕ್ಷಾಗಳ ಸೇವೆಗಳಿಗೆ ಕೊನೆಗೂ ದರ ನಿಗದಿಯಾಗಲಿದೆ. ಇಷ್ಟು ತಮ್ಮ ಮನಸ್ಸಿಗೆ ಬಂದಷ್ಟು ಹಣ ದೋಚುತ್ತಿದ್ದ ಆಪ್ ಆಧರಿಸಿ ಆಟೋಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.
ಅದಕ್ಕಾಗಿ ಕೋರ್ಟ್ ಕೂಡ ಅನುಮತಿ ನೀಡಿದ್ದು, ಓಲಾ, ಉಬರ್ ಮತ್ತಿತರ ಕಂಪನಿಗಳ ಓಡಿಸುವ ಆಟೋಗಳಿಗೆ ಮುಂದಿನ 15 ದಿನಗಳಲ್ಲಿ ಪ್ರಯಾಣ ಶುಲ್ಕ ನಿಗದಿಪಡಿಸಲು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.
ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ಏಕಸದಸ್ಯ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ನ.7ಕ್ಕೆ ಮುಂದೂಡಿತು.
ಆಫ್ ಆಧಾರಿತ ಓಲಾ ಮತ್ತು ಉಬರ್ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಿದ್ದವು.
ಸರ್ಕಾರದ ಪರ ವಾದ ಮಂಡಿಸಿದ ಎಜಿ ಪ್ರಭುಲಿಂಗ ನಾವದಗಿ, ಗುರುವಾರ ನಡೆಸಿದ ಮಾತುಕತೆಯಲ್ಲಿ ಸಹಮತ ಮೂಡಿಲ್ಲ. ದರ ನಿಗದಿ ಮಾಡಲು ಸ್ವಲ್ಪ ಸಮಯಾವಕಾಶನೀಡಬನೇಕು ಎಂದು ಕೋರಿದರು.

ಬಲವಂತದ ಕ್ರಮ ಬೇಡ: ಆ ಹಿನ್ನೆಲೆಯಲ್ಲಿ 15 ದಿನ ಸಮಯ ನೀಡಿದ ನ್ಯಾಯಾಲಯ ಬೆಲೆ ನಿಗದಿ ಪಡಿಸುವ ಸಂದರ್ಭದಲ್ಲಿ ಎಲ್ಲ ಪಾಲುದಾರ ಮನವಿಯನ್ನು ಪರಿಗಣಿಸಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ಸಲಹೆ ನೀಡಿದೆ. ಅಲ್ಲಿಯವರೆಗೂ ಅಗ್ರಿಗೇಟರ್ಸ್‌ಗಳ ವಿರುದ್ದ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ.
ಸಹಮತದ ತೀರ್ಮಾನಕ್ಕೆ ಸೂಚನೆ: ಆಪ್ ಆಧಾರಿತ ಆಟೋರಿಕ್ಷಾಗೆ ಸೇವೆಗೆ ನ್ಯಾಯಯುತ ದರ ವಿಧಿಸುವುದಕ್ಕೆ ಸಂಬಂಧಿಸಿದಂತೆ ಸೇವೆ ನೀಡುತ್ತಿರುವ ಓಲಾ ಮತ್ತು ಉಬ್ ಕಂಪನಿಗಳೊಂದಿಗೆ ಸಭೆ ನಡೆಸಿ ಜನರಿಗೆ ಅನುಕೂಲವಾಗುವಂತಹ ಸಹಮತದ ತೀರ್ಮಾನ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ.
ಕೆಲ ಕಾಲ ವಾದ ಆಲಿಸಿದ ಬಳಿಕ ನ್ಯಾಯಪೀಠ, ಪ್ರಕರಣ ಸಂಬಂಧ ಅರ್ಜಿದಾರ ಕಂಪನಿಗಳೊಂದಿಗೆ ಮತ್ತೊಮ್ಮೆ ತುರ್ತಾಗಿ ಸಭೆ ಚರ್ಚಿಸಿದ ನಂತರ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು ಎಂದು ಸರ್ಕಾರ ಹೇಳುತ್ತಿದೆ. ಆದ್ದರಿಂದ ಪ್ರಕರಣದಲ್ಲಿ ಅಂತಿಮ ನಿರ್ಧಾರಕ್ಕೆ ಕೈಗೊಳ್ಳುವ ಮುನ್ನ ತಾತ್ಕಾಲಿಕ ಪರಿಹಾರ ಕ್ರಮ ಕಂಡುಕೊಳ್ಳುವುದು ಅನಿವಾರ್ಯ ಎಂದು ಹೇಳಿ ನ್ಯಾಯಪೀಠ ವಿಚಾರಣೆಯನ್ನು ಶುಕ್ರವಾರಕ್ಕೆ ಬೆಳಗ್ಗೆ 10.30ಕ್ಕೆ ಮುಂದೂಡಿತು.

ಸಹಮತ ಸಾಧಿಸುವರೆಗೂ ಕಂಪನಿಗಳು ಸಹ ಸರ್ಜ್ ಚಾರ್ಜ್ ಮಾಡಬಾರದು. ಅರ್ಜಿದಾರ ಕಂಪನಿಗಳ ವಿರುದ್ಧ ಬಲವಂತದ ಕ್ರಮ ಜರುಗಿಸುವುದಿಲ್ಲ ಎಂಬ ಭರವಸೆಯನ್ನು ರಾಜ್ಯ ಅಡ್ವೋಕೇಟ್ ಅವರು ಮೌಖಿಕವಾಗಿ ನೀಡಬೇಕು ಎಂದು ನ್ಯಾಯಪೀಠ ತಿಳಿಸಿತು.
ನೋಟಿಸ್ ನೀಡದೆ ಕ್ರಮ: ಅರ್ಜಿದಾರರ ಸಂಸ್ಥೆಗಳ ಪರ ವಕೀಲರು, App ಆಧಾರಿತ ಆಟೋರಿಕ್ಷಾ ಸೇವೆ ನೀಡುವುದಕ್ಕೆ ಪರವನಾಗಿ ಅಗತ್ಯವಿಲ್ಲ ಎಂದು ಪ್ರತಿಪಾದಿಸುವ ಪ್ರಕರಣವು ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಾಕಿಯಿದೆ. ಇನ್ನೂ ಓಲಾ ಮತ್ತು ಉಬರ್ App ಮೂಲಕ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸಿರುವುದಕ್ಕೆ ರಾಜ್ಯ ಸರ್ಕಾರವು ಸಮಂಜಸ ಕಾರಣ ನೀಡಿಲ್ಲ.
'ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್ಸ್ ನಿಯಮಗಳು-2016'ರ ನಿಯಮ 2(7) ಅಡಿಯಲ್ಲಿ ಮೋಟಾರು ಕ್ಯಾಬ್ (ಟ್ಯಾಕ್ಸಿ) ವ್ಯಾಖ್ಯಾನದಡಿಗೆ ಆಟೋರಿಕ್ಷಾ ಸಹ ಬರುತ್ತದೆ. ಹಾಗಾಗಿ, ಸೇವೆ ಸ್ಥಗಿತಗೊಳಿಸುವ ಬಗ್ಗೆ ವಿವರಣೆ ಕೇಳಿ ಅ.6ರಂದು ನೀಡಿರುವ ನೋಟಿಸ್ ಮತ್ತು ಸೇವೆ ಸ್ಥಗಿತಗೊಳಿಸಲು ಅ.11ರಂದು ಹೊರಡಿಸಿರುವ ಆದೇಶಕ್ಕೆ ಮಾನ್ಯತೆ ಇಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ನಿಯಮ ಪಾಲಿಸುತ್ತಿಲ್ಲ: ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಆಟೋ ರಿಕ್ಷಾ ಸೇವೆಯು ಟ್ಯಾಕ್ಸಿ ಸೇವೆಯಡಿ ಬರುವುದಿಲ್ಲ. ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್ಸ್ ನಿಯಮಗಳು-2016ರ ನಿಯಮ 4ರ ಅಡಿ ಉಬರ್ ಮತ್ತು ಓಲಾ ಪರವಾನಗಿ ಪಡೆದಿಲ್ಲ. ಉಳಿದ ಆಟೋರಿಕ್ಷಾ ಸೇವೆಗೆ ರಾಜ್ಯ ಸರ್ಕಾರವು ನಿರ್ದಿಷ್ಟ ದರ ನಿಗದಿಪಡಿಸಿದೆ. ಆದರೆ, ಅದನ್ನು ಅರ್ಜಿದಾರ ಕಂಪೆನಿಗಳು ಪಾಲಿಸುತ್ತಿಲ್ಲ ಎಂದು ವಾದಿಸಿದರು.
ಪ್ರಕರಣ: ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್ಸ್ ನಿಯಮಗಳ ಅಡಿ ಟ್ಯಾಕ್ಸಿ ಸೇವೆ ಒದಗಿಸಲು ಓಲಾ ಮತ್ತು ಉಬರ್ ಕಂಪೆನಿಗಳಿಗೆ ಪರವಾನಗಿ ನೀಡಲಾಗಿದೆ. ಆದರೆ, ಆಟೋರಿಕ್ಷಾ ಸೇವೆ ಒದಗಿಸಲು ಪರವಾನಗಿ ಪಡೆದುಕೊಂಡಿಲ್ಲ. ಪರವಾನಗಿ ಪಡೆಯದೆ ಆಟೋ ರಿಕ್ಷಾ ಸೇವೆ ಒದಗಿಸಲಾಗುತ್ತಿದೆ ಎಂದು ಆಕ್ಷೇಪಿಸಿದ್ದ ಸಾರಿಗೆ ಇಲಾಖೆ, ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸುವ ವಿಚಾರವಾಗಿ ವಿವರಣೆ ಕೇಳಿ ಅ.6ರಂದು ನೋಟಿಸ್ ನೀಡಿತ್ತು. ಸೇವೆ ಸ್ಥಗಿತಗೊಳಿಸಲು ಅ.11ರಂದು ಆದೇಶ ಮಾಡಿದೆ. ಅದನ್ನು ಪ್ರಶ್ನಿಸಿ ಅರ್ಜಿದಾರ ಕಂಪನಿಗಳು ಹೈಕೋರ್ಟ್ ಮೊರೆ ಹೋಗಿವೆ.












Click it and Unblock the Notifications