ಕೊರೊನಾ; 15 ದಿನಗಳಲ್ಲಿ ಬೆಂಗಳೂರಿನ ಕಂಟೇನ್ಮೆಂಟ್ ವಲಯಗಳ ಸಂಖ್ಯೆ ಇಳಿಕೆ
ಬೆಂಗಳೂರು, ಆಗಸ್ಟ್ 24: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದು, ಬೆಂಗಳೂರು ನಗರ ಪ್ರದೇಶದಲ್ಲಿಯೂ ಸೋಂಕಿನ ಪ್ರಮಾಣ ಇಳಿಮುಖವಾಗಿರುವ ಸೂಚನೆ ದೊರೆತಿದೆ.
ಕಳೆದ ಹದಿನೈದು ದಿನಗಳಲ್ಲಿ ಬೆಂಗಳೂರು ನಗರ ಪ್ರದೇಶದಲ್ಲಿ ಸಕ್ರಿಯ ಕೋವಿಡ್ 19 ಕಂಟೇನ್ಮೆಂಟ್ ವಲಯಗಳ ಸಂಖ್ಯೆ 27%ರಷ್ಟು ತಗ್ಗಿದೆ. ಆಗಸ್ಟ್ 8ರ ವೇಳೆಗೆ ನಗರದಲ್ಲಿ 159 ಇದ್ದ ಸಕ್ರಿಯ ಕೋವಿಡ್ ಕಂಟೇನ್ಮೆಂಟ್ ಝೋನ್‌ಗಳ ಸಂಖ್ಯೆ ಆಗಸ್ಟ್ 23ರ ವೇಳೆಗೆ 116ಕ್ಕೆ ಇಳಿಕೆಯಾಗಿರುವುದಾಗಿ ಬಿಬಿಎಂಪಿ ಕೋವಿಡ್ 19 ವಾರ್ ರೂಂ ದತ್ತಾಂಶ ಹೇಳುತ್ತಿದೆ.
ಮಹದೇವಪುರ ಪ್ರದೇಶದಲ್ಲಿ ಅತಿ ಹೆಚ್ಚು (27) ಕಂಟೇನ್ಮೆಂಟ್ ವಲಯಗಳಿದ್ದವು. ನಂತರ ಬೊಮ್ಮನಹಳ್ಳಿಯಲ್ಲಿ (24) ಹೆಚ್ಚು ಕಂಟೇನ್ಮೆಂಟ್ ವಲಯಗಳಿದ್ದವು ಎಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.

ಹೆಚ್ಚು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವುದರಿಂದ ಮಹದೇವಪುರ ಪ್ರದೇಶದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿದ್ದವು. ಇದಲ್ಲದೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಇದು ಅತಿ ದೊಡ್ಡ ಕಂಟೇನ್ಮೆಂಟ್ ವಲಯವಾಗಿ ಗುರುತಿಸಿಕೊಂಡಿದೆ. ದಾಸರಹಳ್ಳಿ ವಲಯ ಅತಿ ಪುಟ್ಟ ವಲಯವಾಗಿದ್ದು, ಇಲ್ಲಿ ಕೂಡ ಮೈಕ್ರೋ ಕಂಟೇನ್ಮೆಂಟ್ ವಲಯ ಶೂನ್ಯವಿದೆ.
'ನಗರದ ಹಲವು ಪ್ರದೇಶಗಳಲ್ಲಿ ಕೊರೊನಾ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲಾಗಿದೆ. ಹೀಗಾಗಿ ಕಂಟೇನ್ಮೆಂಟ್ ವಲಯಗಳ ಸಂಖ್ಯೆ ತಗ್ಗಿದೆ. ಯಾವುದೇ ಹೊಸ ವಲಯಗಳನ್ನು ಸೇರಿಸಿಲ್ಲ. ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿಯೂ ಇಳಿಕೆಯಾಗಿದೆ. ಸಹಜವೆಂಬಂತೆ ಮೈಕ್ರೋ ಕಂಟೈನ್ಮೆಂಟ್ ವಲಯಗಳ ಸಂಖ್ಯೆಯೂ ತಗ್ಗಿದೆ' ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ರಣದೀಪ್ ಡಿ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಕೊರೊನಾ ಸೋಂಕಿನ ಅಂದಾಜು ಪಾಸಿಟಿವಿಟಿ ಪ್ರಮಾಣ ಕಳೆದ ವಾರದಲ್ಲಿ 0.53%ರಷ್ಟಿದೆ ಇದೆ ಎಂದು ಹೇಳಿದ್ದಾರೆ.
ಭಾನುವಾರದ ಹೊತ್ತಿಗೆ, 52 ಅಪಾರ್ಟ್‌ಮೆಂಟ್‌ಗಳು, 65 ಮನೆಗಳು/ವಿಲ್ಲಾಗಳು, ಒಂದು ಶಾಲೆ, ಐದು ಹಾಸ್ಟೆಲ್/ಪಿಜಿ/ ಕ್ವಾರ್ಟರ್ಸ್ ಹಾಗೂ ಒಂದು ಮಿಷಿನರಿ ಸಂಸ್ಥೆ ಸಕ್ರಿಯ ಕಂಟೇನ್ಮೆಂಟ್ ವಲಯಗಳಾಗಿ ಗುರುತಿಸಿಕೊಂಡಿವೆ. ಒಟ್ಟಾರೆ 3962 ಮನೆಗಳಲ್ಲಿ 453 ಪಾಸಿಟಿವ್ ಪ್ರಕರಣಗಳಿವೆ. ಆಗಸ್ಟ್ 14ರಿಂದ ನಗರದಲ್ಲಿ ದಿನನಿತ್ಯದ ಪ್ರಕರಣಗಳ ಸಂಖ್ಯೆ 350 ಅನ್ನು ದಾಟಿಲ್ಲದಿರುವುದು ಸಮಾಧಾನಕರ ಸಂಗತಿಯಾಗಿದೆ.
'ಹಲವರ ಪರಿಶ್ರಮದಿಂದ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ. ಕೊರೊನಾ ನಿಯಮಗಳನ್ನು ಪಾಲಿಸುತ್ತಿರುವ ಜನರು, ಬಿಬಿಎಂಪಿ ಅಧಿಕಾರಿಗಳು, ಸಮೀಕ್ಷೆ, ಕಂಟೇನ್ಮೆಂಟ್ ವಲಯಗಳಲ್ಲಿ ಕಣ್ಣಿಟ್ಟಿರುವ ಬಿಬಿಎಂಪಿ ಸಿಬ್ಬಂದಿ, ಹಲವು ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳು, ಸ್ವಯಂ ಸೇವಕರು ಕೊರೊನಾ ನಿಯಂತ್ರಣದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ' ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದರು.

ಕರ್ನಾಟಕದಲ್ಲಿ ಕೊರೊನಾ ಸ್ಥಿತಿಗತಿ
ಕರ್ನಾಟಕದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ರಾಜ್ಯದಲ್ಲಿ ಕೊವಿಡ್-19 ಸೋಂಕಿತರ ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 0.86ರಷ್ಟಿದೆ. ಸೋಮವಾರ ಕೊರೊನಾ ಸೋಂಕಿಗೆ 10 ಮಂದಿ ಸಾವನ್ನಪ್ಪಿದ್ದು, ಮರಣ ಸಂಖ್ಯೆ 37155ಕ್ಕೆ ಏರಿಕೆಯಾಗಿದೆ. ಸೋಮವಾರ ಒಂದೇ ದಿನ 1151 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1442 ಸೋಂಕಿತರು ಗುಣಮುಖರಾಗಿದ್ದಾರೆ.
ಸೋಮವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2939767ಕ್ಕೆ ಏರಿಕೆಯಾಗಿದೆ. ಒಟ್ಟು 2882331 ಸೋಂಕಿತರು ಗುಣಮುಖರಾಗಿದ್ದು. 20255 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕು: ಬೆಂಗಳೂರಿನಲ್ಲಿ ಸೋಮವಾರ 270 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ನಗರದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1235306ಕ್ಕೆ ಏರಿಕೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಸೋಮವಾರ ಒಂದೇ ಒಂದು ಸಾವಿನ ಪ್ರಕರಣ ವರದಿಯಾಗಿಲ್ಲ. ಬೆಂಗಳೂರಿನಲ್ಲಿ ಈವರೆಗೂ 15959 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಸದ್ಯ 7669 ಸಕ್ರಿಯ ಪ್ರಕರಣಗಳಿವೆ.












Click it and Unblock the Notifications