Bengaluru: ಕಾಂಗ್ರೆಸ್ ನಾಯಕರ ಕ್ಷೇತ್ರದಲ್ಲಿ ನಕಲಿ ಮತದಾರರ ಸೇರ್ಪಡೆ, ಎಷ್ಟು ಮಂದಿ?, ಯಾವ ರಾಜ್ಯದವರು? ಅಂಕಿ ಸಂಖ್ಯೆ ತಿಳಿಯಿರಿ
ಬೆಂಗಳೂರಲ್ಲಿ ಮತದಾರರ ದತ್ತಾಂಶ ಕಳ್ಳತನ ಬೆನ್ನಲ್ಲೆ ಈಗ ನಕಲಿ ಮತದಾರರನ್ನು ಪಟ್ಟಿಗೆ ಸೇರಿಸಿದ ಪ್ರಕರಣ ಬೆಳಕಿಗೆ. ಕರ್ನಾಟಕದವರೇ ಅಲ್ಲದ ಸಾವಿರಾರು ಮಂದಿ ಸೇರ್ಪಡೆಯಾಗಿದ್ದಾರೆ. ಅದು ಯಾವ ಕ್ಷೇತ್ರ, ಎಷ್ಟು ಮಂದಿ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು, ಮಾರ್ಚ್ 13: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತದಾರ ಮಾಹಿತಿ ಸಂಗ್ರಹ/ಕಳ್ಳತನ ಪ್ರಕರಣ ಪತ್ತೆಯಾಗಿ ಸಾಕಷ್ಟು ಚರ್ಚೆಗಳು ಆಗಿದ್ದವು. ಅದರ ಬೆನ್ನಲ್ಲೆ ಮತ್ತೊಂದು ಪ್ರಕರಣ ವರದಿಯಾಗಿದೆ. ನಮ್ಮ ರಾಜ್ಯದವರಲ್ಲದ ಸಾವಿರಾರು ಮತದಾರರನ್ನು ಸರ್ಪೇಡೆ ಮಾಡಿರುವ ಬಗ್ಗೆ ಬಿಜೆಪಿ ನಾಯಕರೇ ಧ್ವನಿ ಎತ್ತಿ ದೂರು ನೀಡಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಶಿವಾಜಿನಗರ, ಚಿಕ್ಕಪೇಟೆ ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಮತದಾರರ ಮಾಹಿತಿಯನ್ನು ಎನ್‌ಜಿಓ ಸಂಸ್ಥೆ ಮೂಲಕ ಕಳ್ಳತನ ಮಾಡಿಸಿ ಚುನಾವಣೆ ಹಿನ್ನೆಲೆಯಲ್ಲಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಕಲಿ ಮತದಾರರ ಸೇರ್ಪಡೆ ಆಗಿರುವ ಬಗ್ಗೆ ಸ್ವತಃ ಬಿಜೆಪಿ ನಾಯಕ ಎನ್. ಆರ್. ರಮೇಶ್ ಅವರೇ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಜಯನಗರ ವಿಧಾನಸಭಾ ಕ್ಷೇತ್ರದ ಗುರಪ್ಪನಪಾಳ್ಯ (171), ಜಯನಗರ ಪೂರ್ವ (170) ಮತ್ತು ಭೈರಸಂದ್ರ (169) ವಾರ್ಡ್‌ಗಳ ವ್ಯಾಪ್ತಿಯಲ್ಲಿ ಕೇವಲ ಒಂಬತ್ತೆ ತಿಂಗಳಲ್ಲಿ 2022 ಏಪ್ರಿಲ್ ನಿಂದ ಜನವರಿ 2023ರವರೆಗಿನ ಒಟ್ಟು ಸುಮಾರು 9,153 ಕ್ಕೂ ಹೆಚ್ಚು ಜನರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಆದರೆ ಇವರಲ್ಲಿ ಬಹುತೇಕ ಮಂದಿ ಕರ್ನಾಟಕದವರಲ್ಲ. ಇದರ ಹಿಂದೆ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದಲ್ಲಿ ಬಿಜೆಪಿ ಆಡಳಿತ ಇದೆ. ಈ ಹಿಂದೆ ಮತದಾರರ ದತ್ತಾಂಶ ಕಳ್ಳತನವಾದಾಗ ಬಿಜೆಪಿಯೇ ಮಾಡಿಸಿದೆ ಎಂದು ಕಾಂಗ್ರೆಸ್ ದೂರಿತ್ತು. ಸಾಕಷ್ಟು ಟೀಕೆ ಮಾಡಿತ್ತು. ಈಗ ಹೊಸದಾಗಿ ಮತದಾರರು ಸೇರ್ಪಡೆಯಾದರೆ ಅದು ಚುನಾವಣೆಯಲ್ಲಿ ಆ ಕ್ಷೇತ್ರದ ಅಭ್ಯರ್ಥಿಗೆ ಪೂರಕ ಎನ್ನಬಹುದಾದರೂ, ಜಯನಗರದಲ್ಲಿ ಪ್ರಭಾವವಿರುವುದು ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಅವರದ್ದು. ಹೀಗಾಗಿ ಇಲ್ಲಿ ಅಧಿಕಾರಿಗಳನ್ನು ಬಳಸಿಕೊಂಡು ಕಾಂಗ್ರೆಸ್ ನಾಯಕರಿಂದ ತಮ್ಮ ಹೀಗೆ ನಕಲಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಜೊತೆಗೆ ನಕಲಿ ಮತದಾರರನ್ನು ಸರ್ಪಡೆ ಎಷ್ಟು ಸರಿ ಎಂಬ ಪ್ರಶ್ನೆಯು ಎದ್ದಿದೆ.

ಸೇರ್ಪಡೆಗೊಂಡ ಇವರು ನಕಲಿ ಮತದಾರರು
ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಸೇರ್ಪಡೆಗೊಂಡ ಮತದಾರರ ಪೈಕಿ ಶೇ. 50% ಕ್ಕೂ ಹೆಚ್ಚು ಮಂದಿ ತಮಿಳುನಾಡಿನ ಹೊಸೂರು, ಧರ್ಮಪುರಿ ಮತ್ತು ಕೃಷ್ಣಗಿರಿ ಭಾಗಗಳ ಹಾಗೂ ಬೆಂಗಳೂರಿನ ಹೊರಭಾಗದ ನಿವಾಸಿಗಳಾಗಿದ್ದಾರೆ ಎಂಬುದು ದಾಖಲೆಗಳಿಂದ ಸ್ಪಷ್ಟವಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್. ಆರ್. ರಮೇಶ್ ತಿಳಿಸಿದ್ದಾರೆ.
ಈ ಪ್ರಜಾಪ್ರಭುತ್ವ ವಿರೋಧಿ ಕಾನೂನುಬಾಹಿರ ಕಾರ್ಯದಲ್ಲಿ ಜಯನಗರ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳು ಮತ್ತು ಮೇಲೆ ತಿಳಿಸಿರುವ ಎಲ್ಲಾ 03 ವಾರ್ಡ್ ಗಳ ಕಂದಾಯ ಪರಿವೀಕ್ಷಕರು, ಕಂದಾಯ ವಸೂಲಿಗಾರರು, ಗಣಕಯಂತ್ರ ನಿಯಂತ್ರಕರು ಭಾಗಿಗಳಾಗಿದ್ದು, ಸ್ಥಳೀಯ ರಾಷ್ಟ್ರೀಯ ರಾಜಕೀಯ ಪಕ್ಷವೊಂದರ ನಾಯಕರುಗಳಿಂದ ನಕಲಿ ಮತದಾರರ ಸೇರ್ಪಡೆಗೆ ಇಂತಿಷ್ಟು ಹಣವೆಂದು ಪಡೆದುಕೊಂಡು ಇಂತಹ ಕಾನೂನುಬಾಹಿರ ಕಾರ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
ಆದ್ದರಿಂದ ಭಾಗಿಯಾದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಬೆಂಗಳೂರಿನ ಸ್ಥಳೀಯ ನಿವಾಸಿಗಳಲ್ಲದ ಎಲ್ಲರನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿರುವ ಮತದಾರರ ಪಟ್ಟಿಯಿಂದ ಕೈಬಿಡಲು ಸೂಕ್ತ ಕ್ರಮ ಜರುಗಿಸಬೇಕು. ಈ ಸಂಬಂಧ ಅಧಿಕಾರಿಗಳು ಪ್ರಮಾಣಿಕ ಪರಿಶೀಲನೆ ನಡೆಸಬೇಕು. ಹೀಗೆಂದು ಎನ್. ಆರ್. ರಮೇಶ್ ಅವರು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಹಾಗೂ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರು ಮತ್ತು ಆಡಳಿತಾಧಿಕಾರಿಗಳಿಗೆ ದಾಖಲೆಗಳ ಸಹಿತ ದೂರು ನೀಡಿ ಮನವಿ ಮಾಡಿದ್ದಾರೆ.












Click it and Unblock the Notifications