ಬೆಂಗಳೂರು ಪೊಲೀಸರಿಗೆ ವಾಟ್ಸಪ್‌ನಲ್ಲೂ ದೂರು ಕೊಡಿ
ಬೆಂಗಳೂರು, ಜೂನ್ 15; ತುರ್ತು ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ವಾಟ್ಸಪ್ ಮೂಲಕ ಮಾಹಿತಿ ನೀಡಿದರೆ ಸ್ಪಂದಿಸುವ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಇದಕ್ಕಾಗಿ 112 ಸೇವೆಯನ್ನು ವಾಟ್ಸಪ್ ನಂಬರ್ ಜೊತೆ ಜೋಡಣೆ ಮಾಡಲಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಈ ಮೊದಲು ಸಹ ವಾಟ್ಸಪ್ ಮೂಲಕ ದೂರು ಸ್ವೀಕಾರ ಮಾಡುವ ವ್ಯವಸ್ಥೆ ಇತ್ತು. ಈಗ ಅದನ್ನು ಉನ್ನತೀಕರಿಸಲಾಗಿದ್ದು, ಸಂಕಷ್ಟದಲ್ಲಿದ್ದವರಿಗೆ ಸ್ಪಂದಿಸಲು ಸಹಾಯಕವಾಗಲಿದೆ.

ನಗರ ಪೊಲೀಸ್ ಆಯುಕ್ತರು ತಮ್ಮ ಟ್ವೀಟ್‌ನಲ್ಲಿ ನಮ್ಮ 112 ಉನ್ನತೀಕರಿಸಲು ಮೊದಲ ಹೆಜ್ಜೆಯಾಗಿ ನಾಗರೀಕರು ಇನ್ನು ಮುಂದೆ ನಮ್ಮ 112 ಸೇವೆಯನ್ನು ಬೆಂಗಳೂರು ಪೊಲೀಸರ WhatsApp ನಂಬರ್ 9480801000 ಗೆ ಮಾಹಿತಿ ನೀಡುವುದರ ಮೂಲಕವೂ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.
ಹೊಯ್ಸಳ ಗಸ್ತು ವಾಹನಕ್ಕೆ ಮಾಹಿತಿ; ತುರ್ತು ಸಂದರ್ಭದಲ್ಲಿ ಜನರು 112 ಸಂಖ್ಯೆಗೆ ಕರೆ ಬದಲು ವಾಟ್ಸಪ್‌ನಲ್ಲಿ ಸಂದೇಶ ಕಳಿಸಿದರೆ ಕೂಡಲೇ ಸಂದೇಶವು ಹೊಯ್ಸಳ ವಾಹನ ಸಿಬ್ಬಂದಿಗೆ ನಿಯಂತ್ರಣ ಕೊಠಡಿಯಿಂದ ರವಾನೆಯಾಗಲಿದೆ.
ಇದರಿಂದಾಗಿ ಗಸ್ತಿನಲ್ಲಿರುವ ಪೊಲೀಸರು ತಕ್ಷಣವೇ ಸಂಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡಲು ಅನುಕೂಲವಾಗಲಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಹೇಳಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಬಿ. ದಯಾನಂದ್ ಹೊಯ್ಸಳ ವಾಹನದಲ್ಲಿ ನಗರದಲ್ಲಿ ನಗರದಲ್ಲಿ ಗಸ್ತು ತಿರುಗುವ ಮೂಲಕ 112 ಸಂಖ್ಯೆಯ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ಪಡೆದಿದ್ದರು. ಈಗ ವಾಟ್ಸಪ್ ನಂಬರ್ ಜೊತೆ ಈ ಸಂಖ್ಯೆಯನ್ನು ಜೋಡಿಸಲಾಗಿದೆ.
ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಬಿ. ದಯಾನಂದ 112 ಸಂಖ್ಯೆಯನ್ನು ಮತ್ತಷ್ಟು ಜನಸ್ನೇಹಿಯಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಇದರ ಮೊದಲ ಭಾಗವಾಗಿ ಅದನ್ನು ವಾಟ್ಸಪ್ ನಂಬರ್‌ಗೆ ಜೋಡಣೆ ಮಾಡಿ, ಜನರ ದೂರು ನಿಯಂತ್ರಣ ಕೊಠಡಿಗೆ ತಲುಪುವಂತೆ ಮಾಡಿದ್ದಾರೆ.
"ಬೆಂಗಳೂರು ನಗರದಲ್ಲಿ ಹುಟ್ಟಿ ಬೆಳೆದವ ನಾನು. ನಗರದ ಪೊಲೀಸ್ ವ್ಯವಸ್ಥೆಯನ್ನು ಬಲ್ಲೆ. ಬಹಳಷ್ಟು ಸವಾಲುಗಳು ಇವೆ, ಅದನ್ನು ಎದುರಿಸಲು ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ, ಬದಲಾವಣೆ ತರುತ್ತೇನೆ" ಎಂದು ಬಿ. ದಯಾನಂದ್ ಹೇಳಿದ್ದರು.
"ಪೊಲೀಸ್ ಠಾಣೆಗಳನ್ನು ಜನಸ್ನೇಹಿಗೊಳಿಸಿ ಅಲ್ಲಿಯೇ ಜನ ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತದೆ. ಸಮಸ್ಯೆಗಳಿಗೆ ಪೊಲೀಸ್ ಠಾಣೆಗಳಲ್ಲಿ ಪರಿಹಾರ ದೊರೆಯದಿದ್ದರೆ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳ ಮೊರೆ ಹೋಗುತ್ತಾರೆ. ಅದನ್ನು ತಪ್ಪಿಸುವುದು ಮೊದಲ ಆದ್ಯತೆಯಾಗಿದೆ" ಎಂದು ನೂತನ ಪೊಲೀಸ್ ಆಯುಕ್ತರು ತಿಳಿಸಿದ್ದರು.
"ನಗರದಲ್ಲಿ ರೌಡಿ ಚಟುವಟಿಕೆಗಳನ್ನು ಮಟ್ಟಹಾಕಲು ಹಿಂದಿನ ಪೊಲೀಸ್ ಆಯುಕ್ತರು ಶ್ರಮಿಸಿ ಕೈಗೊಂಡಿರುವ ಕ್ರಮಗಳನ್ನು ಮುಂದುವರೆಸಿ ನಗರವನ್ನು ರೌಡಿ ಚಟುವಟಿಕೆ ಮುಕ್ತವಾಗಿಸಲು ಶ್ರಮಿಸುತ್ತೇನೆ" ಎಂದು ಆಯುಕ್ತರು ಭರವಸೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿಯೂ ಪೊಲೀಸ್ ಆಯುಕ್ತರು ಸಕ್ರಿಯರಾಗಿದ್ದಾರೆ. "ಸಾಮಾಜಿಕ ಜಾಲತಾಣ ಬಳಕೆಯಿಂದ ಎಷ್ಟು ಪ್ರಯೋಜನಗಳಿವೆಯೋ ಅಷ್ಟೇ ದುಷ್ಪರಿಣಾಮಗಳು ಇವೆ. ಆದ್ದರಿಂದ ಒಳ್ಳೆಯದನ್ನು ಬಳಸಿ ಪ್ರಚೋದನಾಕಾರಿ ಪೋಸ್ಟ್, ಕಮೆಂಟ್‌ಗಳ ಮೇಲೆ ನಿಗಾ ವಹಿಸಲಾಗುತ್ತದೆ" ಎಂದು ಅವರು ಹೇಳಿದ್ದರು.
ಈ ಹಿಂದೆ ಪ್ರತಾಪ್ ರೆಡ್ಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದರು. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹಲವು ಅಧಿಕಾರಿಗಳ ಬದಲಾವಣೆ ಆಗಿದೆ. ಆಗ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸಹ ಬದಲಾವಣೆ ಆಗಿದ್ದಾರೆ.












Click it and Unblock the Notifications