ಬಿಬಿಎಂಪಿ ಅವ್ಯವಹಾರ: ಸರ್ಕಾರಕ್ಕೆ 'ಹೈ' ನೋಟಿಸ್
ಬೆಂಗಳೂರು, ಜೂ.18: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ನಾಲ್ಕು ಮಳೆನೀರು ಕಣಿವೆ ಪ್ರದೇಶದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಪ್ರಕರಣವನ್ನು ಸಿಬಿಐಗೆ ವಹಿಸುವ ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ.
ಮಾಜಿ ಮೇಯರ್ ಪಿ ಆರ್ ರಮೇಶ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮೇಲೆ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನ್ಯಾ.ಕೆ ಎಲ್ ಮಂಜುನಾಥ್ ಹಾಗೂ ನ್ಯಾ.ರವಿ ಮಳೀಮಠ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಈ ಆದೇಶ ನೀಡಿದೆ.[ಜಿ ಕೆಟಗೆರಿ ನಿವೇಶನ ಹಂಚಿಕೆ: ಸರ್ಕಾರಕ್ಕೆ 'ಹೈ' ನೋಟಿಸ್]

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಚಲ್ಲಘಟ್ಟ, ಹೆಬ್ಬಾಳ, ಕೋರಮಂಗಲ ಹಾಗೂ ವೃಷಭಾವತಿ ಕಣಿವೆಗಳ 857 ಕಿಮೀ ಮಳೆನೀರು ಕಣಿವೆ ಅಭಿವೃದ್ಧಿಗಾಗಿ 2005-06ರಲ್ಲಿ 350 ಕೋಟಿ ರೂ.ಹಣ ಮಂಜೂರಾಗಿತ್ತು. ಆದರೆ ಮೂರು ವರ್ಷದಲ್ಲಿ ಈ ಮೊತ್ತ 925 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. ನರ್ಮ್ ಯೋಜನೆಯಲ್ಲಿ ಕೈಗೊಂಡ ಈ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಬಿಬಿಎಂಪಿಯ ಮಾಜಿ ಮೇಯರ್ ಪಿ. ಆರ್.ರಮೇಶ್ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ದಾಖಲಿಸಿದ್ದ ಅಕ್ಷೇಪಗಳಿಗೆ ಉತ್ತರ ನೀಡಲು ರಮೇಶ್ ಅವರಿಗೆ ನೋಟಿಸ್ ಜಾರಿ ಮಾಡುವುದನ್ನು ಲೋಕಾಯುಕ್ತ ಪೊಲೀಸರು ವಿಳಂಬ ಮಾಡಿದ್ದರು. ಉತ್ತರ ನೀಡಲು ತಡವಾದ ಕಾರಣ ಲೋಕಾಯುಕ್ತರು ದೂರನ್ನು ರದ್ದುಪಡಿಸಿದ್ದರು. ರದ್ದು ಪಡಿಸಿದ ಹಿನ್ನಲೆಯಲ್ಲಿ ಈ ಹಗರಣದಲ್ಲಿ ಬಿಬಿಎಂಪಿ ಮತ್ತು ಲೋಕಾಯುಕ್ತದ ಅಧಿಕಾರಿಗಳು ಶಾಮೀಲಾಗಿದ್ದು, ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ರಮೇಶ್ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.












Click it and Unblock the Notifications