ಬೆಂಗಳೂರಲ್ಲಿ ಕೋವಿಡ್ ಪರೀಕ್ಷೆ ಇಳಿಕೆ; ಅಂಕಿ-ಸಂಖ್ಯೆಗಳು
ಬೆಂಗಳೂರು, ಮೇ 19; ಬೆಂಗಳೂರು ನಗರದಲ್ಲಿ ಮಂಗಳವಾರ 8,676 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಏಪ್ರಿಲ್ 14ರ ಬಳಿಕ ಮೊದಲ ಬಾರಿಗೆ ಇಷ್ಟು ಕಡಿಮೆ ಹೊಸ ಪ್ರಕರಣ ವರದಿಯಾಗಿದೆ. ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ಇಳಿಮುಖವಾಗಿದೆಯೇ?.
ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಬಿಬಿಎಂಪಿ ಪರೀಕ್ಷೆಗಳನ್ನು ಸಹ ಕಡಿಮೆ ಮಾಡಿದೆ ಎಂಬ ವರದಿಗಳು ಬರುತ್ತಿವೆ. ಅಂಕಿ-ಸಂಖ್ಯೆಗಳು ಸಹ ಇದನ್ನು ಹೇಳುತ್ತಿವೆ. ಸೋಮವಾರ ನಗರದಲ್ಲಿ 27,943 ಪರೀಕ್ಷೆಗಳನ್ನು ಮಾಡಲಾಗಿದೆ.
ಕೆಲವು ದಿನಗಳ ಹಿಂದೆ ಪ್ರತಿದಿನ 1 ಲಕ್ಷ ಪರೀಕ್ಷೆಗಳನ್ನು ಮಾಡಲಾಗುತ್ತಿತ್ತು. ಮಂಗಳವಾರ 50 ಸಾವಿರ ಪರೀಕ್ಷೆ ಮಾಡಲಾಗಿದೆ. ಕೇಂದ್ರ ಸರ್ಕಾರ ಸಂಖ್ಯೆಯ ಬಗ್ಗೆ ಭಯ ಪಡಬೇಡಿ ಪರೀಕ್ಷೆಗಳನ್ನು ಹೆಚ್ಚು ಮಾಡಿ ಎಂದು ಹೇಳಿದೆ. ಆದರೆ ಬಿಬಿಎಂಪಿ ಇದಕ್ಕೆ ವಿರುದ್ಧವಾದ ತಂತ್ರ ಅನುಸರಿಸುತ್ತಿದೆ.

ಬೆಂಗಳೂರಿನ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆಗೆ ಮಾದರಿಗಳನ್ನು ಸಂಗ್ರಹ ಮಾಡುವುದು ನಿಲ್ಲಿಸಲಾಗಿದೆ. ರೋಗ ಲಕ್ಷಣಗಳು ಇರುವ ಜನರ ಮಾದರಿಗಳನ್ನು ಮಾತ್ರ ಸಂಗ್ರಹ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಳೆದ ಎರಡು ತಿಂಗಳ ಅಂಕಿ-ಅಂಶಗಳಿಗೆ ಹೋಲಿಕೆ ಮಾಡಿದರೆ ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಪರೀಕ್ಷೆಗಳ ಸಂಖ್ಯೆ ಕಡಿಮೆಯಾಗಿದೆ. ಮಾರ್ಚ್ 23 ರಿಂದ 29ರ ತನಕ 2.65 ಲಕ್ಷ ಪರೀಕ್ಷೆ ಮಾಡಲಾಗಿತ್ತು.
ಮಾರ್ಚ್ 30ರಿಂದ ಏಪ್ರಿಲ್ 5ರ ತನಕ 4.13 ಲಕ್ಷ ಮಾದರಿಗಳ ಪರೀಕ್ಷೆ ಮಾಡಲಾಗಿತ್ತು. ಏಪ್ರಿಲ್ 6 ರಿಂದ 12ರ ತನಕ 5.28 ಲಕ್ಷ ಪರೀಕ್ಷೆ ಮಾಡಲಾಗಿದೆ. ಏಪ್ರಿಲ್ 27 ರಿಂದ ಮೇ 3ರ ತನಕ 4.60 ಲಕ್ಷ, ಮೇ 4 ರಿಂದ 10ರ ತನಕ 3.86 ಲಕ್ಷ, ಮೇ 11-17ರ ತನಕ 2.9 ಲಕ್ಷ ಮಾದರಿಗಳ ಪರೀಕ್ಷೆ ನಡೆದಿದೆ.
ಕಳೆದ 10 ದಿನಗಳಲ್ಲಿ ನಗರದಲ್ಲಿ ಪೂರ್ವ ವಲಯದಲ್ಲಿ 72,067 ಮತ್ತು ದಾಸರಹಳ್ಳಿ ವಲಯದಲ್ಲಿ 12,863 ಪರೀಕ್ಷೆಗಳನ್ನು ಮಾಡಿರುವುದೇ ಅಧಿಕವಾಗಿದೆ. ಪ್ರತಿಪಕ್ಷಗಳು ಸಹ ಕೋವಿಡ್ ಪರೀಕ್ಷೆಗಳ ಸಂಖ್ಯೆ ಬಗ್ಗೆ ಪ್ರಶ್ನೆಯನ್ನು ಎತ್ತಿವೆ.
ಲಾಕ್‌ಡೌನ್ ಜಾರಿಯಲ್ಲಿ ಇರುವುದರಿಂದ ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪರೀಕ್ಷೆಗಳನ್ನು ಮಾಡುತ್ತಿಲ್ಲ. ಆದ್ದರಿಂದ ಪರೀಕ್ಷೆಗಳ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಬೆಂಗಳೂರಿನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1073072. ಒಟ್ಟು ಸಕ್ರಿಯ ಪ್ರಕರಣ 340965. ಒಟ್ಟು ಮೃತಪಟ್ಟವರು 10020.












Click it and Unblock the Notifications