Green Bengaluru: 30 ವರ್ಷಗಳಲ್ಲಿ 'ಹಸಿರು ಬೆಂಗಳೂರು' ನಿರ್ಮಾಣ!
ಬೆಂಗಳೂರು ನಗರದ ಮೂಲಭೂತ ಸೌಕರ್ಯಗಳ ಸುಧಾರಣೆಗಾಗಿ ಪರಿಣಾಮಕಾರಿ ಯೋಜನೆಗಳನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಬೇಕಿದೆ ಎಂದು 'ಹಸಿರು ಬೆಂಗಳೂರು'ಗಾಗಿ ಸರ್ಕಾರ ನೇಮಿಸಿರುವ ನೋಡಲ್ ಅಧಿಕಾರಿ ಪ್ರೀತಿ ಗೆಹ್ಲೋಟ್ ಹೇಳಿದ್ದಾರೆ. ಎಲ್ಲಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರೆ ಮಾತ್ರ ಮುಂದಿನ 30 ವರ್ಷಗಳಲ್ಲಿ 'ಹಸಿರು ಬೆಂಗಳೂರು' ನಿರ್ಮಾಣ ಮಾಡಬಹುದು ಎಂದು ಹೇಳಿದರು.
ಬ್ರಾಂಡ್ ಬೆಂಗಳೂರು ಕುರಿತು ನಗರದಲ್ಲಿ ಮರ-ಗಿಡಗಳನ್ನು ಹೆಚ್ಚಿಸುವ ಕುರಿತು ಸಂಬಂಧಪಟ್ಟವರು ಮತ್ತು ನಾಗರಿಕರ ಅಭಿಪ್ರಾಯಗಳನ್ನು ಪಡೆಯಲು ನಡೆದ ಚರ್ಚೆಯಲ್ಲಿ ಮಾತನಾಡಿದ ಬಿಬಿಎಂಪಿ ಅರಣ್ಯ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು, ಬೆಂಗಳೂರನ್ನು ಹಸಿರು ನಗರವನ್ನಾಗಿ ಮಾಡಲು ಸರ್ಕಾರ ಯೋಜನೆ ರೂಪಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.

ಮುಂದಿನ ಪೀಳಿಗೆಗೆ ಉತ್ತಮ ವಾತಾವರಣವನ್ನು ಸೃಷ್ಟಿಸಲು ಕ್ರಮ ವಹಿಸಲಾಗುವುದು. ಹಸಿರು ಬೆಂಗಳೂರಿಗೆ ಸಂಬಂಧಿಸಿದಂತೆ ನಾಗರಿಕರಿಂದ ಬಂದಿರುವ ಸಲಹೆಗಳನ್ನು ಅಧ್ಯಯನ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಶಿಕ್ಷಣ ಸಂಸ್ಥೆಗಳ ಜೊತೆ ಒಪ್ಪಂದ
ಬಿಬಿಎಂಪಿ ಈಗಾಗಲೇ ಶಿಕ್ಷಣ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಸಸಿಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ನೀಡಿದೆ ಎಂದರು. ಇದರಿಂದ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಪರಿಸರ ಕಾಪಾಡುವಲ್ಲಿ ತೊಡಗಿಸಿಕೊಂಡಂತೆ ಆಗುತ್ತದೆ ಎಂದು ಹೇಳಿದರು.
ಅನೇಕ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ಕಾರ್ಯಕರ್ತರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಫ್ರೆಂಡ್ಸ್ ಆಫ್ ಲೇಕ್ ಸಹ ಸಂಸ್ಥಾಪಕ ರಾಮ್ ಪ್ರಸಾದ್ ಮಾತನಾಡಿ, ''ನಗರದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಜಾಗದಲ್ಲಿ ಸಸಿ ನೆಡುವುದು, ಕೆರೆಗಳಿಗೆ ಕಲುಷಿತ ನೀರು ಸೇರದಂತೆ ತಡೆಯುವುದು, ಶೇ.100ರಷ್ಟು ತ್ಯಾಜ್ಯ ನೀರು ಸಂಸ್ಕರಣೆ, ಶುದ್ಧೀಕರಣ ಘಟಕಗಳ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಬೇಕು. ಇದರೊಂದಿಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅರಣ್ಯ ಸಂಪತ್ತನ್ನು ಸಂರಕ್ಷಿಸುವುದು ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ಎಸ್‌ಟಿಪಿಗಳ ಕಡ್ಡಾಯ ನಿರ್ಮಾಣವನ್ನು ಎತ್ತಿ ತೋರಿಸಬೇಕು ಎಂದು ಹೇಳಿದರು.
ಸಲಹೆ ನೀಡುತ್ತಿರುವ ವಿದ್ಯಾರ್ಥಿಗಳು
ಬ್ರಾಂಡ್ ಬೆಂಗಳೂರು ನಿರ್ಮಾಣದಲ್ಲಿ ಬಿಬಿಎಂಪಿ ವಿದ್ಯಾರ್ಥಿಗಳಿಂದ ಕೂಡ ಸಲಹೆಗಳನ್ನು ಪಡೆದುಕೊಳ್ಳುತ್ತಿದೆ. ಅನೇಕ ವಿದ್ಯಾರ್ಥಿಗಳು ನಗರದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವುದರ ಜೊತೆ ಪರಿಹಾರಗಳನ್ನು ಕೂಡ ಸೂಚಿಸಿದ್ದಾರೆ. ಅದರಲ್ಲೂ ನಗರದ ಟ್ರಾಫಿಕ್ ವ್ಯವಸ್ಥೆ ಸುಧಾರಿಸಲು ವಿದ್ಯಾರ್ಥಿಗಳು ಪ್ರಮುಖವಾಗಿ ಬೇಡಿಕೆ ಇಟ್ಟಿದ್ದಾರೆ.
ಟ್ರಾಫಿಕ್ ಮುಕ್ತ ಬೆಂಗಳೂರು ನಿರ್ಮಾಣ ಮಾಡುವುದು ಪ್ರಮುಖ ಉದ್ದೇಶವಾಗಿದ್ದು, ಸುರಂಗ ರಸ್ತೆಗಳ ನಿರ್ಮಾಣ, ಫ್ಲೈ ಓವರ್ ನಿರ್ಮಾಣ ಕುರಿತಂತೆ ಹಲವು ಸಲಹೆ ಸೂಚನೆಗಳನ್ನು ನೀಡಲಾಗಿದೆ. ಇದೆಲ್ಲದರ ಜೊತೆಯಲ್ಲಿ ಹಸಿರು ಬೆಂಗಳೂರು ನಿರ್ಮಾಣಕ್ಕೆ ಕೂಡ ಆದ್ಯತೆ ನೀಡಲಾಗಿದೆ.












Click it and Unblock the Notifications