ತಿರುಪತಿ ಲಾಡು ಪ್ರಸಾದದಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ವಿವಾದ; ಸ್ಪಷ್ಟನೆ ನೀಡಿದ ಕೆಎಂಎಫ್
ವೈಎಸ್‌ಆರ್ ಕಾಂಗ್ರಸ್ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡುಗಳನ್ನು ತಯಾರಿಸಲು ದನದ ಕೊಬ್ಬು, ಮೀನಿನ ಎಣ್ಣೆ ಸೇರಿದಂತೆ ಕಳಪೆ ಸಾಮಗ್ರಿಗಳನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರೋಪಿಸಿದ ಬಳಿಕ, ಲ್ಯಾಬ್ ವರದಿ ಕೂಡ ಇದನ್ನು ದೃಢಪಡಿಸಿದೆ. ವಿವಾದಕ್ಕೆ ಸಂಬಂಧಪಟ್ಟಂತೆ ತಿರುಪತಿ ಪ್ರಸಾದ ತಯಾರಿಕೆಗೆ ತುಪ್ಪ ಸರಬರಾಜು ಮಾಡುತ್ತಿರುವ ಕೆಎಂಎಫ್ ಪ್ರತಿಕ್ರಿಯೆ ನೀಡಿದ್ದು, ನಾಲ್ಕು ವರ್ಷಗಳಿಂದ ಲಡ್ಡು ತಯಾರಿಸಲು ನಂದಿನಿ ತುಪ್ಪ ಸರಬರಾಜು ಮಾಡುತ್ತಿಲ್ಲ ಎಂದು ಹೇಳಿದೆ.
ತಿರುಪತಿ ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನವನ್ನು ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ನಿರ್ವಹಿಸುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಟಿಟಿಡಿ ಮಂಡಳಿಯು ಕೆಎಂಎಫ್‌ನಿಂದ ತುಪ್ಪವನ್ನು ಖರೀದಿಸಿಲ್ಲ ಎಂದು ಕೆಎಂಎಫ್ ಸ್ಪಷ್ಟಪಡಿಸಿದೆ. ತೆಲುಗು ದೇಶಂ ಪಕ್ಷ (ಟಿಡಿಪಿ) ಅಧಿಕಾರಕ್ಕೆ ಬಂದ ನಂತರ ತಿರುಪತಿಗೆ ಮತ್ತೆ ಕೆಎಂಎಫ್ ತುಪ್ಪವನ್ನು ಸರಬರಾಜು ಮಾಡುತ್ತಿದೆ ಎಂದು ಸ್ಪಷ್ಟನೆ ಕೊಟ್ಟಿದೆ.

50 ವರ್ಷಗಳಿಂದ ತಿರುಪತಿ ಲಡ್ಡು ತಯಾರಿಕೆಗೆ ನಂದಿನಿ ತುಪ್ಪವನ್ನೇ ಬಳಕೆ ಮಾಡಲಾಗಿತ್ತು. ಆದರೆ ಜಗನ್‌ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ, ಟಿಟಿಡಿ ಕೇಳಿದ ದರಕ್ಕೆ ತುಪ್ಪವನ್ನು ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ಕೆಎಂಎಫ್ ಹೇಳಿದ ಬಳಿಕ, ಇಲ್ಲಿಂದ ತುಪ್ಪ ಖರೀದಿ ಮಾಡುವುದನ್ನು ಟಿಟಿಡಿ ನಿಲ್ಲಿಸಿತ್ತು. ಸ್ಥಳೀಯವಾಗಿ ತುಪ್ಪ ಖರೀದಿ ಮಾಡಲು ಟೆಂಡರ್ ಕರೆದಿತ್ತು. ನಂದಿನಿ ತುಪ್ಪ ಪೂರೈಕೆ ನಿಲ್ಲಿಸಿದ ಬಳಿಕ ತಿರುಪತಿ ಲಡ್ಡುವಿನ ರುಚಿ ಕೂಡ ಬದಲಾಗಿದ್ದು ಭಕ್ತರ ಗಮನಕ್ಕೆ ಬಂದಿತ್ತು.
ಬೆಚ್ಚಿ ಬೀಳಿಸಿದೆ ಲ್ಯಾಬ್ ವರದಿ
ಲ್ಯಾಬ್ ವರದಿಯ ಪ್ರಕಾರ ತಿರುಪತಿ ಲಡ್ಡುವಿನಲ್ಲಿ ಮೀನಿನ ಎಣ್ಣೆ, ದನದ ಕೊಬ್ಬು ಸೇರಿದಂತೆ ಹಲವು ಹಾನಿಕಾರಕ ವಸ್ತುಗಳು ಪತ್ತೆಯಾಗಿದೆ. ಇದು ತಿರುಮಲ ದೇವಸ್ಥಾನದ ಭಕ್ತರನ್ನು ಕೆರಳಿಸಿದೆ. ಭಕ್ತರಿಂದ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ಗಳಿಸುವ ತಿರುಮಲ ದೇವಸ್ಥಾನದಲ್ಲಿ, ಭಕ್ತರ ಭಾವನೆಗಳಿಗೆ ಘಾಸಿಯಾಗುವಂತೆ ದನದ ಕೊಬ್ಬನ್ನು ಲಡ್ಡುವಿನ ತಯಾರಿಕೆಯಲ್ಲಿ ಬಳಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಸಿಎಂ ಚಂದ್ರಬಾಬುನಾಯ್ಡು ಗಂಭೀರ ಆರೋಪ ಮಾಡಿದ್ದು, ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿ ಪಕ್ಷ ಆರೋಪವನ್ನು ನಿರಾಕರಿಸಿದೆ.
ಬುಧವಾರ ಅಮರಾವತಿಯಲ್ಲಿ ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಸಿಎಂ ಚಂದ್ರಬಾಬು ನಾಯ್ಡು, ತಿರುಮಲ ಲಡ್ಡು ಕೂಡ ಗುಣಮಟ್ಟವಿಲ್ಲದ ಪದಾರ್ಥಗಳಿಂದ ತಯಾರಿಸಲ್ಪಟ್ಟಿದೆ, ಪ್ರಸಾದ ತಯಾರಿಸಲು ತುಪ್ಪದ ಬದಲಿಗೆ ಪ್ರಾಣಿಗಳ ಕೊಬ್ಬನ್ನು ಬಳಸಿದ್ದಾರೆ ಎಂದು ಆರೋಪಿಸಿದ್ದರು.
ನಾವು ಅಧಿಕಾರಕ್ಕೆ ಬಂದ ನಂತರ ಪ್ರಸಾದ ತಯಾರಿಸಲು ಶುದ್ಧ ತುಪ್ಪವನ್ನು ಬಳಕೆ ಮಾಡಲಾಗುತ್ತಿದೆ. ದೇವಸ್ಥಾನದಲ್ಲಿ ಎಲ್ಲವನ್ನು ಶುದ್ಧೀಕರಿಸಲಾಗಿದೆ. ಗುಣಮಟ್ಟದಲ್ಲಿ ಕೂಡ ಹೆಚ್ಚಿನ ಸುಧಾರಣೆ ಮಾಡಿದ್ದೇವೆ ಎಂದು ಹೇಳಿದ್ದಾರೆ.











Click it and Unblock the Notifications