ಯಡಿಯೂರಪ್ಪಗೆ ಧರಣಿ ಸ್ಥಳದಲ್ಲೇ ದೀಪಾವಳಿ
ಬೆಂಗಳೂರು, ನ, 2 : ಶಾದಿಭಾಗ್ಯ ಯೋಜನೆಯನ್ನು ಎಲ್ಲ ವರ್ಗಗಳ ಬಡ ಹೆಣ್ಣುಮಕ್ಕಳಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆಸುತ್ತಿರುವ ಅಹೋರಾತ್ರಿ ಧರಣಿ ಶನಿವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯ ಸರ್ಕಾರದಿಂದ ಇದುವರೆಗೂ ಧರಣಿ ಹಿಂಪಡೆಯವಂತೆ ಯಾವುದೇ ಮನವಿ ಬಂದಿಲ್ಲ. ಆದ್ದರಿಂದ ಯಡಿಯೂರಪ್ಪ ಧರಣಿ ಸ್ಥಳದಲ್ಲೇ ದೀಪಾವಳಿ ಆಚರಿಸಲಿದ್ದಾರೆ.
ಗುರುವಾರ ನಗರದ ಆನಂದರಾವ್ ವೃತ್ತದ ಬಳಿಯ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಧರಣಿ ಆರಂಭಿಸಿರುವ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ನೂರಾರು ಕೆಜೆಪಿ ಕಾರ್ಯಕರ್ತರು. ಸರ್ಕಾರ ಬೇಡಿಕೆ ಈಡೇರಿಸುವ ತನಕ ಅಹೋರಾತ್ರಿ ಧರಣಿ ಮುಂದುವರಸುವುದಾಗಿ ಹೇಳಿದ್ದಾರೆ. ಆದರೆ, ಸರ್ಕಾರದಿಂದ ಧರಣಿ ಸ್ಥಗಿತಗೊಳಿಸುವಂತೆ ಯಾವುದೇ ಮನವಿ ಬಂದಿಲ್ಲ.
ಶುಕ್ರವಾರ ಧರಣಿ ಸ್ಥಳದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿ.ಎಸ್.ಯಡಿಯೂರಪ್ಪ ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ನೀಡುವ ತನಕ ಧರಣಿ ಮುಂದುವರಸುತ್ತೇವೆ. ನ.5ರ ಮಂಗಳವಾರದ ವರೆಗೆ ಧರಣಿ ಮುಂದುವರೆಸುವುದಾಗಿ ಹೇಳಿದ್ದಾರೆ. ಇದರಿಂದ ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮವಿದ್ದರೂ ಯಡಿಯೂರಪ್ಪ ಸೇರಿದಂತೆ ಕೆಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು ಮಾತ್ರ ಧರಣಿಯಲ್ಲಿ ನಿರತರಾಗಿರಲು ಮುಂದಾಗಿದ್ದಾರೆ.
ಶಾದಿಭಾಗ್ಯ ಯೋಜನೆ ವಿಸ್ತರಣೆ ಮತ್ತು ಎಪಿಎಲ್ ಕಾರ್ಡ್‌ದಾರರಿಗೆ ಹಿಂದಿನಂತೆ ಪಡಿತರ ವಿತರಣೆ ಮುಂದುವರೆಸುವಂತೆ ಆಗ್ರಹಿಸಿ ನಡೆಸುತ್ತಿರುವ ಹೋರಾಟವನ್ನು ಈ ತಿಂಗಳ 5ರ ನಂತರ ತೀವ್ರಗೊಳಿಸಲು ಉದ್ದೇಶಿಸಲಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಧರಣಿ ಬಳಿಕ ಜಿಲ್ಲಾ ಕ್ಷೇಂದ್ರಗಳಲ್ಲಿ ಕೆಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ. (ಯಡಿಯೂರಪ್ಪ ಧರಣಿ ಬಗ್ಗೆ ಒಂದಿಷ್ಟು)

ಎರಡು ಬೇಡಿಕೆಗಳು
ಶಾದಿಭಾಗ್ಯ ಯೋಜನೆಯನ್ನು ಎಲ್ಲ ಜಾತಿ-ಧರ್ಮಗಳ ಬಡ ಹೆಣ್ಣುಮಕ್ಕಳಿಗೂ ವಿಸ್ತರಿಸಬೇಕು ಹಾಗೂ ಎಪಿಎಲ್ ಪಡಿತರ ಚೀಟಿದಾರರಿಗೆ ಹಿಂದಿನಂತೆ ಪಡಿತರ ವಿತರಣೆ ಮುಂದುವರೆಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ನೂರಾರು ಪಕ್ಷದ ಕಾರ್ಯಕರ್ತರು ಗುರುವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಶನಿವಾರಕ್ಕೆ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಜಾಗ ಬಿಟ್ಟು ಕದಲದ ಬಿಎಸ್ವೈ
ಬೆಂಗಳೂರಿನ ಆನಂದರಾವ್ ವೃತ್ತದ ಬಳಿಯ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಸ್ಥಳದಲ್ಲಿ ದೊಡ್ಡ ಪೆಂಡಾಲ್ ಹಾಕಿ ಧರಣಿಗೆ ವ್ಯವಸ್ಥೆ ಮಾಡಲಾಗಿದೆ. ಊಟಕ್ಕೂ ಹೊರಗೆ ತೆರಳದ ಯಡಿಯೂರಪ್ಪ ತಾವಿದ್ದ ಸ್ಥಳಕ್ಕೆ ಊಟ ತರಿಸಿಕೊಳ್ಳುತ್ತಿದ್ದಾರೆ.

ಟಿವಿ ವ್ಯವಸ್ಥೆ
ಧರಣಿ ಸ್ಥಳದಲ್ಲಿ ಯಡಿಯೂರಪ್ಪ ಪಟ್ಟಾಗಿ ಕುಳಿತಿದ್ದು, ಪಕ್ಷದ ಹಲವಾರು ಮುಖಂಡರು ಬಂದು ಮಾತನಾಡಿಕೊಂಡು ಹೋಗುತ್ತಿದ್ದಾರೆ. ಎರಡನೆ ದಿನವಾದ ಶುಕ್ರವಾರ ಧರಣಿ ನಿರತ ಸ್ಥಳದಲ್ಲಿ ದೊಡ್ಡ ಟೀವಿಯೊಂದರ ವ್ಯವಸ್ಥೆ ಮಾಡಲಾಗಿದ್ದು, ಯಡಿಯೂರಪ್ಪ ಸೇರಿದಂತೆ ಅಲ್ಲಿರುವ ಮುಖಂಡರು ಹಾಗೂ ಕಾರ್ಯಕರ್ತರು ಸುದ್ದಿವಾಹಿನಿ ಮೂಲಕ ಆಗುಹೋಗುಗಳ ಮಾಹಿತಿ ಪಡೆಯುತ್ತಿದ್ದರು.

ಮುಂದಿನ ಹೋರಾಟ
ನ.5ರಂದು ಪಕ್ಷದ ಮುಖಂಡರನ್ನು ಒಳಗೊಂಡ ಕಾರ್ಯಕಾರಿಣಿ ಸಭೆ ಕರೆದು ಮುಂದಿನ ಹೋರಾಟದ ಸ್ವರೂಪ ನಿರ್ಧರಿಸಲು ಯಡಿಯೂರಪ್ಪ ಉದ್ದೇಶಿಸಿದ್ದಾರೆ. ಸದ್ಯದ ಪ್ರಕಾರ 5ರಂದು ಧರಣಿ ಅಂತ್ಯಗೊಳಿಸಿ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳುವ ಸಾಧ್ಯತೆಯಿದೆ. ನಂತರ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲೂ ಹೋರಾಟ ಮುಂದುವರೆಸುವುದರ ಜತೆಗೆ ಇದೇ 25ರಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಲು ತೀರ್ಮಾನಿಸಲಾಗಿದೆ.

ಯಡಿಯೂರಪ್ಪ ವಿರುದ್ಧ ಸಿಎಂ ವಾಗ್ದಾಳಿ
ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿಕಾರ ಕಳೆದುಕೊಂಡ ಮೇಲೆ ಬಡವರ ನೆನಪಾಗಿದೆ, ಶಾದಿ ಭಾಗ್ಯ ಸಂಬಂಧ ಅವರ ಹೋರಾಟ ರಾಜಕೀಯ ಪ್ರೇರಿತ, ಅಗ್ಗದ ಪ್ರಚಾರ ಪಡೆಯುವ ತಂತ್ರ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾದಿ ಭಾಗ್ಯ ಕಾರ್ಯಕ್ರಮವನ್ನು ಬಜೆಟ್‌ನಲ್ಲೇ ಘೋಷಿಸಲಾಗಿತ್ತು. ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಬೇಕಿತ್ತು. ಆಗ ಅವರು ಏಕೆ ಪ್ರಶ್ನಿಸಿಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.