ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ 2000 ರುಪಾಯಿ ನೋಟು ಸ್ವೀಕಾರ: ಸಾರಿಗೆ ನಿಗಮಗಳ ಸ್ಪಷ್ಟನೆ
ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ₹2,000 ನೋಟುಗಳನ್ನು ಸ್ವೀಕರಿಸಲಾಗುವುದು ಎಂದು ಸಾರಿಗೆ ನಿಗಮ ಸ್ಪಷ್ಟಪಡಿಸಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಹೊಸಕೋಟೆ ಡಿಪೋ ಪ್ರಯಾಣಿಕರಿಂದ ₹2,000 ನೋಟುಗಳನ್ನು ಸ್ವೀಕರಿಸದಂತೆ ಆದೇಶ ಹೊರಡಿಸಿದ ಬಳಿಕ ಅಧಿಕಾರಿಗಳು ಈ ಸ್ಪಷ್ಟನೆ ನೀಡಿದ್ದಾರೆ.
"ಕೆಲವು ಗೊಂದಲಗಳ ಕಾರಣದಿಂದ ಹೊಸಕೋಟೆ ಡಿಪೋ ಅಧಿಕಾರಿಗಳು 2000 ರುಪಾಯಿ ನೋಟು ತೆಗೆದುಕೊಳ್ಳದಂತೆ ಆದೇಶ ಹೊರಡಿಸಿತ್ತು. ಆದರೆ ಈ ಆದೇಶವನ್ನು ಹಿಂಪಡೆಯಲಾಗಿದೆ. ಬಿಎಂಟಿಸಿ ಬಸ್‌ಗಳು ₹2,000 ನೋಟುಗಳನ್ನು ಸ್ವೀಕರಿಸುತ್ತಿವೆ." ಎಂದು ಬಿಎಂಟಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಭಾನುವಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಕೂಡ ಪತ್ರಿಕಾ ಹೇಳಿಕೆಯನ್ನು ನೀಡಿದ್ದು, ನಿಗಮದ ಬಸ್‌ಗಳು ಪ್ರಯಾಣಿಕರಿಂದ ₹ 2,000 ನೋಟುಗಳನ್ನು ಸ್ವೀಕರಿಸುವುದನ್ನು ಮುಂದುವರಿಸುತ್ತವೆ ಎಂದು ಸ್ಪಷ್ಟಪಡಿಸಿದೆ. "ಕೆಎಸ್‌ಆರ್‌ಟಿಸಿ ₹2000 ನೋಟುಗಳನ್ನು ತೆಗೆದುಕೊಳ್ಳದಂತೆ ಸಿಬ್ಬಂದಿಗೆ ಅಂತಹ ಯಾವುದೇ ಆದೇಶವನ್ನು ನೀಡಿಲ್ಲ" ಎಂದು ಹೇಳಿಕೆಯಲ್ಲಿ ಸ್ಪಷ್ಟನೆ ಕೊಟ್ಟಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಮೇ 19 ರಂದು ₹2,000 ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿತ್ತು. ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲು ಅಥವಾ ಯಾವುದೇ ಬ್ಯಾಂಕ್‌ನಲ್ಲಿ ಒಂದು ಬಾರಿಗೆ 20000 ರುಪಾಯಿವರೆಗೆ 2000 ರುಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30ರೊಳಗೆ ಕಾಲಾವಕಾಶ ನೀಡಿದೆ.
2000 ರುಪಾಯಿಗಳ ನೋಟು ಚಲಾವಣೆ ಹೆಚ್ಚಳ
2000 ರುಪಾಯಿಗಳ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದ ಬಳಿಕ ನೋಟುಗಳ ಬಳಕೆ ಹೆಚ್ಚಾಗಿದೆ. ಪೆಟ್ರೋಲ್ ಬಂಕ್, ಹೋಟೆಲ್ ಸೇರಿದಂತೆ ಹಲವು ಕಡೆಗಳಲ್ಲಿ ಹೆಚ್ಚಾಗಿ 2000 ರುಪಾಯಿ ನೋಟುಗಳನ್ನು ನೀಡಲಾಗುತ್ತಿದ್ದು, ವ್ಯಾಪಾರಸ್ಥರು ಕೂಡ ಗೊಂದಲಕ್ಕೆ ಬಿದ್ದಿದ್ದಾರೆ.
ಹಲವು ಕಡೆಗಳಲ್ಲಿ 2000 ರುಪಾಯಿ ನೋಟುಗಳನ್ನು ತೆಗೆದುಕೊಳ್ಳಲು ವ್ಯಾಪಾರಸ್ಥರು ನಿರಾಕರಿಸುತ್ತಿದ್ದಾರೆ ಇದು ಗಲಾಟೆಗಳಿಗೂ ಕೂಡ ಕಾರಣವಾಗಿದೆ. ಪ್ರತಿದಿನ ಕೂಡ ಇಂತಹ ಒಂದಿಲ್ಲೊಂದು ಘಟನೆಗಳು ವರದಿಯಾಗುತ್ತಲೇ ಇವೆ.
ಬಸ್‌ಗಳಲ್ಲಿ ಕೂಡ ಈ ನೊಟುಗಳನ್ನು ಸ್ವೀಕರಿಸುತ್ತಾರ ಇಲ್ಲವಾ ಎನ್ನುವ ಗೊಂದಲ ಹೆಚ್ಚಾಗಿತ್ತು. ಈಗ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನೋಟುಗಳನ್ನು ಸ್ವೀಕರಿಸುವ ಬಗ್ಗೆ ಸ್ಪಷ್ಟನೆ ಸಿಕ್ಕಿರುವುದು ಪ್ರಯಾಣಿಕರಿಗೆ ಗೊಂದಲ ಪರಿಹಾರವಾದಂತಾಗಿದೆ. ಯಾವುದೇ ನಿರ್ವಾಹಕರು 2000 ರುಪಾಯಿ ನೋಟುಗಳನ್ನು ತೆಗೆದುಕೊಳ್ಳಲು ನಿರಾಕರಿಸುವಂತಿಲ್ಲ ಎಂದು ಹೇಳಿದೆ.











Click it and Unblock the Notifications