ಬೆಂಗಳೂರಿನಲ್ಲಿ 'ಮದ್ಯ'ರಾತ್ರಿ ಅವಧಿ ಒಂದು ವರ್ಷ ವಿಸ್ತರಣೆ
ಬೆಂಗಳೂರು, ಜೂ. 7 : ಬೆಂಗಳೂರಿಗರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಉದ್ಯಾನನಗರಿಯಲ್ಲಿ ಮೂರು ತಿಂಗಳ ಅವಧಿಗೆ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದ 'ನೈಟ್‌ಲೈಫ್ ಅನ್ನು ಒಂದು ವರ್ಷದ ಮಟ್ಟಿಗೆ ವಿಸ್ತರಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಈ ಕುರಿತ ಅಧಿಕೃತ ಆದೇಶ ಮಾತ್ರ ಹೊರಬೀಳಬೇಕಾಗಿದೆ.
ಶುಕ್ರವಾರ ವಿಧಾನಸೌಧದಲ್ಲಿ ನೈಟ್ ಲೈಫ್ ಅವಧಿ ವಿಸ್ತರಣೆ ಮಾಡುವ ಕುರಿತು ಸರ್ಕಾರದ ಮುಖ್ಯಕಾರ್ಯಸದರ್ಶಿ ಕೌಶಿಕ್ ಮುಖರ್ಜಿ ಅಧ್ಯಕ್ಷತೆಯಲ್ಲಿ ಸಭೆಯ ನಡೆಯಿತು. ಸಭೆಯಲ್ಲಿ ಅಬಕಾರಿ, ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಭಾಗವಹಿಸಿದ್ದರು. [ಬೆಂಗಳೂರಿನಲ್ಲಿ ಬಾರ್ 1 ಗಂಟೆವರಗೆ ಓಪನ್!]

ನೈಟ್ ಲೈಫ್ ಅವಧಿ ವಿಸ್ತರಣೆ ಮಾಡುವ ಕುರಿತು ಸಭೆಯಲ್ಲಿ ಪೊಲೀಸ್, ಅಬಕಾರಿ ಇಲಾಖೆಗಳ ಅಭಿಪ್ರಾಯ ಸಂಗ್ರಹಿಸಲಾಯಿತು. ಪ್ರಸ್ತುತ ಬೆಂಗಳೂರು ವ್ಯಾಪ್ತಿಯಲ್ಲಿ ಜಾರಿಯಲ್ಲಿರುವ ಈ ವ್ಯವಸ್ಥೆಯನ್ನು ಒಂದು ವರ್ಷದ ಮಟ್ಟಿಗೆ ಅಂದರೆ 2014ರ ಜೂನ್ 6ರಿಂದ 2015ರ ಜೂನ್ 6ವರೆಗೆ ವಿಸ್ತರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ['ಮದ್ಯ'ರಾತ್ರಿ ಅವಧಿ ವಿಸ್ತರಣೆಗೆ ಬಿಜೆಪಿ ಅಸಮಾಧಾನ]
ಬೆಂಗಳೂರು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಗುರುವಾರ ಸರ್ಕಾರಕ್ಕೆ ನೈಟ್ ಲೈಫ್ ಅವಧಿ ವಿಸ್ತರಣೆ ಮಾಡಿದರೆ, ಕಾನೂನು, ಸುವ್ಯವಸ್ಥೆಗೆ ತೊಂದರೆ ಇಲ್ಲ ಎಂದು ವರದಿ ನೀಡಿದ್ದರು. ಶುಕ್ರವಾರ ನಡೆದ ಸಭೆಯಲ್ಲಿ ನೈಟ್ ಲೈಫ್ ವಿಸ್ತರಣೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರ ಈ ಕುರಿತು ಸೋಮವಾರದ ನಂತರ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ.
ಏನಿದು ನೈಟ್ ಲೈಫ್ : ಉದ್ಯಾನ ನಗರಿಯಲ್ಲಿ ಮಧ್ಯರಾತ್ರಿ 1 ಗಂಟೆಯ ವರೆಗೆ ಪಬ್, ಬಾರ್, ರೆಸ್ಟೋರೆಂಟ್ ಕಾರ್ಯನಿರ್ವಹಿಸಲು ಸರ್ಕಾರ ಮಾರ್ಚ್ ನಲ್ಲಿ ಒಪ್ಪಿಗೆ ನೀಡಿತ್ತು. ಆದರೆ, ಶನಿವಾರ ಮತ್ತು ಭಾನುವಾರ ಮಾತ್ರ ಈ ಸೇವೆ ಲಭ್ಯವಿರುತ್ತದೆ ಎಂದು ಸ್ಪಷ್ಟಪಡಿಸಿತ್ತು. [ಬೆಂಗಳೂರಿನ ರಾತ್ರಿ 'ಬಾರ್' ಅವಧಿ ಹೆಚ್ಚಾಗಲಿದೆ]
ಬೆಂಗಳೂರಿನಲ್ಲಿ ನೈಟ್ ಲೈಫ್ ಅವಧಿ ವಿಸ್ತರಣೆ ಮಾಡಬೇಕೆಂಬುದು ಕಾರ್ಪೋರೆಟ್ ಸಂಸ್ಥೆಗಳ ಬಹುದಿನಗಳ ಬೇಡಿಕೆಯಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಒಪ್ಪಿಗೆ ನೀಡಿದ್ದರು. ಇದು ಕಾಂಗ್ರೆಸ್ ಮತ್ತು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಎಂ.ವಿ.ರಾಜಶೇಖರ್ ರಂತಹ ಕಾಂಗ್ರೆಸ್ ಹಿರಿಯ ಮುಖಂಡರು ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಮೂರು ತಿಂಗಳ ತನಕ ಪ್ರಾಯೋಗಿಕವಾಗಿ ಈ ಸೇವೆ ಲಭ್ಯವಿರುತ್ತದೆ. ಈ ಹಂತದಲ್ಲಿ ಪರಿಣಾಮಗಳನ್ನು ಪರಿಶೀಲಿಸಿದ ನಂತರ ವಾರದ ಏಳು ದಿನವೂ ತಡರಾತ್ರಿವರೆಗೆ ಸೇವೆಯನ್ನು ವಿಸ್ತರಿಸುವ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದರು. ಸದ್ಯ ಸರ್ಕಾರ ವಾರದ ಏಳುದಿನಗಳಿಗೂ ಇದನ್ನು ವಿಸ್ತರಿಸಲಿದೆಯೇ ಕಾದು ನೋಡಬೇಕು.











Click it and Unblock the Notifications