ಶ್ರೀಕೃಷ್ಣ ಜನ್ಮಾಷ್ಠಮಿಗೆ ಡಿ.ಜೆ. ಹಳ್ಳಿಯಲ್ಲಿ ಗಲಭೆಗೆ ರೂಪಗೊಂಡಿತ್ತು ಸಂಚು !
ಬೆಂಗಳೂರು, ಫೆಬ್ರವರಿ 23: ಶ್ರೀಕೃಷ್ಣ ಜನ್ಮಾಷ್ಠಮಿ ದಿನವೇ ಬೆಂಗಳೂರಿನಲ್ಲಿ ಗಲಭೆ ಮಾಡಲಿಕ್ಕೆ ರೂಪಗೊಂಡಿತ್ತುಸಂಚು. ಸಚಿವ ಮುರುಗೇಶ್ ನಿರಾಣಿ ಅವರು ಅನ್ಯ ಕೋಮಿನ ಬಗ್ಗೆ ಹಾಕಿಕೊಂಡಿದ್ದ ಒಂದು ಪೋಸ್ಟ್ ಇಂತದ್ದೊಂದು ಸಂಚಿಗೆ ನಾಂದಿ ಹಾಡಿತ್ತು. ಶಾಸಕ ಅಖಂಡ ಶ್ರೀನಿವಾಸ್ ಅವರ ಬಾಮೈದ ನವೀನ್ ಪ್ರವಾದಿ ಮಹಮದ್ ಬಗ್ಗೆ ಹಾಕಿಕೊಂಡಿದ್ದ ಪೋಸ್ಟ್ ನ್ನೇ ದಾಳವಾಗಿ ಬಳಿಸಿ ಗಲಭೆಗೆ ಪ್ರಚೋದನೆ ನೀಡಿದರು. ಇದರ ರುವಾರಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಎಸ್‌ಡಿಪಿಐ ಮುಖಂಡರು !
ರಾಜಧಾನಿ ಬೆಂಗಳೂರಿನಿನ ನಿದ್ದೆ ಗೆಡಿಸಿದ ಡಿ.ಜೆ.ಹಳ್ಳಿ, ಕೆ.ಜಿ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA ) iಇತ್ತೀಚೆಗೆ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿರುವ ತನಿಖೆಯ ಅಂಶಗಳು. ಕಳೆದ ಫೆ. 10 ರಂದು ಎನ್ಐಎ ಅಧಿಕಾರಿಗಳು ಡಿ.ಜೆ. ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆಗೆ ಸಂಬಂಧಿಸಿದಂತೆ 247 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ದೋಷಾರೋಪ ಪಟ್ಟಿಯನ್ನು ಪಡೆದಿರುವ ಖಾಸಗಿ ಸುದ್ದಿವಾಹಿನಿ ಅದರ ಅಂಶಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ರಾಷ್ಟ್ರ ಮಟ್ಟದಲ್ಲಿ ಬೆಂಗಳೂರನ್ನು ಸುದ್ದಿ ಕೇಂದ್ರಕ್ಕೆ ತಂದ ಡಿ.ಜೆ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಮೊದಲ ಆರೋಪಿ ಫೈರೋಜ್ ಪಾಷಾ, 25 ನೇ ಆರೋಪಿ ಷರೀಪ್ ಜತೆಗೂಡಿ ಗಲಭೆಗೆ ಸಂಚು ರೂಪಿಸಿದ್ದಾರೆ. ಇದಾದ ಬಳಿಕ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಲು ತೀರ್ಮಾನಿಸಿದ್ದಾರೆ. ಅದರಂತೆ ಫೈರೋಜ್ ಪಾಷಾ ಫೇಸ್ ಬುಕ್ ಅಕೌಂಟ್ ನಿಂದಲೇ ಪೋಸ್ಟ್ ಗಳನ್ನು ಹಾಕುತ್ತಿದ್ದರು. ಆಗಸ್ಟ್ 11 ಹಿಂದೂಗಳ ಪಾಲಿಗೆ ಪ್ರಮುಖ ದಿನ. ಶ್ರೀಕೃಷ್ಣ ಜನ್ಮಾಷ್ಠಮಿ ಆಚರಿಸುವ ಕಾರಣ ಇದೇ ದಿನ ಗಲಭೆ ನಡೆಸಲು ಸಂಚು ರೂಪಿಸಿದ್ದರು ಎಂಬುದು ಎನ್‌ಐಎ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ .
ಸಂಚು ರೂಪಗೊಂಡ ವೇಳೆಯಲ್ಲಿಯೇ ಸಚಿವ ಮುರುಗೇಶ್ ನಿರಾಣಿ ಅವರ ಫೇಸ್ ಬುಕ್ ಖಾತೆಯಲ್ಲಿ ಮಹಮದ್ ವಿವಾದತ್ಮಕ ಪೋಸ್ಟ್ ಹಾಕಲಾಗಿತ್ತು. ಇದಕ್ಕೆ ಕೆಟ್ಟ ಪದಗಳಿಂದ ನಿಂದನೆ ಮಾಡಲಾಗಿತ್ತು. ಈ ಎಲ್ಲಾ ವಿಡಿಯೋ ಕ್ಲಿಪ್ ಜೋಡಿಸಿ ಶಾಸಕ ಅಖಂಡ ಶ್ರೀನಿವಾಸ್ ಅವರ ಬಾಮೈದ ನವೀನ್ ಫೇಸ್ ಬುಕ್ ಖಾತೆಗೆ ಟ್ಯಾಗ್ ಮಾಡಲಾಗಿತ್ತು. ಫೈರೋಜ್ ಪಾಷಾ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದ ನವೀನ್ ಪ್ರವಾದಿ ಮಹಮದ್ ಕುರಿತ ಕಾರ್ಟೂನ್ ನ್ನು ಪ್ರತಿಯಾಗಿ ಪೋಸ್ಟ್ ಮಾಡಿದ್ದ. ಇದೇ ಪೋಸ್ಟ್ ಗಲಭೆಗೆ ದಾಳವನ್ನಾಗಿ ಬಳಿಸಿಕೊಂಡಿದ್ದೇ ಗಲಭೆಗೆ ಕಾರಣವಾಯಿತು ಎಂದು ಎನ್ಐಎ ಅಧಿಕಾರಿಗಳು ತನಿಖಾ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಡಿ.ಜೆ.ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಶೇಷ ತನಿಖಾ ತಂಡ ರಚಿಸಿದ್ದರು. ಭಯೋತ್ಪಾದನೆ ಕರಿನೆರಳು ಕಂಡು ಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಎಐಎಗೆ ಹಸ್ತಾಂತರವಾಗಿತ್ತು. ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದ ಎನ್ಐಎ ಅಧಿಕಾರಿಗಳು ಸುಮಾರು 120 ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಪಿಎಫ್ಐ ಮತ್ತು ಎಸ್ ಡಿಪಿಐ ಮುಖಂಡರ ನಿವಾಸಗಳ ಮೇಲೆ ದಾಳಿ ನಡೆಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು.
ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖಾ ವರದಿಯನ್ನು ಎನ್‌ಐಎ ಅಧಿಕಾರಿಗಳು ಕೆಲ ದಿನಗಳ ಹಿಂದೆ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಡಿ. ಜೆ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ 109 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಕೆ.ಜೆ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ 138 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.