New year 2024: ಹೊಸ ವರ್ಷ ಸ್ವಾಗತಿಸಲು ಸಜ್ಜಾದ ಉದ್ಯಾನನಗರಿ-ಪೊಲೀಸ್ ಸರ್ಪಗಾವಲು ಹೇಗಿರಲಿದೆ ಗೊತ್ತಾ?

ಬೆಂಗಳೂರು, ಡಿಸೆಂಬರ್‌, 31: ಇನ್ನೇನು ಕೆಲವೇ ಗಂಟೆಗಳಲ್ಲಿ 2023 ಮುಗಿದು 2024ಕ್ಕೆ ದಾಪುಗಾಲಿಡಲಿದ್ದೇವೆ. ಅದರಲ್ಲಿಯೂ ರಾಜ್ಯ ರಾಜಧಾನಿ ಬೆಂಗಳೂರಿನ ಮಂದಿ 2024ರ ಸ್ವಾಗತಕ್ಕೆ ಕಾದುಕುಳಿತಿದ್ದಾರೆ. ಇಲ್ಲಿ ಸಂಭ್ರಮಾಚರಣೆಗಳು ತುಸು ಜೋರಾಗಿರುವ ಹಿನ್ನೆಲೆ ಪೊಲೀಸ್‌ ಇಲಾಖೆ ಸನ್ನದ್ಧವಾಗಿದೆ. ಆ ಕ್ರಮಗಳು ಯಾವುವು ಅಂತೀರಾ. ಇಲ್ಲಿವೆ ನೋಡಿ ನೀವು ಗಮನಿಸಬೇಕಾದ ಪ್ರಮುಖ ಅಂಶಗಳು.

ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆ, ರೆಸಿಡೆನ್ಸಿ ರಸ್ತೆ, ಚರ್ಚ್‌ ಸ್ಟ್ರೀಟ್‌, ಕೋರಮಂಗಲದಲ್ಲಿ ಹೊಸ ವರ್ಷಾಚರಣೆ ಸಂಭ್ರಾಮಾಚರಣೆ ಸ್ವಲ್ಪ ಜೋರಾಗಿಯೇ ಇರಲಿದೆ. ಅಲ್ಲದೆ ಈ ಪ್ರದೇಶಗಳಲ್ಲಿ ಹೆಚ್ಚಿನ ಜನರು ಸೇರುವ ನಿರೀಕ್ಷೆಯಿದ್ದು, ಪೊಲೀಸರು ಭಾರೀ ಭದ್ರತೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಹೆಚ್ಚುವರಿಯಾಗಿ 400 ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಸಂಭ್ರಮಾಚರಣೆ ನಡೆಯುವ ಪ್ರದೇಶದಲ್ಲಿ ಪೊಲೀಸರು ಶನಿವಾರ ರಾತ್ರಿಯೇ ಪರಿಶೀಲನೆ ನಡೆಸಿದ್ದು, ಪಾನಮತ್ತ ಚಾಲಕರ ಪತ್ತೆಗೆ 48 ವಿಶೇಷ ತಂಡ ರಚನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

New year 2024: Bengaluru people ready to welcome the New Year, How is the police security?

ಸಾರ್ವಾಜನಿಕ ಸ್ಥಳಗಳಲ್ಲಿ ಡಿಸೆಂಬರ್‌ 31ರಂದು ರಾತ್ರಿ 1 ಗಂಟೆರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ಇದೆ ಎಂದು ಪೊಲೀಸ್‌ ಕಮಿಷನರ್‌ ಬಿ.ದಯಾನಂದ್‌ ತಿಳಿಸಿದ್ದಾರೆ. ಮದ್ಯದಂಗಡಿಗಳ ವಹಿವಾಟಿಗೆ ರಾತ್ರಿ 11 ಗಂಟೆಯವರೆಗೂ ಅವಕಾಶವಿದೆ. ಬಾರ್‌ ಅಂಡ್‌ ರೆಸ್ಟೋರೆಂಟ್‌, ಪಬ್‌, ಹೋಟೆಲ್‌ ಹಾಗೂ ಇತರೆ ವ್ಯಾಪಾರ ಸ್ಥಳಗಳನ್ನು ರಾತ್ರಿ 1 ಗಂಟೆಯೊಳಗೆ ಬಂದ್‌ ಮಾಡಬೇಕು. ನಿಯಮ ಮೀರಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌, ಇಂದಿರಾನಗರ, ಕೋರಮಂಗಲದಲ್ಲಿ ವೈದ್ಯರು, ಬೆಸ್ಕಾಂ ಸಿಬ್ಬಂದಿ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳೂ ಪೊಲೀಸರ ಜೊತೆ ಇರಲಿದ್ದಾರೆ. ಸ್ಥಳದಲ್ಲಿ ಅಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಭದ್ರತೆಗೆ ಇಬ್ಬರು ಹೆಚ್ಚುವರಿ ಪೊಲೀಸ್‌ ಆಯುಕ್ತರು 15 ಮಂದಿ ಡಿಸಿಪಿಗಳು, 45 ಎಸಿಪಿಗಳು, 160 ಇನ್‌ಸ್ಪೆಕ್ಟರ್‌ಗಳು, 600 ಸಬ್‌ ಇನ್ಸ್‌ಸ್ಪೆಕ್ಟರ್‌ಗಳು, 600 ಎಎಸ್‌ಐ, 1,800 ಹೆಡ್‌ ಕಾನ್ಸ್‌ಟೇಬಲ್‌, 5,200 ಕಾನ್ಸ್‌ಟೇಬಲ್‌ಗಳನ್ನು ಭದ್ರತೆಗೆ ಬಳಿಕೆ ಮಾಡಿಕೊಳ್ಳಲಾಗುತ್ತಿದೆ. ಎಂಜಿ ರಸ್ತೆ ಸುತ್ತಮುತ್ತ 3 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇನ್ನು ಸಂಭ್ರಮಾಚರಣೆ ನಡೆಯುವ ಪ್ರದೇಶದಲ್ಲಿ ಮಹಿಳೆ ಸುರಕ್ಷಾ ದ್ವೀಪ ತೆರೆಯಲಾಗಿದೆ. ಮಕ್ಕಳು ಕಾಣೆಯಾದರೆ ನೆರವು ನೀಡಲು ಅಲ್ಲಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ. ವಾಚ್‌ ಟವರ್‌ಗಳ ನಿರ್ಮಾಣ ಮಾಡಲಾಗಿದೆ.

ಹೊಸವರ್ಷ ಸಂಭ್ರಮಾಚರಣೆಗೆ ಬರುವವರಿಗೆ ಅನುಕೂಲವಾಗುವಂತೆ ಇಂದು ಮೆಟ್ರೋ ಸಂಚಾರವನ್ನು ರಾತ್ರಿ 2 ಗಂಟೆವರೆಗೆ ವಿಸ್ತರಿಸಲಾಗಿದೆ. ಆದರೆ ಈ ಹೆಚ್ಚುವರಿ ಸಮಯದಲ್ಲಿ ಎಂಜಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಂದ್‌ ಮಾಡಲಾಗುತ್ತದೆ. ಪೊಲೀಸ್‌ ಇಲಾಖೆ ಸೂಚನೆ ಮೇರೆಗೆ ಭಾನುವಾರ ರಾತ್ರಿ 11ರ ಬಳಿಕ ಎಂಜಿ ರಸ್ತೆ ಮೆಟ್ರೊ ನಿಲ್ದಾಣ ಬಂದ್ ಆಗಲಿವೆ. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ.

ಇನ್ನು ಪ್ರತಿ ದಿನ ರಾತ್ರಿ 11:30ಕ್ಕೆ ಇದ್ದ ಕೊನೆಯ ರೈಲು ಸೇವೆಯನ್ನು ಡಿಸೆಂಬರ್‌ 31ರಂದು ರಾತ್ರಿ 2 ಗಂಟೆವರೆಗೂ ವಿಸ್ತರಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಪ್ರತಿ 15 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚಾರ ಮಾಡಲಿದೆ. ಎಲ್ಲ ನಾಲ್ಕು ಟರ್ಮಿನಲ್‌ಗಳಿಂದ ರಾತ್ರಿ 1:30ಕ್ಕೆ ಕೊನೆಯ ಮೆಟ್ರೋ ರೈಲುಗಳು ಹೊರಡಲಿವೆ. ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ನಾಲ್ಕು ಟರ್ಮಿನಲ್‌ಗಳಿಗೆ 2:15ಕ್ಕೆ ಕೊನೇ ಮೆಟ್ರೋಗಳು ಹೊರಡಲಿವೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಿನಿಟಿ ಮತ್ತು ಕಬ್ಬನ್‌ ಪಾರ್ಕ್‌ ನಿಲ್ದಾಣಗಳಿಂದ ಪ್ರಯಾಣಿಸುವವರಿಗೆ 50 ರೂಪಾಯಿ ಮೊತ್ತದ ಕಾಗಾದದ ಟಿಕೆಟ್‌ ವಿತರಣೆ ಮಾಡಲಾಗುತ್ತದೆ. ಕಾಗಾದದ ಟಿಕೆಟ್‌ಗಳನ್ನು ಅಂದು ಮುಂಚಿತವಾಗಿಯೇ ಪಡೆಯಬೇಕು. ಮಧ್ಯರಾತ್ರಿ ಟಿಕೆಟ್‌ ವಿತರಣೆ ಇರುವುದಿಲ್ಲ. ಸ್ಮಾರ್ಟ್‌ಕಾರ್ಡ್‌ ಮತ್ತು ಕ್ಯೂಆರ್‌ ಕೋಡ್‌ ಟಿಕೆಟ್‌ ಹೊಂದಿರುವ ಪ್ರಯಾಣಿಕರು ಎಂದಿನಂತೆ ರಿಯಾಯಿತಿ ದರದಲ್ಲಿ ಪ್ರಯಾಣ ಮಾಡಬಹುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್‌ ಮಾರ್ಕ್ಸ್‌ ರಸ್ತೆ ಹಾಗೂ ಚರ್ಚ್‌ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯಲಿದ್ದು, ಡಿಸೆಂಬರ್‌ 31ರಂದು ರಾತ್ರಿ 8 ರಿಂದ ಮಧ್ಯರಾತ್ರಿ 1 ಗಂಟೆವರೆಗೆ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆ ನಿರ್ಬಂಧಿಸಲಾಗಿದೆ. ಎಂಜಿ ರಸ್ತೆಯ ಅನಿಲ್‌ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್‌ ಜಂಕ್ಷನ್‌ವರೆಗೆ ಬ್ರಿಗೇಡ್‌ ರಸ್ತೆಯಲ್ಲಿ ಕಾವೇರಿ ಎಂಪೋರಿಯಂನ ಜಂಕ್ಷನ್‌ನಿಂದ ಅಪೇರಾ ಜಂಕ್ಷನ್‌ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಚರ್ಚ್‌ ಸ್ಟ್ರೀಟ್‌ನಲ್ಲಿ ಬ್ರಿಗೇಡ್‌ ರಸ್ತೆಯ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ವರೆಗೆ, ರೆಸ್ಟ್‌ಹೌಸ್‌ ರಸ್ತೆಯಲ್ಲಿ ಮ್ಯೂಸಿಯಂ ರಸ್ತೆ ಜಂಕ್ಷನ್‌ನಿಂದ ಬ್ರಿಗೇಡ್‌ ರಸ್ತೆ ಜಂಕ್ಷನ್‌ವರೆಗೆ, ರೆಸಿಡೆನ್ಸಿ ಕ್ರಾಸ್‌ ರಸ್ತೆಯಲ್ಲಿ ರೆಸಿಡೆನ್ಸಿ ರಸ್ತೆ ಮಹಾತ್ಮ ಗಾಂಧಿ ರಸ್ತೆಯ ಜಂಕ್ಷನ್‌ವರೆಗೆ ವಾಹನ ನಿಲುಗಡೆ ಹಾಗೂ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಭಾನುವಾರ (ಡಿಸೆಂಬರ್‌ 31) ಸಂಜೆ 4ರಿಂದ ಸೋಮವಾರ ಬೆಳಗ್ಗೆ 6ರವರೆಗೆ ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯ ಹಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹಳೇ ಮದ್ರಾಸ್‌ ರಸ್ತೆ ಜಂಕ್ಷನ್‌ನಿಂದ ದೊಮ್ಮಲೂರು ಮೇಲ್ಸೇತುವೆ ಜಂಕ್ಷನ್‌ವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಓಲಾ ಹಾಗೂ ಊಬರ್‌ಗಳಿಗೆ ಪ್ರತ್ಯೇಕವಾಗಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಏನಾದರೂ ತೊಂದರೆ ಆದರೆ ಪೊಲೀಸರ ನೆರವಿಗೆ ಸಹಾಯವಾಣಿ ಸಂಖ್ಯೆ 112ಕ್ಲೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+