ರೇಣುಕಾಸ್ವಾಮಿ ಕೊಲೆಗೂ ಮುನ್ನ ದರ್ಶನ್ ಜೊತೆ ಪಾರ್ಟಿ: ನಟ ಚಿಕ್ಕಣ್ಣಗೆ ಸಂಕಷ್ಟ
ಬೆಂಗಳೂರು, ಜೂನ್ 17: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಹದಿನೈದಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ತೀವ್ರ ವಿಚಾರಣೆಗಳಪಡಿಸಲಾಗುತ್ತಿದೆ.
ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಕನ್ನಡ ಚಿತ್ರರಂಗದ ಮತ್ತೊಬ್ಬ ನಟನಿಗೆ ಪೊಲೀಸರು ನೋಟಿಸ್ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಪ್ರಕರಣದ ತನಿಖೆ ಸಲುವಾಗಿ ನಟ ಚಿಕ್ಕಣ್ಣರನ್ನು ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಹೆಚ್ಚಾಗಿದೆ.

ರೇಣುಕಾಸ್ವಾಮಿ ಕೊಲೆಯಾದ ದಿನ ನಟ ದರ್ಶನ್ ಹಾಗೂ ಇತರರು ಶನಿವಾರ ಮಧ್ಯಾಹ್ನದಿಂದ ವಿನಯ್ ಒಡೆತನದ ಸ್ಟೋನಿಬ್ರೂಕ್‌ನಲ್ಲಿ ಪಾರ್ಟಿ ಮಾಡಿದ್ದರು. ಈ ವೇಳೆ ದರ್ಶನ್ ಜೊತೆ ಈ ನಟ ಚಿಕ್ಕಣ್ಣ ಕೂಡ ಭಾಗಿಯಾಗಿದ್ದರಂತೆ. ಅಲ್ಲದೇ ಪಾರ್ಟಿ ಆಗುತ್ತಿದ್ದಂತೆ ದರ್ಶನ್ ಸಂಜೆ ವೇಳೆಗೆ ಸ್ವಲ್ಪ ಕೆಲಸ ಇದೆ ಎಂದು ಹೇಳಿ ಎದ್ದು ಹೊರಟು ಹೋಗಿದ್ದಾರೆ ಎನ್ನಲಾಗಿದೆ.
ಇದೀಗ ನಟ ದರ್ಶನ್ ಬಂಧನವಾಗಿ ವಿಚಾರಣೆ ತೀವ್ರಗೊಂಡಿದ್ದು, ಸ್ಟಾರ್ ಹಾಸ್ಯ ನಟನ ಎದೆಯಲ್ಲಿ ಢವ ಢವ ಜೋರಾಗಿದೆ. ಯಾವುದೇ ಕ್ಷಣದಲ್ಲಾದರೂ ಪೊಲೀಸರು ನಟ ಚಿಕ್ಕಣ್ಣ ಅವರನ್ನು ಸಂಪರ್ಕಿಸುವ ಸಾಧ್ಯತೆ ಇದೆ. ನಾಳೆ ವಿಚಾರಣೆಗೆ ಹಾಜರಾಗುವಂತೆ ಪಶ್ಚಿಮ ವಿಭಾಗ ಪೊಲೀಸರು ಹಾಸ್ಯ ನಟ ಚಿಕ್ಕಣ್ಣಗೆ ನೋಟಿಸ್ ನೀಡಲಿದ್ದು, ಎಪಿ ನಗರ ಠಾಣೆಗೆ ಹಾಜರಾಗುವಂತೆ ಇಂದು ಸಂಜೆ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ದರ್ಶನ್ ಪಟ್ಟಣಗೆರೆ ಶೆಡ್‌ಗೆ ಹೋಗುವ ಕೆಲವೇ ಗಂಟೆ ಮುಂಚಿತವಾಗಿ ಪಾರ್ಟಿ ನಡೆದಿದ್ದು, ಈ ಪಾರ್ಟಿಯಲ್ಲಿ ಚಿಕ್ಕಣ್ಣ ಸೇರಿ ನಿರ್ಮಾಪಕರು ಕೂಡ ಭಾಗಿ ಆಗಿದ್ದರು ಎನ್ನಲಾಗಿದೆ. ಪಾರ್ಟಿಯಿಂದ ಎದ್ದು ಮನೆಗೆ ಹೊರಟಿದ್ದ ನಟ ದರ್ಶನ್, ಮನೆಯಿಂದ ನೇರವಾಗಿ ಪಟ್ಟಣಗೆರೆ ಶೆಡ್‌ಗೆ ಆಗಮಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೊಲೆ ವಿಚಾರವಾಗಿ ಸ್ಟೋನಿ ಬ್ರೂಕ್ ಪಬ್‌ನ ಪಾರ್ಟಿಯಲ್ಲಿ ಏನಾದರೂ ಚರ್ಚೆಯಾಗಿತ್ತಾ ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಬ್ಬ ನಟನ ಬಂಧನ
ಇನ್ನು ಈ ಕೊಲೆ ಪ್ರಕರಣದಲ್ಲಿ ಈ ಹಿಂದೆ ನಟ ದರ್ಶನ್ ಮಾತ್ರವಲ್ಲದೇ ಮತ್ತೊಬ್ಬ ನಟನನ್ನು ಬಂಧಿಸಲಾಗಿತ್ತು. ಪ್ರಕರಣದ 14ನೇ ಆರೋಪಿಯಾಗಿ ಪ್ರದೋಶ್ ಎನ್ನುವಾತನನ್ನು ಬಂಧಿಸಲಾಗಿತ್ತು. ದರ್ಶನ್ ಜೊತೆಗಿನ ಬೃಂದಾವನ, ಬುಲ್ ಬುಲ್ ಚಿತ್ರಗಳಲ್ಲಿ ಪ್ರದೋಶ್ ನಟಿಸಿದ್ದಾನೆ. ಅಲ್ಲದೇ ದರ್ಶನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾನೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಪ್ರದೋಶ್ ಪಾತ್ರ ಮುಖ್ಯವಾಗಿದೆ ಎನ್ನಲಾಗುತ್ತಿದೆ. ರೇಣುಕಾಸ್ವಾಮಿ ಮೃತಪಟ್ಟ ಬಳಿಕ ದರ್ಶನ್ ಸೂಚನೆ ಮೇರೆಗೆ ಪ್ರದೋಶ್ ಹಾಗೂ ಮತ್ತಿತರರು ರೇಣುಕಾಸ್ವಾಮಿ ಮೃತ ದೇಹವನ್ನು ಸ್ಕಾರ್ಪಿಯೋ ಕಾರಿನಲ್ಲಿ ಒಯ್ದು ಸುಮ್ಮನಹಳ್ಳಿಯ ಅಪಾರ್ಟ್‌ಮೆಂಟ್ ಒಂದರ ಮುಂಭಾಗದ ಮೋರಿ ಬಳಿ ಎಸೆದು ಹೋಗಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಇಂದು ಪೊಲೀಸರು ಮೈಸೂರಿನಲ್ಲೂ ಸ್ಥಳ ಮಹಜರು ನಡೆಸಲಿದ್ದಾರೆ. ಜೂನ್ 8ರ ರಾತ್ರಿ ರೇಣುಕಾಸ್ವಾಮಿ ಹತ್ಯೆಯ ಬಳಿಕ ನಟ ದರ್ಶನ್ ಮೈಸೂರಿಗೆ ತೆರಳಿದ್ದರು. ಬಳಿಕ ಮಾರನೇ ದಿನ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು. ಆದರೆ ಜೂನ್ 9ರ ಬೆಳಗ್ಗೆ ಪೊಲೀಸರು ಮೈಸೂರಿಗೆ ತೆರಳಿ ದರ್ಶನ್ ಬಂಧಿಸಿದ್ದರು. ಹೀಗಾಗಿ ಮೈಸೂರಿನಲ್ಲಿ ಸ್ಥಳ ಮಹಜರು ನಡೆಸಲು ಪೊಲೀಸರು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications