ಬೆಂಗಳೂರಿನ ಪಿಜಿಗಳಿಗೆ ಪೊಲೀಸರ ಹೊಸ ನಿಯಮಗಳು: ವಿವರ ತಿಳಿಯಿರಿ

ಬೆಂಗಳೂರು, ಜನವರಿ 29: ಬೆಂಗಳೂರು ನಗರದಾದ್ಯಂತ ಪೇಯಿಂಗ್ ಗೆಸ್ಟ್ (ಪಿಜಿ) ವಸತಿ ಗೃಹಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾವಿರಾರು ಉದ್ಯೋಗಿಗಳು, ವಿದ್ಯಾರ್ಥಿಗಳು ವಾಸಕ್ಕೆ ಪಿಜಿಯನ್ನು ಅವಲಂಬಿಸಿದ್ದಾರೆ. ಆದರೆ ಇತ್ತೀಚಿಗೆ ಪಿಜಿಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರಿಗೆ ತಲೆನೋವಾಗಿದೆ. ಹೀಗಾಗಿ ನಗರ ಪೊಲೀಸರು ಪಿಜಿ ಮಾಲೀಕರಿಗೆ ಹೊಸ ನಿಯಮಗಳನ್ನು ಹೊರಡಿಸಿದ್ದಾರೆ.

ನಗರದಾದ್ಯಂತ ಪಿಜಿಗಳಲ್ಲಿ ವಾಸವಾಗಿರುವವರ ಸುರಕ್ಷತೆಗಾಗಿ, ಪೊಲೀಸ್ ಇಲಾಖೆ ಸೂಚಿಸಿರುವ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಮತ್ತು ಬಿಬಿಎಂಪಿಯಿಂದ ಕಡ್ಡಾಯವಾಗಿ ಟ್ರೇಡ್ ಲೈಸೆನ್ಸ್ ತೆಗೆದುಕೊಳ್ಳುವಂತೆ ನಗರ ಪೊಲೀಸರು ಪಿಜಿ ಮಾಲೀಕರಿಗೆ ಸೂಚಿಸಿದ್ದಾರೆ.

New Police Rules For PG Accommodation In Bengaluru

ಒಂದು ವೇಳೆ ಪಿಜಿಗಳಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ, ಅಥವಾ ಅಪರಾಧ ಪ್ರಕರಣಗಳು ನಡೆದ ಸಂದರ್ಭದಲ್ಲಿ ಪೊಲೀಸರು ನೀಡಿದ ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲರಾಗಿರುವುದು ತಿಳಿದು ಬಂದರೆ, ಅಂತಹ ಘಟನೆಗೆ ಪಿಜಿ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿಜಿಗಳಲ್ಲಿ ವಾಸಿಸುವ ವಿದೇಶಿಗರ ಬಗ್ಗೆ ಮಾಹಿತಿಯನ್ನು ನೇರವಾಗಿ ಅಥವಾ ಆನ್‌ಲೈನ್‌ನಲ್ಲಿ ತಮ್ಮ ಪಿಜಿ ವ್ಯಾಪ್ತಿಯಲ್ಲಿರುವ ಪೊಲೀಸ್‌ ಠಾಣಾ ಸಿಬ್ಬಂದಿಗೆ ಒದಗಿಸುವಂತೆ ಮಾಲೀಕರಿಗೆ ತಿಳಿಸಲಾಗಿದೆ. ಪಿಜೆಗೆ ಬರುವ ವಿದೇಶಿಗರ ಹೆಸರು, ಪಾಸ್‌ಪೋರ್ಟ್ ಸಂಖ್ಯೆ, ವೀಸಾ ಸಂಖ್ಯೆ, ದೇಶಕ್ಕೆ ಆಗಮಿಸಿದ ದಿನಾಂಕ, ಭೇಟಿಯ ಉದ್ದೇಶ ಮತ್ತು ಅವರ ಸ್ಥಳೀಯ ಸಂಪರ್ಕಗಳ ವಿವರಗಳು ಸೇರಿದಂತೆ ವಿವರಗಳನ್ನು ದಾಖಲಿಸಿ ಪೊಲೀಸರಿಗೆ ನೀಡಬೇಕು.

ಹೆಚ್ಚುವರಿ ಪೊಲೀಸ್ ಕಮಿಷನರ್ (ಪೂರ್ವ) ರಮಣ್ ಗುಪ್ತಾ ಮಾರ್ಗಸೂಚಿ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು ಕರ್ನಾಟಕ ಪೊಲೀಸ್ ಕಾಯಿದೆಯ ಸೆಕ್ಷನ್‌ಗಳಿಗೆ ಅನುಗುಣವಾಗಿ ರೂಪಿಸಲಾಗಿದೆ. ಹೀಗಾಗಿ ಪಿಜಿಗಳಲ್ಲಿ ತಂಗಿರುವವರ ಮೇಲೆ ಪೊಲೀಸರಿಗೆ ನಿಗಾ ಇರಿಸಲು ಸಹಾಯ ಮಾಡುತ್ತದೆ. ಆಗ್ನೇಯ ಮತ್ತು ವೈಟ್‌ಫೀಲ್ಡ್ ಪೊಲೀಸ್ ವಿಭಾಗಗಳಲ್ಲಿ 5,000ಕ್ಕೂ ಹೆಚ್ಚು ಪಿಜಿಗಳಿದ್ದು, ನಗರದಲ್ಲಿ 4.5 ಲಕ್ಷಕ್ಕೂ ಅಧಿಕ ಮಂದಿ ಪಿಜಿಗಳಲ್ಲಿ ಉಳಿದುಕೊಳ್ಳುತ್ತಿದ್ದಾರೆ.

New Police Rules For PG Accommodation In Bengaluru

ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮತ್ತು ಬೆಂಕಿಯ ಅಪಾಯದ ಸುರಕ್ಷತಾ ಕ್ರಮಗಳನ್ನು ಅಳವಡಿಸಲು ಮಾರ್ಗಸೂಚಿಗಳಲ್ಲಿ ಸೂಚಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆ, ತುರ್ತು ಪ್ರತಿಕ್ರಿಯೆ (112), ವೈದ್ಯಕೀಯ ಸೇವೆಗಳು (103) ಮತ್ತು ಸೈಬರ್ ಕ್ರೈಮ್ (1930) ನಂತಹ ಅಗತ್ಯ ಸೇವೆಗಳ ಫೋನ್ ಸಂಖ್ಯೆಗಳನ್ನು ಪಿಜಿಯ ಸೂಚನಾ ಫಲಕಗಳಲ್ಲಿ ಹಾಕುವಂತೆ ಸೂಚಿಸಲಾಗಿದೆ.

ಪಿಜಿಯಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು ಈ ಕೆಳಗಿನಂತಿದೆ

• ಅಗತ್ಯವಿರುವ ಪರವಾನಿಗೆಯನ್ನು ಬಿಬಿಎಂಪಿಯಿಂದ ಕಡ್ಡಾಯವಾಗಿ(ಟ್ರೇಡ್ ಲೈಸನ್ಸ್) ಪಡೆಯುವುದು.

• ವಾಸಕ್ಕೆ ಬರುವ ಎಲ್ಲಾ ವ್ಯಕ್ತಿಗಳ ಗುರುತಿನ ಚೀಟಿ ಮತ್ತು ಇತ್ತೀಚಿನ ಭಾವಚಿತ್ರ ಪಡೆದು, ರಕ್ತ ಸಂಬಂಧಿಕರ ವಿವರಗಳನ್ನು ಮೊಬೈಲ್ ಸಂಖ್ಯೆಗಳೊಂದಿಗೆ ತಂತ್ರಜ್ಞಾನದ ಮೂಲಕ (ಗಣಕೀಕರಣ) ದಾಖಲಿಸುವುದು ಹಾಗೂ ಭೇಟಿ ನೀಡಲು ಬರುವವರ (ಸಂಬಂಧಿಕರು/ಸಾರ್ವಜನಿಕರು ಸೇರಿದಂತೆ) ವಿವರಗಳನ್ನು ಪ್ರತ್ಯೇಕವಾಗಿ ನಿರ್ವಹಿಸುವುದು.

• ಕರ್ನಾಟಕ ಸಾರ್ವಜನಿಕರ ಸುರಕ್ಷತೆ ಅಧಿನಿಯಮ-2017ರ ಅನ್ವಯ ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವುದು ಹಾಗೂ ಅಗ್ನಿ ಅನಾಹುತದ ಕುರಿತಂತೆ ಅಗತ್ಯ ಸುರಕ್ಷತೆ ಕ್ರಮಗಳನ್ನು ಅನುಸರಿಸುವುದು.

• ಮಾದಕ ವಸ್ತುಗಳ ಸೇವನೆ ಮತ್ತು ಸಂಗ್ರಹಣೆಯಿಂದ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡತಕ್ಕದಲ್ಲ.

• ಸ್ಥಳೀಯ ಪೊಲೀಸ್ ಠಾಣೆ, ತುರ್ತು ಸ್ಪಂದನೆಯ-112, ವೈದ್ಯಕೀಯ ಸೇವೆಯ-103, ಮತ್ತು ಸೈಬ‌ರ್ ಅಪರಾಧಕ್ಕೆ ಸಂಬಂಧಪಟ್ಟ - 1930 ಮುಂತಾದ ಅಗತ್ಯ ಸೇವೆಗಳ ದೂರವಾಣಿ ಸಂಖ್ಯೆಗಳನ್ನು ಎಲ್ಲರಿಗೂ ಗೋಚರವಾಗುವಂತೆ ಪ್ರದರ್ಶಿಸುವುದು ಹಾಗೂ ಪ್ರಥಮ ಚಿಕಿತ್ಸೆ (First-aid Kits) ಸಲಕರಣೆಗಳನ್ನು ಇಟ್ಟುಕೊಳ್ಳುವುದು.

• ಕರ್ತವ್ಯಕ್ಕೆ ನೇಮಿಸಿಕೊಳ್ಳುವ ಎಲ್ಲಾ ವ್ಯಕ್ತಿಗಳ (ಅಡುಗೆ ಕೆಲಸ, ಸೆಕ್ಯೂರಿಟಿ ಗಾರ್ಡ್ ಹಾಗೂ ಇನ್ನಿತರೇ ವ್ಯಕ್ತಿಗಳ) ಪೂರ್ವಾಪರಗಳನ್ನು ಪೊಲೀಸ್ ಪರಿಶೀಲನೆಗೆ ಒಳಪಡಿಸಿದ ನಂತರ ಕರ್ತವ್ಯಕ್ಕೆ ನೇಮಿಸಿಕೊಳ್ಳುವುದು ಹಾಗೂ ಇತರೆ ವಿಳಾಸದ ಧೃಡೀಕರಣ ಸೇರಿದಂತೆ ರಕ್ತ ಸಂಬಂಧಿಕರ ಮಾಹಿತಿಯನ್ನು ಸೂಕ್ತ ದಾಖಲಾತಿಗಳೊಂದಿಗೆ ಪಡೆದು ನಿರ್ವಹಿಸುವುದು.

• ವಿದೇಶಿ ಪ್ರಜೆಗಳು ಪಿ.ಜಿ ಯಲ್ಲಿ ನೆಲಿಸಿದ್ದಲ್ಲಿ, ಮಾಹಿತಿಯನ್ನು The Registration of Foreginers Rules 1939 ಅನ್ವಯ ಫಾರಂ 'ಸಿ'' ಅನ್ವಯ ಸ್ಥಳೀಯ ಪೊಲೀಸ್ ಠಾಣೆಗೆ ನೇರವಾಗಿ ಅಥವಾ ತಂತ್ರಜ್ಞಾನದ ಮೂಲಕ ನೀಡುವುದು.

• ವಾಸಕ್ಕೆ ಪ್ರವೇಶ ಪಡೆದಿರುವವರನ್ನು ಹೊರತು ಪಡಿಸಿ ಇತರೇ ಯಾರಿಗೂ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡತಕ್ಕದ್ದಲ್ಲ.

• ಸರ್ವೋಚ್ಚ ನ್ಯಾಯಾಲಯದ ಆದೇಶದ ಅನುಸಾರ ರಾತ್ರಿ 10-00 ಗಂಟೆಯಿಂದ ಬೆಳಿಗ್ಗೆ 6-00 ಗಂಟೆಯವರೆಗೆ ಯಾವುದೇ ಧ್ವನಿವರ್ದಕಗಳನ್ನು ಉಪಯೋಗಿಸತಕ್ಕದಲ್ಲ.

• ಒಂದು ವೇಳೆ ಸುರಕ್ಷತಾ ಕ್ರಮ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಯಾವುದಾದರೂ ಅಹಿತಕರ ಘಟನೆ ಸಂಭವಿಸಿದ್ದಲ್ಲಿ, ಸಂಬಂಧಪಟ್ಟ ಪಿ.ಜಿ. ಮಾಲೀಕರು ಅಥವಾ ಅದರ ವ್ಯವಸ್ಥಾಪಕರೇ ನೇರ ಹೊಣೆಗಾರರಾಗುತ್ತಾರೆ ಎಂದು ಮಾರ್ಗ ಸೂಚಿಯಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+