ಕರ್ನಾಟಕದಲ್ಲಿ ಆನೆ ದಾಳಿ ತಡೆಯಲು ಹೊಸ ಮಾಸ್ಟರ್ ಪ್ಲಾನ್, ಏನಿದು ಡ್ರೋನ್ ಟೆಕ್ನಾಲಜಿ!
Elephant Attacks in Karnataka: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಾಡಾನೆಗಳ ಸಂಕಷ್ಟ ಇನ್ನೂ ಇದೆ. ಕಾಡಾನೆಗಳು ಹಾಗೂ ಕಾಡಿನ ಪ್ರಾಣಿಗಳ ದಾಳಿಯಿಂದ ತಪ್ಪಿಸಿಕೊಳ್ಳುವುದು ರೈತರಿಗೆ ಹಾಗೂ ಕಾಡಂಚಿನ ಗ್ರಾಮದ ಜನರಿಗೆ ಇಂದಿಗೂ ಸಹ ಸವಾಲಿನ ಕೆಲಸವಾಗಿದೆ. ಇದೀಗ ಈ ದಾಳಿಯನ್ನು ತಪ್ಪಿಸುವ ಉದ್ದೇಶದಿಂದ ಡ್ರೋನ್ ಟೆಕ್ನಾಲಜಿ ಮೊರೆ ಹೋಗಲಾಗಿದೆ. ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ದಾಳಿ ಹೆಚ್ಚಾಗಿದೆ. ಅದರಲ್ಲೂ ಕಾಡಂಚಿನ ಗ್ರಾಮದಲ್ಲಿ ಇರುವವರು ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಕಾಡಾನೆಗಳ ದಾಳಿಯಿಂದಾಗಿ ಅಪಾರ ಪ್ರಮಾಣದ ಬೆಳೆ ಪ್ರತಿ ವರ್ಷವೂ ಹಾನಿಯಾಗುತ್ತಿದೆ. ಇದೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಾಸ್ಟರ್ ಪ್ಲಾನ್ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಪ್ರದೇಶ, ಹಾಸನ, ಶಿವಮೊಗ್ಗ ಹಾಗೂ ಚಿಕ್ಕಮಗಳೂರಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಕಾಡಾನೆಗಳ ದಾಳಿಯು ಮಲೆನಾಡಿನಿಂದ ಇದೀಗ ಬಯಲು ಸೀಮೆಗೂ ವ್ಯಾಪಿಸಿದೆ. ಪ್ರತಿ ವರ್ಷವೂ ಕಾಡಾನೆಗಳ ದಾಳಿಯಿಂದಾಗಿ ರೈತರು ಅಪಾರ ಪ್ರಮಾಣದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಸಂಬಂಧ ಹೊಸ ಪ್ಲಾನ್ ಮಾಡಿಕೊಳ್ಳಲಾಗಿದ್ದು, ಸಂಸದ ಡಾ.ಸಿ. ಎನ್ ಮಂಜುನಾಥ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಕಾಡಾನೆಗಳ ದಾಳಿಯಿಂದಾಗಿ ದೇಶಾದ್ಯಂತ ಪ್ರತಿ ವರ್ಷವೂ ಸಾವಿರಾರು ಎಕರೆ ಬೆಳೆ ನಾಶ ಆಗುತ್ತಿದೆ. ಇದರಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಕರ್ನಾಟಕದ ಬೆಂಗಳೂರು ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲೂ ಸಹ ಕಾಡಾನೆಗಳ ಹಾವಳಿ ತೀವ್ರವಾಗಿದೆ ಎಂದು ಡಾ.ಸಿ ಎನ್ ಮಂಜುನಾಥ್ ಅವರು ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲೂ ಕಾಡಾನೆಗಳ ಹಾವಳಿ ಇದೆ. ಇನ್ನು ಬನ್ನೇರುಘಟ್ಟ, ಕೋಡಿಹಳ್ಳಿ, ಸಾತನೂರು, ಮಾಗಡಿ ಹಾಗೂ ಚನ್ನಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ಸಾಕಷ್ಟು ಬೆಳೆ ಹಾನಿಯಾಗಿದೆ. ಅಲ್ಲದೇ ಇದರೊಂದಿಗೆ ಕಾಡಾನೆಗಳ ದಾಳಿಯಿಂದಾಗಿ ಕೆಲ ಕಡೆ ಸಾವು ಸಹ ಸಂಭವಿಸಿರುವುದು ವರದಿಯಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಡಾ. ಸಿ.ಎನ್ ಮಂಜುನಾಥ್ ಅವರು ಹೇಳಿದ್ದಾರೆ.
ಅಲ್ಲದೇ ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸಿಎಸ್‌ಆರ್ (CSR) ಅನುದಾನವನ್ನು ಬಳಸಿಕೊಂಡು ಡ್ರೋನ್ ತಂತ್ರಜ್ಞಾನದ ಮೂಲಕ ಕಾಡಾನೆಗಳ ದಾಳಿಯನ್ನು ನಿಯಂತ್ರಿಸುವ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. ಇದೀಗ ಪ್ರಾಯೋಗಿಕವಾಗಿ ಕೋಡಿಹಳ್ಳಿ ಬಳಿಯ ಬೊಮ್ಮಸಂದ್ರ ವ್ಯಾಪ್ತಿಯಲ್ಲಿ ಸುಮಾರು 25 ಆನೆಗಳ ಹಿಂಡು ಕಾಡಿನಿಂದ ಹೊರಬರತ್ತಿರುವುದನ್ನು ಡ್ರೋನ್ ತಂತ್ರಜ್ಞಾನದ ಮೂಲಕ ಗುರುತಿಸಿ ಅವುಗಳನ್ನು ಪುನಃ ಕಾಡಿಗೆ ಕಳುಹಿಸುವ ಕೆಲಸವನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಡ್ರೋನ್ ತಂತ್ರಜ್ಞಾನದ ಮೂಲಕ ಆನೆಗಳ ಚಲನವಲನಗಳ ಬಗ್ಗೆ ನಿಗಾವಹಿಸಬಹುದಾಗಿದೆ. ಅಲ್ಲದೇ ಕಾಡಿನಿಂದಾಚೆ ಬರುವ ಕಾಡಾನೆಗಳನ್ನು ತಡೆಯಲು ಇದು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ರಾಜ್ಯದಲ್ಲಿ ಕಾಡಾನೆಗಳ ದಾಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಅನುಸರಿಸಲಾಗಿತ್ತು. ಅಲ್ಲದೇ ಜೇನುನೊಣಗಳ ಮಾದರಿಯನ್ನು ರೈತರು ಅನುಸರಿಸಿದ್ದರು. ಆದರೆ, ರೈತರು ಅನುಸರಿಸಿದ ಕ್ರಮಗಳಲ್ಲಿ ಹಲವು ವಿಷಯಗಳು ಸಹಕಾರಿಯಾಗಿರಲಿಲ್ಲ. ಕೆಲವು ವಿಷಯಗಳು ಸಕ್ಸಸ್ ಆಗದೆ ಸಮಸ್ಯೆ ಆಗಿತ್ತು. ಇದೀಗ ಕಾಡಾನೆಗಳ ಹಾವಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಡ್ರೋನ್ ತಂತ್ರಜ್ಞಾನದ ಮೊರೆ ಹೋಗಿರುವುದು ಮುಂದಿನ ದಿನಗಳಲ್ಲಿ ರೈತರ ಬೆಳೆಗಳನ್ನು ರಕ್ಷಿಸಲು ಹಾಗೂ ಕಾಡಾನೆ ಹಾವಳಿ ತಡೆಗಟ್ಟಲು ಸಹಕಾರಿ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications