ನಾಸೀರ್ ಅಹ್ಮದ್ ವಜಾ; ಪಕ್ಷದಲ್ಲಿ ಶಿಸ್ತಿಲ್ಲದಿದ್ದರೆ ಕ್ರಮ ಎಂದ ಡಿಕೆ ಶಿವಕುಮಾರ್
ಬೆಂಗಳೂರು: ಉಪ ಚುನಾವಣೆ ಬೆನ್ನಲ್ಲೆ ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ ನಡೆದಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ನಸೀರ್ ಅಹ್ಮದ್ ಅವರನ್ನು ವಜಾಗೊಳಿಸಲಾಗಿದೆ. 'ಮುಖ್ಯಮಂತ್ರಿಗಳು ತಮ್ಮದೇ ಆದ ವಿವಿಧ ಮೂಲಗಳಿಂದ ಮಾಹಿತಿ ಪಡೆದು, ಪಕ್ಷದ ಹಿತದೃಷ್ಟಿಯಿಂದ ಈ ವಜಾ ತೀರ್ಮಾನ ತೆಗೆದುಕೊಂಡಿದ್ದಾರೆ' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ಸದಾಶಿವನಗರದ ತಮ್ಮ ನಿವಾಸ ಹಾಗೂ ಕೆಪಿಸಿಸಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್ ಅಹ್ಮದ್ ಬಿಡುಗಡೆ ಪ್ರಶ್ನೆಗೆ ಉತ್ತರಿಸಿದ ಅವರು, ನಜೀರ್ ಅವರಿಗೆ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರಕ್ಕೆ ಹೋಗಿ ಬಂಡಾಯ ಅಭ್ಯರ್ಥಿ ಹಿಂದೆ ಸರಿಯುವಂತೆ ಮಾಡಲು ಪಕ್ಷ ಸೂಚಿಸಿತ್ತು. ಅವರು ಈ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲಿ ಏನಾಗಿದೆ ಎಂದು ನನಗೆ ಇನ್ನು ವರದಿ ಬರಬೇಕಿದೆ ಎಂದು ತಿಳಿಸಿದರು.

ಪಕ್ಷದಲ್ಲಿ ವಿರೋಧಿ ನಡೆ ತಾಳುವವರಿಗೆ ಸಂದೇಶವೇ?
ಪಕ್ಷ ವಿರೋಧಿ ಚಟುವಟಿಕೆ ಮಾಡುವವರಿಗೆ ಇದು ಸಂದೇಶವೇ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಯಾವುದೇ ಪಕ್ಷವಾದರೂ ಶಿಸ್ತು ಬಹಳ ಮುಖ್ಯ. ಎಲ್ಲರನ್ನು ವಿಶ್ವಾಸಕ್ಕೆ ಪಡೆದುಕೊಂಡೇ ಅಭ್ಯರ್ಥಿ ಆಯ್ಕೆ ಮಾಡಿದ್ದೆವು. ನಂತರ ನಾವು ಎಲ್ಲಾ ನಾಯಕರೊಂದಿಗೆ ನಿತ್ಯ ಸಂಪರ್ಕದಲ್ಲಿದ್ದೆವು. ನಮ್ಮ ನಾಯಕರ ವರದಿಗಳ ಆಧಾರದ ಮೇಲೆ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ಜಮೀರ್ ಅವರ ವಿರುದ್ಧ ಶಿಸ್ತು ಕ್ರಮ?
ವಸತಿ ಸಚಿವ ಬಿ.ಝಡ್, ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧವೂ ಶಿಸ್ತು ಕ್ರಮ ಜರುಗಿಸಲಾಗುವುದೇ ಎಂಬ ಪ್ರಶ್ನೆಗೆ ಡಿಕೆ ಶಿವಕುಮಾರ್ ಅವರು, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಇಂದು ರಾತ್ರಿ ಚೆನ್ನೈಗೆ ಪ್ರಯಾಣ ಮಾಡುತ್ತಿದ್ದು, ಬುಧವಾರ ಚುನಾವಣಾ ಪ್ರಚಾರ ಕಾರ್ಯಕ್ರಮವಿದೆ ಎಂದರು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದಕ್ಕೆ ಜಮೀರ್ ಅವರು ಬೇಸರಗೊಂಡಿದ್ದರು. ಮಾತ್ರವಲ್ಲದೇ ಪಕ್ಷೇತರವಾಗಿ ಕಣಕ್ಕಿಳಿಯುವಂತೆ ಸಾದಿಕ್ ಪೈಲ್ವಾನ್ ಅವರನ್ನು ಪ್ರಚೋದಿಸಿದ್ದರೆಂಬ ಮಾಹಿತಿ ಇದೆ. ಹೀಗಾಗಿ ಪಕ್ಷ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾ ಎಂಬ ಕುತೂಹಲ ಉಂಟಾಗಿದೆ.
ಜಿಬಿಎ, ಸ್ಥಳೀಯ ಸಂಸ್ಥೆಗಳ ಚುನಾವಣೆ
ರಾಜಕಾರಣ ಮಾಡುವಾಗ ನಾವು ನಮ್ಮ ಶಾಸಕರ ಜತೆ ಚರ್ಚೆ ಮಾಡಿ ಭವಿಷ್ಯ ರೂಪಿಸುವ ಬಗ್ಗೆ ಚರ್ಚೆ ಮಾಡಬೇಕಾಗುತ್ತದೆ. ಯಾರಿಗೆ ಏನು ಹೇಳಬೇಕು, ಯಾರಿಗೆ ಯಾವ ಮಾರ್ಗದರ್ಶನ ನೀಡಬೇಕು ಮಾಡುತ್ತೇವೆ. ಪಾಲಿಕೆ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಚರ್ಚೆ ಮಾಡುವುದು ಪಕ್ಷದ ಅಧ್ಯಕ್ಷನಾಗಿ ನನ್ನ ಕರ್ತವ್ಯ. ಈ ಕೆಲಸ ನಾನು ಮಾಡದೇ ಬೇರೆ ಯಾರು ಮಾಡುತ್ತಾರೆ? ಇನ್ನು ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಏನಾಗಿದೆ ಎಂದು ಶಾಸಕರು ವರದಿ ನೀಡುತ್ತಿದ್ದಾರೆ ಎಂದು ಹೇಳಿದರು.
ಶಾಸಕರಿಗೆ ಡಿಸಿಎಂ ಮಹತ್ವದ ಸಲಹೆ
ಶಾಸಕರು ದೆಹಲಿಗೆ ಹೋಗಿರುವುದು, ಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಅವರು ತಮ್ಮ ಬೇಡಿಕೆ ನಾಯಕರ ಮುಂದಿಡಲಿ. ಆದರೆ ಪಕ್ಷದಲ್ಲಿ ಶಿಸ್ತಿನಿಂದ ಇರಬೇಕು ಅಷ್ಟೇ. ಅವರೆಲ್ಲರೂ ನಮ್ಮ ಸಹೋದ್ಯೋಗಿಗಳು. ಹೀಗಾಗಿ ಅವರಿಗೆ ಶಿಸ್ತು ಕಾಪಾಡುವಂತೆ ಮನವಿ ಮಾಡಿದ್ದೇನೆ. ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುವಾಗ ಎಚ್ಚರಿಕೆಯಿಂದ ಇರಿ ಎಂದು ಸಲಹೆ ನೀಡಿದ್ದೇನೆ ಎಂದು ಹೇಳಿದರು.
ಈ ಮೂಲಕ ಪಕ್ಷ ವಹಿಸಿದ ಕೆಲಸ ಮಾಡುವಲ್ಲಿ ವಿಫಲವಾದರೆ, ಪಕ್ಷದ ಸೂಚನೆ ನಿರ್ಲಕ್ಷಿಸಿದರೆ ತಕ್ಕ ಶಿಸ್ತು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.












Click it and Unblock the Notifications