ನರೇಂದ್ರ ಮೋದಿ ಗಮನ ಸೆಳೆದ ಬೆಂಗಳೂರಿನ ಅಂಚೆ ಕಚೇರಿ!
ಬೆಂಗಳೂರು, ಆಗಸ್ಟ್ 18: ಉದ್ಯಾನ ನಗರಿ ಬೆಂಗಳೂರಿನಲ್ಲಿ ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಛೇರಿ ಉದ್ಘಾಟನೆ ಮಾಡಲಾಗಿದೆ. ಈ ಅಂಚೆ ಕಛೇರಿ ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆದಿದ್ದು, ಈ ಕುರಿತು ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಕೇಂದ್ರ ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅಂಚೆ ಕಛೇರಿ ಉದ್ಘಾಟನೆ ಮಾಡಿದರು. ನಗರದ ಕೇಂಬ್ರಿಡ್ಜ್ ಲೇಔಟ್‌ನಲ್ಲಿ ಈ ಅಂಚೆ ಕಛೇರಿಯನ್ನು ನಿರ್ಮಾಣ ಮಾಡಲಾಗಿದೆ.

'ಕೇಂಬ್ರಿಡ್ಜ್ ಲೇಔಟ್ ಪಿಒ' ಹೆಸರಿನ ಅಂಚೆ ಕಛೇರಿ ನಿರ್ಮಾಣವನ್ನು ಮಾರ್ಚ್ 21ರಂದು ಆರಂಭಿಸಲಾಗಿತ್ತು. ಈಗ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟಿಸಲಾಗಿದೆ. ಇನ್ನು ಮುಂದೆ ಹಲಸೂರು ಬಜಾರ್‌ನಲ್ಲಿರುವ ಅಂಚೆ ಕಛೇರಿಯ ಸಿಬ್ಭಂದಿ ಇಲ್ಲಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.
ನರೇಂದ್ರ ಮೋದಿ ಟ್ವೀಟ್; ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಛೇರಿ ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆದಿದೆ. ಈ ಕುರಿತು ಶುಕ್ರವಾರ ಅವರು ಟ್ವೀಟ್ ಮಾಡಿದ್ದಾರೆ. 'ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿರುವ ಭಾರತದ ಮೊದಲ 3D ಮುದ್ರಿತ ಅಂಚೆ ಕಚೇರಿಯನ್ನು ನೋಡಲು ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ' ಎಂದು ಮೋದಿ ಹೇಳಿದ್ದಾರೆ.
'ನಮ್ಮ ರಾಷ್ಟ್ರದ ನಾವೀನ್ಯತೆ ಮತ್ತು ಪ್ರಗತಿಗೆ ಇದು ಸಾಕ್ಷಿಯಾಗಿದೆ. ಇದು ಸ್ವಾವಲಂಬಿ ಭಾರತದ ಆಶಯವನ್ನು ಒಳಗೊಂಡಿದೆ. ಅಂಚೆ ಕಛೇರಿಯನ್ನು ಪೂರ್ಣಗೊಳಿಸುವಲ್ಲಿ ಶ್ರಮಿಸಿದವರಿಗೆ ಅಭಿನಂದನೆಗಳು' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Every Indian would be proud to see India's first 3D printed Post Office at Cambridge Layout, Bengaluru. A testament to our nation's innovation and progress, it also embodies the spirit of a self-reliant India. Compliments to those who have worked hard in ensuring the Post… pic.twitter.com/Y4TrW4nEhZ
— Narendra Modi (@narendramodi) August 18, 2023
ಸಾಂಪ್ರದಾಯಿಕ ವಿಧಾನ ಬಳಕೆ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಲು ಸುಮಾರು 6 ರಿಂದ 8 ತಿಂಗಳು ಬೇಕಾಗುತ್ತದೆ. ಆದರೆ 3ಡಿ ಕಾಂಕ್ರೀಟ್ ಮುದ್ರಣ ತಂತ್ರಜ್ಞಾನದಿಂದ ವೆಚ್ಚ, ಸಮಯವನ್ನು ಉಳಿತಾಯ ಮಾಡಿ ಈ ಅಂಚೆ ಕಛೇರಿಯ ಕಟ್ಟಡ ನಿರ್ಮಾಣ ಮಾಡಲಾಗಿದೆ.
ಕಟ್ಟಡ ನಿರ್ಮಾಣಕ್ಕೆ ಸಾಂಪ್ರದಾಯಿಕ ಶೈಲಿಯ ಇಟ್ಟಿಗೆ ಮುಂತಾದ ಕಚ್ಚಾವಸ್ತುಗಳ ಬದಲಾಗಿ ರೊಬೊಟಿಕ್ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗಿದೆ. ಮೆ. ಲಾರ್ಸನ್ ಮತ್ತು ಟುಟ್ರೋ ಲಿಮಿಟೆಡ್(ಎಲ್ & ಟಿ) ಮೂಲಕ ಈ ಕಟ್ಟಡ ನಿರ್ಮಿಸಲಾಗಿದೆ.
ಈ ಕಟ್ಟಡದ ಒಟ್ಟು ವಿಸ್ತೀರ್ಣ 1021 ಚದರ ಅಡಿಗಳು. ಭಾರತೀಯ ಅಂಚೆ ಇಲಾಖೆ, ಕರ್ನಾಟಕ ವೃತ್ತದ ವತಿಯಿಂದ ಈ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಚೆನ್ನೈನ ಐಐಟಿ ತಾಂತ್ರಿಕ ಮಾರ್ಗದರ್ಶನವನ್ನು ನೀಡಿದೆ.
ಕಟ್ಟಡ ನಿರ್ಮಾಣ ತಂತ್ರಜ್ಞಾನ ಬಹಳ ವಿಭಿನ್ನವಾಗಿದೆ. ರೋಬೊಟಿಕ್ ಪ್ರಿಂಟರ್ ಬಳಕೆ ಮಾಡಿಕೊಂಡು ಕಾಂಕ್ರೀಟ್ ಪದರವನ್ನು ಹಂತ ಹಂತವಾಗಿ ನಿರ್ಮಿಸಲಾಗಿದೆ. ಬೇಗ ಗಟ್ಟಿಯಾಗುವ ವಿಶೇಷ ದರ್ಜೆಯ ಕಾಂಕ್ರೀಟ್ ಪದರಗಳನ್ನು ಇಲ್ಲಿ ಬಳಕೆ ಮಾಡಲಾಗಿದೆ.
ಈ ಕಟ್ಟಡದ ನಿರ್ಮಾಣ ಕಾರ್ಯಕ್ಕೆ ಸುಮಾರು 26 ಲಕ್ಷ ರೂ. ಖರ್ಚಾಗಿದೆ ಎಂದು ಅಂದಾಜಿಸಲಾಗಿದೆ. ನಿರ್ಮಾಣ ಕಾರ್ಯ ಮೇ 3ರ ಒಳಗೆ ಪೂರ್ಣಗೊಂಡಿತ್ತು. ಆದರೆ ಒಳಚರಂಡಿ ಮತ್ತು ನೀರಿನ ಸಂಪರ್ಕ ನೀಡುವುದು ವಿಳಂಬವಾಯಿತು. ಉದ್ಘಾಟನೆಗಾಗಿ ಕೇಂದ್ರ ಸಚಿವರ ದಿನಾಂಕ ನಿಗದಿಗೆ ಇನ್ನಷ್ಟು ದಿನ ತೆಗೆದುಕೊಂಡಿತು.
ಸಾಂಪ್ರದಾಯಿಕವಾಗಿ ನಿರ್ಮಾಣ ಮಾಡಿದ್ದರೆ ಆಗುವ ಖರ್ಚಿಗಿಂತ ಸುಮಾರು ಶೇ 30 ರಿಂದ 40ರಷ್ಟು ಹಣ ಉಳಿತಾಯವಾಗಿದೆ ಎಂದು ಅಂದಾಜಿಸಲಾಗಿದೆ. ಈ ಕಟ್ಟಡದ ಉದ್ಘಾಟನೆಯ ನೆನಪಿಗಾಗಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಗಿದೆ.
ಕಟ್ಟಡ ನಿರ್ಮಾಣದಲ್ಲಿ ಹಣ, ಸಮಯ ಉಳಿತಾಯ ಮಾಡುವ 3ಡಿ ತಂತ್ರಜ್ಞಾನ ದೇಶದಲ್ಲಿ ಭವಿಷ್ಯದಲ್ಲಿ ಜನಪ್ರಿಯವಾಗುವ ನಿರೀಕ್ಷೆ ಇದೆ. ಎರಡು ವರ್ಷಗಳ ಹಿಂದೆ ಮದ್ರಾಸ್ ಐಐಟಿ ಕ್ಯಾಂಪಸ್‌ನಲ್ಲಿ ಇದೇ ಮಾದರಿಯಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು. ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಕಟ್ಟಡ ಉದ್ಘಾಟನೆ ಮಾಡಿದ್ದರು.












Click it and Unblock the Notifications