Bengaluru Metro: ಮಕರ ಸಂಕ್ರಾಂತಿಗೆ ಗುಡ್‌ನ್ಯೂಸ್, 7ನೇ ಮೆಟ್ರೋ ಸೇವೆ ಆರಂಭದ ಅಪ್ಡೇಟ್ಸ್
ಬೆಂಗಳೂರು: 2026 ಮಕರ ಸಂಕ್ರಾಂತಿ ಹಬ್ಬಕ್ಕೆ ಬೆಂಗಳೂರು ನಮ್ಮ ಮೆಟ್ರೋ ಅಧಿಕಾರಿಗಳು ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಆರ್.ವಿ.ರಸ್ತೆ-ಬೊಮ್ಮಸಂದ್ರ ವರೆಗಿನ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ (Namma Metro Yellow Line) ಸದ್ಯ ಒಟ್ಟು ಆರು ಡ್ರೈವರ್‌ಲೆಸ್ ಮೆಟ್ರೋ ರೈಲುಗಳು ಸಂಚಾರ ಮಾಡುತ್ತಿವೆ. ಈ ಮಾರ್ಗಕ್ಕೆ ತನ್ನೆಲ್ಲ ಪರೀಕ್ಷೆ ಪೂರ್ಣಗೊಳಿಸಿರುವ ಏಳನೇ ರೈಲು ಕಾರ್ಯಾಚರಣೆಗೆ ನಿಯೋಜನೆಗೊಳ್ಳಲಿದೆ.
ಹೌದು, ವಾರಗಳ ಹಿಂದೆ ಬೆಂಗಳೂರಿನ ಹೆಬ್ಬಗೋಡಿ ಮೆಟ್ರೋ ಡಿಬೋಗೆ ಕೊಲ್ಕತ್ತಾ ಟಿಟಾಗರ್‌ನಿಂದ ಆಗಮಿಸಿದ್ದ ಏಳನೇ ರೈಲಿನ ಕಾರ್ಯಕ್ಷಮತೆಯ ಎಲ್ಲ ಪರೀಕ್ಷೆಗಳು ಪೂರ್ಣಗೊಂಡಿವೆ. ಈ ರೈಲನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಇದೇ ಜನವರಿ 15ರಂದು ಸಂಕ್ರಾಂತಿ ಹಬ್ಬದ ವೇಳೆ ಸೇವೆಗೆ ನಿಯೋಜಿಸಲಿದೆ. ಇದರಿಂದಾಗಿ ನಿಲ್ದಾಣದಲ್ಲಿ ಮೆಟ್ರೋಗಾಗಿ ಕಾಯುವ ಸಮಯ ಇಳಿಕೆ ಆಗಲಿದೆ.

ಆರ್‌ವಿ.ರಸ್ತೆ-ಬೊಮ್ಮಸಂದ್ರ ಮಾರ್ಗವು ಎಲೆಕ್ಟ್ರಾನಿಕ್ ಸಿಟಿಯ ಐಟಿ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸಿದ ಮೊದಲ ಮೆಟ್ರೋ ಮಾರ್ಗವಾಗಿದೆ. ಈ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿತ್ತು. ಇದರಿಂದ ಜನದಟ್ಟಣೆ ಸಹ ಏರಿಕೆ ಆಗಿತ್ತು. ಇದೀಗ ಏಳನೇ ರೈಲು ಜ.15ರ ಗುರುವಾರ ಸೇವೆ ಆರಂಭಿಸಲಿದೆ. ಇದರಿಂದಾಗಿ ಪೀಕ್ ಹವರ್‌ನಲ್ಲಿ ರೈಲು ಆವರ್ತನ ಸಮಯ ಹಾಲಿ 13 ನಿಮಿಷದಿಂದ 10ನಿಮಿಷಕ್ಕೆ ಇಳಿಕೆ ಆಗಲಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಮಾಹಿತಿ ನೀಡಿವೆ.
08 ರೈಲು ಆಗಮನ
ಕೊಲ್ಕತ್ತಾ ಟಿಟಾಗರ್ ನಿಂದ ನಮ್ಮ ಮೆಟ್ರೋ ಹಳದಿ ಮಾರ್ಗದ ಎಂಟನೇ ರೈಲು ಮುಂದಿನ ವಾರದಲ್ಲಿ ಆಗಮಿಸಲಿದೆ. ಈ ರೈಲಿನ ಕಾರ್ಯಕ್ಷಮತೆ, ಗುಣಮಟ್ಟ, ಸಾಮರ್ಥ್ಯ ಹಾಗೂ ಇತರ ಪರೀಕ್ಷೆಗಳು ನಡೆಯಲಿವೆ. ಅದೆಲ್ಲ ಪೂರ್ಣಗೊಳ್ಳುತ್ತಿದ್ದಂತೆ ಫೆಬ್ರವರಿ ಮೊದಲ ವಾರ ಇಲ್ಲವೇ ಮಧ್ಯ ಭಾಗಕ್ಕೆ ಎಂಟನೇ ರೈಲು ಸಹ ಸೇವೆಗೆ ನಿಯೋಜನೆ ಗೊಳ್ಳುವ ನಿರೀಕ್ಷೆಗಳು ಇವೆ. ಈಗಾಗಲೇ ಈ ರೈಲುಗಳು ಲಾರಿ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿವೆ.
ಪ್ರತಿ 5 ನಿಮಿಷಕ್ಕೊಂದರಂತೆ ಸಂಚಾರ ಯಾವಾಗ?
ಈ ಏಳನೇ ಮೆಟ್ರೋ ಮಾಹಿತಿಯನ್ನು ಪತ್ರಕರ್ತ ಮುತಿ-ಉರ್-ರೆಹಮಾನ್ ಸಿದ್ದಿಕಿ ಅವರು (@ever_pessimist) ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಹೇಳುವಂತೆ ಮುಂದಿನ ಏಪ್ರಿಲ್ ಇಲ್ಲವೇ ಮೇ ತಿಂಗಳಲ್ಲಿ ಇನ್ನಷ್ಟು ರೈಲುಗಳು ಸಂಖ್ಯೆ ಹೆಚ್ಚಾಗಲಿವೆ. ಆಗ ಪ್ರತಿ ಐದು ನಿಮಿಷಕ್ಕೆ ಒಂದರಂತೆ ಸಂಚಾರ ಮಾಡುವ ಸಾಧ್ಯತೆಗಳು ಇವೆ ಎಂದು ಅವರು ತಮ್ಮ ಪೋಸ್ಟ್‌ಗೆ ಬಂದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಪ್ರಯಾಣಿಕರ ಸಂಖ್ಯೆ ಹೆಚ್ಚಳ
ಕಳೆದ ವರ್ಷ ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿಯವರು ಹಳದಿ ಮಾರ್ಗವನ್ನು ಉದ್ಘಾಟಿಸಿದ್ದರು. ಅದಾಗಿ ಮಾರನೇ ದಿನ ವಾಣಿಜ್ಯ ಸಂಚಾರ ಆರಂಭವಾಗಿತ್ತು. ಅಂದು ಒಂದೇ ದಿನಕ್ಕೆ ಸುಮಾರು 30 ಸಾವಿರದಷ್ಟು ಜನರು ಪ್ರಯಾಣಿಸಿದ್ದರು. ಜನವರಿ 2026ರ ಹೊತ್ತಿಗೆ ಈ ಮಾರ್ಗದ ಪ್ರಯಾಣಿಕರ ಸಂಖ್ಯೆ ಸುಮಾರು 80 ಸಾವಿರ ದಾಟಿದೆ. ಈ ಮಾರ್ಗದ ಆರಂಭದಿಂದಾಗಿ ನೇರಳೆ ಮಾರ್ಗ ಹಾಗೂ ಹಸಿರು ಮಾರ್ಗದಲ್ಲಿ ಸಹ ದೈನಂದಿನ ಪ್ರಯಾಣಿಕರ ಹೆಚ್ಚಳ ಕಂಡು ಬಂದಿದೆ. ನಮ್ಮ ಮೆಟ್ರೋ ಮೂರು ಮಾರ್ಗಗಳಲ್ಲಿ ನಿತ್ಯ ಸುಮಾರು 10 ಲಕ್ಷ ಮಂದಿ ಸಂಚಾರ ಮಾಡುತ್ತಿದ್ದಾರೆ.












Click it and Unblock the Notifications