Namma Metro: ಈ ಮೆಟ್ರೋ ಮಾರ್ಗ ಕಾಮಗಾರಿ ಪೂರ್ಣ, ಸಂಚಾರಕ್ಕೆ ದಿನಾಂಕ ನಿಗದಿ ಬಾಕಿ
ಬೆಂಗಳೂರು, ಜನವರಿ 23: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರ ಮೆಚ್ಚಿನ ಆಯ್ಕೆಯಾಗಿದೆ. ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಹಾಗೂ ಸಮಯ ಉಳಿಸಲು ಪ್ರತಿನಿತ್ಯ ಸಾವಿರಾರು ಜನರು ಮೆಟ್ರೋದಲ್ಲಿ ಸಂಚಾರ ನಡೆಸುತ್ತಿದ್ದಾರೆ.
ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದಂತೆ ನಗರದ ವಿವಿಧ ಭಾಗಗಳಿಗೆ ಸಂಚಾರ ಆರಂಭಿಸುವ ದೃಷ್ಟಿಯಲ್ಲಿ ಕಾಮಗಾರಿಗಳು ಕೂಡ ಭರದಿಂದ ಸಾಗುತ್ತಿದೆ. ಆದರೆ ಇದೊಂದು ಮಾರ್ಗದಲ್ಲಿ ಕಾಮಗಾರಿ ಸಂಪೂರ್ಣಗೊಂಡರೂ ಸಹ ಸಂಚಾರ ಆರಂಭವಾಗಿಲ್ಲ.

ನಮ್ಮ ಮೆಟ್ರೋ ವಿವಿಧ ಮಾರ್ಗಗಳ ಕಾಮಗಾರಿ ನಡೆಯುತ್ತಿದೆ. ಆದರೆ ಹಸಿರು ಮಾರ್ಗದ ಕಾಮಗಾರಿ ಪೂರ್ಣ ಮುಗಿದರೂ, ಸಂಚಾರಕ್ಕೆ ಇನ್ನೂ ಮುಕ್ತವಾಗಿಲ್ಲ. ಬಾಕಿ ಉಳಿದಿದ್ದ ಸುಮಾರು 4 ಕಿ.ಮೀ. ಮಾರ್ಗ ನಿರ್ಮಾಣ ಸಂಪೂರ್ಣವಾಗಿ ಬಹಳ ಸಮಯವೇ ಕಳೆದರೂ ರೈಲು ಸಂಚಾರ ಆರಂಭವಾಗಿಲ್ಲ.
ನಮ್ಮ ಮೆಟ್ರೋ ಹಸಿರು ಮಾರ್ಗ ರೇಷ್ಮೆ ಸಂಸ್ಥೆಯಿಂದ-ಮಾದಾವರವರೆಗೆ ವಿಸ್ತಾರವಾಗಿದೆ. ಆದರೆ ಸದ್ಯ ನಾಗಸಂದ್ರವರೆಗೆ ಮಾತ್ರ ರೈಲು ಸಂಚಾರ ನಡೆಸುತ್ತಿದೆ. 2017ರ ಮೇ ತಿಂಗಳಲ್ಲಿ ನಮ್ಮ ಮೆಟ್ರೋ ಹಸಿರು ಮಾರ್ಗ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕಾಮಗಾರಿಗೆ 964 ಕೋಟಿ ರೂಪಾಯಿ ಮೀಸಲಿಡಲಾಗಿತ್ತು.
ಈ ಮಾರ್ಗದ ಕಾಮಗಾರಿಗೆ ಭೂಸ್ವಾಧೀನ ದೊಡ್ಡ ಸಮಸ್ಯೆಯಾಗಿದ್ದು, ಕೋರ್ಟ್‌ನಲ್ಲಿ ವ್ಯಾಜ್ಯ ಇತ್ಯರ್ಥವಾಗಲು ಸಮಯ ತೆಗೆದುಕೊಂಡಿತ್ತು. ಸುಮಾರು ಮೂರುನಾಲ್ಕು ವರ್ಷಗಳ ಬಳಿಕ ವ್ಯಾಜ್ಯ ಇತ್ಯರ್ಥವಾಗಿ ಕಾಮಗಾರಿ ಆರಂಭಿಸಲಾಗಿತ್ತು. ಕಾಮಗಾರಿ ಆರಂಭವಾಗಿದ್ದೇ ತಡ ಕೆಲಸಗಳು ವೇಗವಾಗಿ ನಡೆದು ಹಸಿರು ಮಾರ್ಗ ಸಂಪೂರ್ಣಗೊಂಡಿತ್ತು.
ಸದ್ಯ ನಮ್ಮ ಮೆಟ್ರೋ ಹಸಿರು ಮಾರ್ಗ ಪೂರ್ಣಗೊಂಡಿದ್ದರು ಸಹ ನಾಗಸಂದ್ರದಿಂದ ಮಾದಾವರವರೆಗೆ ಇರುವ ಉಳಿದ 3.77 ಕಿ.ಮೀ. ಮಾರ್ಗದಲ್ಲಿ ರೈಲು ಸಂಚಾರ ಇನ್ನೂ ಆರಂಭವಾಗಿಲ್ಲ. ಈ ಕಾಮಗಾರಿಯ ನಡುವೆ ಕೊರೊನಾದಂತಹ ಕಠಿಣ ಪರಿಸ್ಥಿತಿ ಬಂದಂತಹ ಕಾರಣ ಆರ್ಥಿಕ ಬಿಕ್ಕಟ್ಟು ಕೂಡ ಆರಂಭವಾಗಿತ್ತು.
ಸದ್ಯ ಎಲ್ಲಾ ಸವಾಲುಗಳನ್ನು ದಾಟಿ ಮೆಟ್ರೋ ಹಸಿರು ಮಾರ್ಗ ಪೂರ್ಣಗೊಂಡಿದ್ದು, ಕೇಂದ್ರ ರೈಲ್ವೆ ಸುರಕ್ಷತಾ ಆಯುಕ್ತರು ಭೇಟಿ ನೀಡಿ ಪರಿಶೀಲಿಸುವುದು ಮಾತ್ರ ಬಾಕಿ ಇದೆ. ಇನ್ನು ಕೇಂದ್ರ ರೈಲ್ವೆ ಸುರಕ್ಷತಾ ಆಯುಕ್ತರು ಭೇಟಿ ಬಳಿಕ ರೈಲು ಸಂಚಾರದ ದಿನಾಂಕ ನಿಗದಿಯಾಗಲಿದೆ. ಇನ್ನು ಈ ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ ಮೂರು ನಿಲ್ದಾಣಗಳಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ರೇಷ್ಮೆ ಸಂಸ್ಥೆಯಿಂದ - ಮಾದಾವರವರೆಗೆ ವಿಸ್ತಾರವಾದ ಈ ನಮ್ಮ ಮೆಟ್ರೋ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ತುಮಕೂರು ಕಡೆಯ ರಸ್ತೆಯ ಟ್ರಾಫಿಕ್ ಜಾಮ್ ಕಡಿಮೆಯಾಗಲಿದೆ. ಮಾದಾವರವರೆಗೆ ಮೆಟ್ರೋ ಪ್ರಾರಂಭವಾದರೆ, ದಾಬಸ್‌ಪೇಟೆ, ನೆಲಮಂಗಲ ಕಡೆಯಿಂದ ಪೀಣ್ಯ ಕೈಗಾರಿಕಾ ಘಟಕಕ್ಕೆ ಬರುವ ಕಾರ್ಮಿಕರಿಗೆ 4 ಕಿ.ಮೀ ಹೆಚ್ಚಿನ ಮೆಟ್ರೋ ಸೇವೆ ಲಭ್ಯವಾಗಲಿದೆ.












Click it and Unblock the Notifications