RDSO ಪ್ರಮಾಣಪತ್ರ ನೀಡಿದ್ರೂ ಆಗಸ್ಟ್ 15ಕ್ಕೆ ಓಪನ್ ಆಗಲ್ಲ ನಮ್ಮ ಮೆಟ್ರೋ ಪಿಂಕ್ ಲೈನ್! ಕಾರಣವೇನು?
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಬಹುನಿರೀಕ್ಷೆಯ ಕಾಳೇನ ಅಗ್ರಹಾರ-ತಾವರೆಕೆರೆವರೆಗೆ ಗುಲಾಬಿ ಮಾರ್ಗ (Pink Line Metro) ಇದೇ ಆಗಸ್ಟ್ 15ರಂದು ಪ್ರಯಾಣಿಕರಿಗೆ ಮುಕ್ತಗೊಳ್ಳಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಮೆಟ್ರೋ ಪ್ರಯಾಣಿಕರ ಈ ಕನಸು ನನಸಾಗಲು ಇನ್ನಷ್ಟು ದಿನಗಳನ್ನು ಕಾಯಬೇಕಿದೆ. ಸದಸ್ಯ ಖುಷಿ ವಿಚಾರವೆಂದರೆ RDSO ಗುಲಾಬಿ ಮಾರ್ಗದಲ್ಲಿ ನಡೆಸಿದ್ದ ಪರೀಕ್ಷೆಗಳು ಯಶಸ್ವಿಯಾಗಿವೆ. ಹಾಗಾದ್ರೆ ಓಪನ್ ಯಾವಾಗ? ಮುಂದಿದೆ ಮಾಹಿತಿ.
ಹೌದು, ಒಟ್ಟು ಸುಮಾರು 21 ಕಿಲೋ ಮೀಟರ್ ಉದ್ದದ 'ಗುಲಾಬಿ ಮಾರ್ಗ'ವನ್ನು ಎರಡು ಹಂತಗಳಲ್ಲಿ ಉದ್ಘಾಟಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಕಳೆದ ಮೇ ತಿಂಗಳಲ್ಲೆ ಲೋಕಾರ್ಪಣೆ ಆಗಬೇಕಿದ್ದ 7.5ಕಿಲೋ ಮೀಟರ್ ಉದ್ದದ 'ಕಾಳೇನ ಅಗ್ರಹಾರ-ತಾವರೆಕೆರೆ' ಮಾರ್ಗವು ಇದೇ ಆಗಸ್ಟ್ 15ರಂದು ಪ್ರಯಾಣಿಕರಿಗೆ ಮುಕ್ತಗೊಳ್ಳಲಿದೆ ಎಂದು ಹೇಳಲಾಗಿತ್ತು. ಆದರೆ ವಾಣಿಜ್ಯ ಕಾರ್ಯಾಚರಣೆಗೂ ಮುನ್ನ ಬೇಕಾದ ಅಂತಿಮ ಶಾಸನ ಬದ್ಧ ಒಪ್ಪಿಗೆಗಳು ಸಿಗುವುದು ಬಾಕಿ ಇದೆ.

RDSO ಪರೀಕ್ಷೆ ಯಶಸ್ವಿ, ಇನ್ನೆರಡು ಒಪ್ಪಿಗೆ ಬೇಕು
ಕಾಮಗಾರಿ ಪೂರ್ಣಗೊಂಡ ಎತ್ತರಿಸಿದ 'ಗುಲಾಬಿ ಮಾರ್ಗ'ದ ಕಾರಿಡಾರ್ ಗಾಗಿ ಆಗಮಿಸಿದ್ದ ಡ್ರೈವರ್ ರೈಲುಗಳ ತಪಾಸಣೆ, ಪರೀಕ್ಷೆಗಳನ್ನು ನಡೆಸಲಾಗಿದೆ. ಅಂತಿಮವಾಗಿ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆಯು (RDSO) ಆಗಸ್ಟ್ 12ರಂದು ಹೊಸ ರೋಲಿಂಗ್ ಸ್ಟಾಕ್ ನ ಆಸಿಲೇಶನ್ (Oscillation) ಮತ್ತು ತುರ್ತು ಬ್ರೇಕ್ (Emergency Brake Distance) ಪರೀಕ್ಷೆಗಳನ್ನು 'ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ; ಯಶಸ್ವಿಯಾಗಿ ನಡೆಸಿದೆ. ಇದಾದ ನಂತರ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL)ಮಧ್ಯಂತರ ವೇಗ ಪ್ರಮಾಣಪತ್ರವನ್ನು 12ನೇ ಆಗಸ್ಟ್ 2026ರಂದು ಆರ್ ಡಿಎಸ್ಒ ನೀಡಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಸಂಸ್ಥೆಯಿಂದ ಪೂರೈಸಿರುವ ಹೊಸ ರೋಲಿಂಗ್ ಸ್ಟಾಕ್‌ಗೆ ರೈಲ್ವೆ ಮಂಡಳಿಯ ಅನುಮೋದನೆ (Railway Board Sanction) ಅಗತ್ಯವಿದೆ. ಜೊತೆಗೆ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಎತ್ತರಿಸಿದ ಮಾರ್ಗಕ್ಕೆ ಮುಂಬರುವ ದಿನಗಳಲ್ಲಿ ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ (CMRS) ಪರಿಶೀಲನೆ ಮತ್ತು ಅನುಮೋದನೆ ದೊರೆಯಬೇಕಿದೆ.
ಈ ಮೇಲಿನ ಬಾಕಿ ಎರಡು ಕಡೆಗಳಿಂದ ಗುಲಾಬಿ ಮಾರ್ಗಕ್ಕೆ ಅಂತಿಮ ಅನುಮೋದನೆ ದೊರೆಯಲು ಇನ್ನೂ ಕೆಲವು ವಾರಗಳು ಹಿಡಿಯಬಹುದು. ಎಲ್ಲವು ಅಂದುಕೊಂಡಂತಾದರೆ ಸೆಪ್ಟಂಬರ್ ಆರಂಭದಲ್ಲಿ ಇಲ್ಲವೇ ಮಧ್ಯ ಭಾಗದ ಹೊತ್ತಿಗೆ 6 ನಿಲ್ದಾಣಗಳನ್ನು ಹೊಂದಿರುವ (ಕಾಳೇನ ಅಗ್ರಹಾರ-ತಾವರೆಕೆರೆ) ಮೊದಲ ಹಂತದ ಗುಲಾಬಿ ಮಾರ್ಗ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಶೀಘ್ರವೇ ಈ ಕುರಿತು ಬಿಎಂ ಆರ್ ಸಿಎಲ್ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ವಿಧಾನಸೌಧ ಮೆಟ್ರೋ ನಿಲ್ದಾಣ ಸ್ಥಗಿತ
ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬೆಂಗಳೂರು ವಿಧಾನಸೌಧದಲ್ಲಿ 'ಫ್ರೀಡಂ ಹಬ್ಬ' ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ನೇರಳೆ ಮಾರ್ಗದಲ್ಲಿ ಬರುವ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರೋ (ವಿಧಾನಸೌಧ) ನಿಲ್ದಾಣವನ್ನು ಪ್ರಯಾಣಿಕರ ಹಿತರಕ್ಷಣೆ ದೃಷ್ಟಿಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಆ.15ರ ಶನಿವಾರ ಬೆಳಗ್ಗೆ 9.30ರಿಂದ ರಾತ್ರಿ 10 ಗಂಟೆವರೆಗೆ ಬಂದ್ ಮಾಡಲಾಗುತ್ತದೆ. ರಾತ್ರಿ 10 ಗಂಟೆ ನಂತರ ಎಂದಿನಂತೆ ಹೆಚ್ಚುವರಿ ರೈಲು ಸಹಿತ ಮೆಟ್ರೋ ಸೇವೆ ಸಿಗಲಿದೆ. ಅಂದು ಜನದಟ್ಟಣೆ ಹೆಚ್ಚಿರುವ ಕಾರಣ ಅಧಿಕ ರೈಲುಗಳನ್ನು ಓಡಿಸಲಾಗುತ್ತದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿದೆ.


Click it and Unblock the Notifications
