Namma Metro Pink Line: ಸುರಂಗ ಕಾಮಗಾರಿಯಲ್ಲಿ ಪ್ರಗತಿ, ಶೇ. 98ರಷ್ಟು ಸುರಂಗ ಕಾರ್ಯ ಪೂರ್ಣ
ಬೆಂಗಳೂರು, ಸೆಪ್ಟಂಬರ್ 04: ಬೆಂಗಳೂರು ನಮ್ಮ ಮಟ್ರೋ 'ಗುಲಾಬಿ ಮಾರ್ಗ'ದಲ್ಲಿ ಬಿಎಂಆರ್‌ಸಿಎಲ್ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಈ ಮಾರ್ಗದಲ್ಲಿ 936.6 ಮೀ ಸುರಂಗ ಕೊರೆಯುವ ಕಾಮಗಾರಿಯು ಬುಧವಾರ (ಸೆಪ್ಟಂಬರ್ 4ರಂದು) ಪೂರ್ಣಗೊಳಿಸಿ ಟನಲ್ ಬೋರಿಂಗ್ ಮಷಿನ್ ಹೊರ ಬಂದಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಾಹಿತಿ ನೀಡಿದೆ. ಈ ಮಾರ್ಗದ ಸುರಂಗ ಕೊರೆಯುವ ಕೆಲಸ ನವೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ.
ನಾಗವಾರ ನಿಲ್ಯಾಣದ ಕಟ್ ಮತ್ತು ಕವರ್ ಸಾಫ್ಟ್‌ನಲ್ಲಿ, 'ತುಂಗಾ' ಟಿಬಿಎಂ ಇಂದು ಪೂರ್ಣ ಸುರಂಗ ಕೊರೆದು ಹೊರಬಂದಿದೆ. ಸುರಂಗ ಕೊರೆಯುವ ಯಂತ್ರ ತುಂಗಾ (ಟಿಬಿಎಂ) ಇಂದು ದಿನಾಂಕ 04ನೇ ಸಪ್ಟೆಂಬರ್ 2024 ರಂದು ಸೌತ್ ಕಟ್ ಮತ್ತು ಕವರ್ ಶಾಫ್ಟ್ ನಲ್ಲಿ 936.6 ಮೀ ಸುರಂಗ ಕೊರೆಯುವ ಕಾಮಗಾರಿ ಪೂರ್ಣಗೊಳಿಸಿ ಹೊರಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸುರಂಗ ಕೊರೆಯುವ ಯಂತ್ರ ಕಾಡುಗೊಂಡನಹಳ್ಳಿ ನಿಲ್ದಾಣದಲ್ಲಿ 2024ರ ಫೆಬ್ರವರಿ 03ರಂದು ಟನಲ್ ಕೊರೆಯಲು ಆರಂಭಿಸಿತ್ತು. ಅಂದು ಪ್ರಾರಂಭವಾಗಿದ್ದ ಸುರಂಗ ಕಾಮಗಾರಿಯು ಇಂದು 936.6 ಮೀಟರ್ ಕೊರೆಯುವ ಮೂಲಕ ಅಂತ್ಯವಾಗಿದೆ. ಈ ತುಂಗಾ ಟಿಬಿಎಂ ನಾಗವಾರ ನಿಲ್ದಾಣದ ಸೌತ್ ಕಟ್ ಮತ್ತು ಕವರ್ ಶಾಫ್ಟ್ ನಲ್ಲಿ ಪೂರ್ಣಗೊಳಿಸಿ ಹೊರ ಬಂದಿದೆ ಎಂದು ಬಿಎಂಆರ್‌ಸಿಎಲ್ ಹರ್ಷ ವ್ಯಕ್ತಪಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಫೋಟೋಗಳನ್ನು ಹಂಚಿಕೊಂಡಿದೆ.
ಶೇ. 98 ರಷ್ಟು ಸುರಂಗ ಕಾರ್ಯ ಪೂರ್ಣ
ಈ ಮೂಲಕ ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಉದ್ದೇಶಿತ ಒಟ್ಟು 20992 ಮೀಟರ್ ಸುರಂಗ ಕಾಮಗಾರಿಯಲ್ಲಿ 20582.7 ಮೀಟರ್ ಕೆಲಸ ಪೂರ್ಣಗೊಂಡಿದೆ. ಅಂದರೆ ಶೇ 98%. ಪೂರ್ಣಗೊಂಡಿದ್ದು, ಒಟ್ಟಾರೆ ಮೆಟ್ರೋ ರೀಚ್-6ರ ಸುರಂಗ ಮಾರ್ಗಕ್ಕಾಗಿ ನಿಯೋಜಿಸಲಾದ 9 ಟಿಬಿಎಂಗಳಲ್ಲಿ ಇಲ್ಲಿಯವರೆಗೆ 8 ಟಿಬಿಎಂಗಳು ಸುರಂಗಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸಿ ಹೊರ ಬಂದಿವೆ.
ಇದೇ ಮಾರ್ಗದಲ್ಲಿ ಬಾಕಿ ಇರುವ ಇನ್ನೊಂದು ಟಿಬಿಎಂ ತನ್ನ ಕೆಲಸ ಪೂರ್ಣಗೊಳಿಸಿದರೆ ಒಟ್ಟು ಶೇಕಡಾ 100 ರಷ್ಟು ಕೆಲಸ ಪೂರ್ಣಗೊಂಡಂತಾಗಲಿದೆ. ಈ ಕೆಲಸ ಮುಂದಿನ ನವೆಂಬರ್‌ಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.












Click it and Unblock the Notifications