Namma Metro: ದಿನಕ್ಕೊಂದು ಲಕ್ಷ ಪ್ರಯಾಣಿಕರನ್ನು ಕಳೆದುಕೊಂಡ ನಮ್ಮ ಮೆಟ್ರೋ

ಬೆಂಗಳೂರು, ಮಾರ್ಚ್‌ 10: ಬೆಂಗಳೂರು ಜನರ ಸಾರಿಗೆ ಸಂಚಾರದ ಜೀವನಾಡಿಯಾದ ನಮ್ಮ ಮೆಟ್ರೋ ಪ್ರಯಾಣ ಈಗ ಜೇಬಿಗೆ ಕತ್ತರಿ ಹಾಕುತ್ತಿದೆ. 2017ರ ಬಳಿಕ ಮೊದಲ ಬಾರಿಗೆ ನಮ್ಮ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಲಾಗಿದೆ. ಫೆಬ್ರವರಿ 9ರ ಭಾನುವಾರದಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ. ಪ್ರಯಾಣ ದರ ಏರಿಕೆ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕುಸಿತವಾಗಿದೆ. ಬಿಎಂಆರ್‌ಸಿಎಲ್ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಿದ್ದರೂ ಸಹ ಪ್ರಯಾಣಿಕರು ಬಿಎಂಟಿಸಿ ಬಸ್, ಖಾಸಗಿ ವಾಹನಗಳ ಮೊರೆ ಹೋಗಿದ್ದು, ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ ಉಂಟಾಗಿದೆ.

ನಮ್ಮ ಮೆಟ್ರೋ ಪರಿಷ್ಕೃತ ಪ್ರಯಾಣ ದರ ಜಾರಿಗೆ ಬಂದು ಒಂದು ತಿಂಗಳು ಕಳೆದಿದೆ. ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಪ್ರತಿ ದಿನ ಒಂದು ಲಕ್ಷ ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ. ಮೆಟ್ರೋ ಪ್ರಯಾಣ ದರವನ್ನು ಕಡಿಮೆ ಮಾಡಬೇಕು ಎಂದು ಪ್ರತಿಭಟನೆಗಳು ಇನ್ನೂ ಸಹ ಮುಂದುವರೆದಿದೆ. ಆದರೆ ಬಿಎಂಆರ್‌ಸಿಎಲ್ ಯಾವುದೇ ತೀರ್ಮಾನ ಕೈಗೊಂಡಿಲ್ಲ.

Namma Metro Passengers Numbers After Fare Hike

ಅಂಕಿ ಅಂಶಗಳ ಮಾಹಿತಿ: ಬಿಎಂಆರ್‌ಸಿಎಲ್ ವೆಬ್‌ಸೈಟ್‌ ಪ್ರಕಾರ ಜನವರಿಯಲ್ಲಿ ನಮ್ಮ ಮೆಟ್ರೋದಲ್ಲಿ ಪ್ರಯಾಣ ನಡೆಸಿದ ಜನರ ಸಂಖ್ಯೆ 2,49,14,736. ದರ ಏರಿಕೆ ಬಳಿಕ ಫೆಬ್ರವರಿ ತಿಂಗಳಿನಲ್ಲಿ ಮೆಟ್ರೋದಲ್ಲಿ ಸಂಚಾರ ನಡೆಸಿದ ಜನರ ಸಂಖ್ಯೆ 2,09,90,894. ಸುಮಾರು 40 ಲಕ್ಷಕ್ಕೂ ಅಧಿಕ ಪ್ರಯಾಣಿಕರ ಕೊರತೆ ಉಂಟಾಗಿದೆ ಎಂದು ಈ ಮೂಲಕ ತಿಳಿಯಬಹುದು.

ನಮ್ಮ ಮೆಟ್ರೋದಲ್ಲಿ ಪ್ರತಿ ದಿನ 8.5 ಲಕ್ಷದಿಂದ 9 ಲಕ್ಷದ ತನಕ ಜನರು ಸಂಚಾರವನ್ನು ನಡೆಸುತ್ತಿದ್ದರು. ಆದರೆ ಈಗ 7.5 ಲಕ್ಷದಿಂದ 8 ಲಕ್ಷದ ತನಕ ಜನರು ಪ್ರತಿದಿನ ಸಂಚಾರವನ್ನು ನಡೆಸುತ್ತಿದ್ದಾರೆ. ಮಾರ್ಚ್ 8ರ ಶನಿವಾರ ನಮ್ಮ ಮೆಟ್ರೋದಲ್ಲಿ ಸಂಚಾರ ನಡೆಸಿದ ಜನರ ಸಂಖ್ಯೆ 6,68,379 ಎಂಬ ಮಾಹಿತಿ ಲಭ್ಯವಾಗಿದೆ.

ಮೆಟ್ರೋ ಪ್ರಯಾಣಿಕರ ಸಂಖ್ಯೆ 8 ಲಕ್ಷದಷ್ಟಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ವಿವಿಧ ಸಮೀಕ್ಷೆಗಳ ಮಾಹಿತಿಯಂತೆ ಫೆಬ್ರವರಿ 9ರ ದರ ಏರಿಕೆ ಬಳಿಕ ಖಾಸಗಿ ವಾಹನ ಬಳಕೆ ಮಾಡುವವರ ಸಂಖ್ಯೆ, ಬಿಎಂಟಿಸಿ ಬಸ್ ಬಳಕೆ ಮಾಡುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದರಿಂದಾಗಿ ನಗರದಲ್ಲಿ ಮಾಲಿನ್ಯದ ಪ್ರಮಾಣವೂ ಹೆಚ್ಚಾಗಿದೆ.

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಕುರಿತು ಜನರು ಆಕ್ರೋಶಗೊಂಡರು. ರಾಜ್ಯ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಕಡೆ ಕೈ ತೋರಿಸಿತು. ಅಂತಿಮವಾಗಿ ಫೆಬ್ರವರಿ 13ರಂದು ದರವನ್ನು ಕಡಿಮೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಎಂಆರ್‌ಸಿಎಲ್‌ಗೆ ಸೂಚನೆ ಕೊಟ್ಟರು.

ಬಿಎಂಆರ್‌ಸಿಎಲ್ ಗರಿಷ್ಠ ಏರಿಕೆಯನ್ನು ಶೇ 100 ರಿಂದ 71ಕ್ಕೆ ಇಳಿಕೆ ಮಾಡಲಾಗಿದೆ ಎಂದು ಘೋಷಣೆ ಮಾಡಿತು. ಈ ದರ ಇಳಿಕೆ ಸಾಮಾನ್ಯ ಜನರಿಗೆ ಅರ್ಥವಾಗಲೇ ಇಲ್ಲ. ಆದ್ದರಿಂದ ಜನರು ಮೆಟ್ರೋ ಬಿಟ್ಟು ಬೇರೆ ಸಾರಿಗೆ ವ್ಯವಸ್ಥೆ ಮೊರೆ ಹೋದರು. ದರ ಏರಿಕೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹೊರೆ ಉಂಟು ಮಾಡಿತು.

ಬೆಂಗಳೂರು ಮೆಟ್ರೋ ಪ್ರಯಾಣಿಕರ ವೇದಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ನೇ ಸಾಲಿನ ಬಜೆಟ್‌ನಲ್ಲಿ ಮೆಟ್ರೋ ಪ್ರಯಾಣ ದರ ಇಳಿಕೆ ಘೋಷಣೆ ಮಾಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿತ್ತು. ಆದರೆ ಮೆಟ್ರೋ ಜಾಲ ವಿಸ್ತರಣೆ ಬಗ್ಗೆ ಮಾತ್ರ ಘೋಷಣೆ ಮಾಡಿದರು. ದರ ಇಳಿಕೆ ಕುರಿತು ಯಾವುದೇ ಪ್ರಸ್ತಾಪವನ್ನು ಮಾಡಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+