Namma Metro: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭಾನುವಾರ ಚಲಿಸುವುದಿಲ್ಲ ರೈಲು- ಎಲ್ಲೆಲ್ಲಿ, ಯಾವಾಗ ತಿಳಿಯಿರಿ
ಬೆಂಗಳೂರು, ಆಗಸ್ಟ್ 26: ಬಿಎಂಆರ್‌ಸಿಎಲ್ ಅಧಿಕಾರಿಗಳು ಬೆಂಗಳೂರು ಮೆಟ್ರೋದ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋದ ಕೆಲ ಮಾರ್ಗಗಳಲ್ಲಿ ಭಾನುವಾರ ರೈಲುಗಳನ್ನು ಓಡಿಸದಿರಲು ನಿರ್ಧರಿಸಿದ್ದಾರೆ. ನೇರಳೆ ಮಾರ್ಗದ ಮೂರು ಸ್ಟ್ರೆಚ್‌ಗಳಲ್ಲಿ ರೈಲು ಸೇವೆಗೆ ವ್ಯತ್ಯಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೃಷ್ಣರಾಜಪುರ (ಕೆಆರ್ ಪುರ)ದಿಂದ ಬೈಯಪ್ಪನಹಳ್ಳಿ ಮತ್ತು ಕೆಂಗೇರಿಯಿಂದ ಚಲ್ಲಘಟ್ಟ ಮೆಟ್ರೊ ನಿಲ್ದಾಣಗಳ ನಡುವೆ ಮಾರ್ಗದ ವಿಸ್ತರಣೆ ಕಾರ್ಯ ನಡೆಯುತ್ತಿದೆ. ಇದಕ್ಕೆ ಅನುಕೂಲ ಮಾಡಿಕೊಡಲು ನೇರಳೆ ಮಾರ್ಗದಲ್ಲಿ ಬೆಂಗಳೂರು ಮೆಟ್ರೊದ ಸೇವೆಗಳನ್ನ ಭಾನುವಾರ ಸ್ಥಗಿತಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕರು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ರ ನಡುವೆ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೇವೆಗಳಲ್ಲಿ ವ್ಯತ್ಯಯವಾಗುವ ಮಾರ್ಗಗಳ ಪಟ್ಟಿ ಇಲ್ಲಿದೆ
ಮೈಸೂರು ರಸ್ತೆ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳ ನಡುವೆ
ಬೈಯಪ್ಪನಹಳ್ಳಿ ಮತ್ತು ಎಸ್‌ವಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ
ವೈಟ್‌ಫೀಲ್ಡ್ ( ಕಾಡುಗೋಡಿ ) ಮತ್ತು ಕೆಆರ್ ಪುರ ಮೆಟ್ರೋ ನಿಲ್ದಾಣಗಳ ನಡುವೆ
'ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ರ ವರೆಗೆ, ನೇರಳೆ ಮಾರ್ಗದ ಸ್ವಾಮಿ ವಿವೇಕಾನಂದ ರಸ್ತೆ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ರೈಲು ಸೇವೆಗಳು ಲಭ್ಯವಿರುತ್ತವೆ' ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಪ್ರಕಟಣೆ ತಿಳಿಸಿದೆ.
'ಮಧ್ಯಾಹ್ನ 1 ಗಂಟೆಯ ನಂತರ ಬೈಯಪ್ಪನಹಳ್ಳಿಯಿಂದ ಕೆಂಗೇರಿ ಮೆಟ್ರೋ ನಿಲ್ದಾಣ ಮತ್ತು ಕೆಆರ್ ಪುರದಿಂದ ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣಗಳಿಗೆ ಎಂದಿನಂತೆ ರಾತ್ರಿ 11 ರ ವರೆಗೆ ನಿಯಮಿತ ರೈಲು ಸೇವೆಗಳು ಲಭ್ಯವಿರುತ್ತವೆ' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗ್ರೀನ್ ಲೈನ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಬೈಯಪ್ಪನಹಳ್ಳಿ ಮತ್ತು ಕೃಷ್ಣರಾಜಪುರದ ನಡುವಿನ ಮೆಟ್ರೋ ಮಾರ್ಗವು ಕಾರ್ಯಾಚರಣೆ ಆರಂಭಿಸಲು ಇನ್ನು ಒಂದು ತಿಂಗಳು ಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. ಬೆಂಗಳೂರು ಮೆಟ್ರೋದ ನೇರಳೆ ಮಾರ್ಗದಲ್ಲಿ ಎರಡು ಕಿಲೋಮೀಟರ್ ಬೈಯಪ್ಪನಹಳ್ಳಿ-ಕೃಷ್ಣರಾಜಪುರಂ ಮಾರ್ಗವನ್ನು ಸೆಪ್ಟೆಂಬರ್‌ನಲ್ಲಿ ಉದ್ಘಾಟಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು.
ನೇರಳೆ ಮಾರ್ಗಕ್ಕೆ ಸಂಪರ್ಕಿಸುವ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿರುವ ಹೊರತಾಗಿಯೂ ಪ್ರತಿ ತಿಂಗಳು ಗಡುವನ್ನು ವಿಸ್ತರಿಸಲಾಗುತ್ತಿದೆ. ಈ ಮೊದಲು, ಲಿಂಕ್ ಅನ್ನು ಜೂನ್‌ನಲ್ಲಿ ಉದ್ಘಾಟಿಸಲು ಯೋಜಿಸಲಾಗಿತ್ತು. ಆದರೆ ಆಗಸ್ಟ್‌ಗೆ ಮುಂದೂಡಲಾಯಿತು. ಇದೀಗ ಮತ್ತೆ ದಿನಾಂಕ ವಿಸ್ತರಣೆಯಾಗಿದ್ದು, ಸೆಪ್ಟೆಂಬರ್‌ನಲ್ಲಿ ಉದ್ಘಾಟನೆ ನಡೆಯುವ ಸಾಧ್ಯತೆ ಇದೆ.
ಬೈಯಪ್ಪನಹಳ್ಳಿ- ಕೃಷ್ಣರಾಜಪುರಂ ಮಾರ್ಗದಲ್ಲಿ ಜುಲೈನಲ್ಲಿ ಪ್ರಾಯೋಗಿಕ ಚಾಲನೆಯನ್ನು ನಡೆಸಲಾಯಿತು.
ಮಾರ್ಗದ ಉದ್ಘಾಟನೆಗೂ ಮೊದಲು, ಟ್ರ್ಯಾಕ್ ಜೋಡಣೆ, ವೇಗ ಮತ್ತು ನಾಗರಿಕ ಇಂಟರ್ಫೇಸ್ ಮತ್ತು ಇತರ ತಾಂತ್ರಿಕ ಸವಾಲುಗಳನ್ನು ಪರಿಶೀಲಿಸಲು ಪ್ರಾಯೋಗಿಕ ಸಂಚಾರವನ್ನು ನಡೆಸಲಾಯಿತು. ಅದರ ಜೊತೆಗೆ, ಬೆನ್ನಗಾನಹಳ್ಳಿಯ ಭಾರತೀಯ ರೈಲ್ವೆ ಹಳಿಗಳ ಮೇಲ್ಭಾಗದಲ್ಲಿ ಸ್ಥಾಪಿಸಲಾದ ಓಪನ್ ವೆಬ್ ಗ್ರೈಂಡರ್ ನಲ್ಲಿ ಲೋಡ್ ಪರೀಕ್ಷೆಯನ್ನು ಸಹ ನಡೆಸಲಾಯಿತು.
ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ (ಸಿಎಂಆರ್‌ಎಸ್) ಹಸಿರು ನಿಶಾನೆ ಪಡೆದ ನಂತರ ಈ ಮಾರ್ಗದ ಉದ್ಘಾಟನೆ ನಡೆಯಲಿದೆ. ಅವರು ಪ್ರಾಯೋಗಿಕ ಸಂಚಾರಗಳಿಂದ ಸಂಗ್ರಹಿಸಿದ ಡೇಟಾವನ್ನು ಮೌಲ್ಯಮಾಪನ ಮಾಡುತ್ತಾರೆ.












Click it and Unblock the Notifications