Bengaluru metro: ಮಾಗಡಿ ರಸ್ತೆ ಕಾರಿಡಾರ್, ಡಿಪಿಆರ್ ಬಗೆಗಿನ ಅಪ್ಡೇಟ್ ಮಾಹಿತಿ
ಬೆಂಗಳೂರು, ನವೆಂಬರ್ 13: ಬೆಂಗಳೂರಿನ ಪ್ರಮುಖ ಮೆಟ್ರೋ ಮಾರ್ಗ ಯೋಜನೆಗಳಲ್ಲಿ ಒಂದಾಗಿರುವ ಮಾಗಡಿ ರಸ್ತೆ ಕಾರಿಡಾರ್ ನಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಆರಂಭದಲ್ಲಿ ಮೂರು ಬೋಗಿಗಳನ್ನು ಓಡಿಸುವ ಚಿಂತನೆಯಲ್ಲಿ ಇದೆ.
ನಮ್ಮ ಮೆಟ್ರೋ ಯೋಜನೆಗಳ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನೀಡಿದ್ದ ಯೋಜನಾ ಸಮಗ್ರ ವರದಿ (DPR)ಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಒಪ್ಪಿಗೆ ನೀಡಿಲ್ಲ. ಯೋಜನೆಯಲ್ಲಿ ಆರು ಬೋಗಿಗಳನ್ನು ಪ್ರಸ್ತಾಪ ಹಾಗೂ ಇನ್ನಿತರ ಕಾರಣಗಳಿಂದ ಅನುಮೋದನೆ ನೀಡದೇ ಡಿಪಿಆರ್ ಪರಿಷ್ಕರಣೆಗೆ ಕೇಳಿತ್ತು. ಇದಾದ ಬೆನಲ್ಲೆ ಮೂರು ಬೋಗಿಗಳನ್ನು ಓಡಿಸುವ ಸಾಧ್ಯತೆಗಳು ಇವೆ.

ಕರ್ನಾಟಕ ರಾಜ್ಯ ಸರ್ಕಾರ 2022ರ ಅಂತ್ಯದಲ್ಲಿ ಎರಡು ಮೆಟ್ರೋ ಹಂತ 3 ಕಾರಿಡಾರ್‌ಗಳನ್ನು ಅನುಮೋದಿಸಿತು.ಆದರೆ ಹೊಸಹಳ್ಳಿ-ಕಡಬಗೆರೆ ಕಾರಿಡಾರ್ ಮಾಗಡಿ ರಸ್ತೆ (12.5 ಕಿಮೀ) ಮತ್ತು ಜೆಪಿ ನಗರ 4 ನೇ ಹಂತ-ಕೆಂಪಾಪುರ ಹೊರ ವರ್ತುಲ ರಸ್ತೆ-ಪಶ್ಚಿಮ (32.1 ಕಿಮೀ)ವರೆಗಿನ ಮಾರ್ಗದ ಯೋಜನೆಗೆ ಅನುಮೋದನೆ ನೀಡದೇ ಡಿಪಿಆರ್ ಲೋಪ ಸರಿಪಡಿಲು ಕೇಂದ್ರ ಸೂಚಿಸಿತ್ತು ಎಂದು 'ಮನಿ ಕಂಟ್ರೋಲ್' ವರದಿ ಮಾಡಿದೆ.
ಮಾಗಡಿ ರಸ್ತೆ ಯೋಜನೆಯಲ್ಲಿ ಆರು ಬೋಗಿ ಸೇವೆ ಇಲ್ಲ
ಬೆಂಗಳೂರಿನಲ್ಲಿ ಹಾಲಿ 73 ಕಿಮೀ ಉದ್ದದ ನಮ್ಮ ಮೆಟ್ರೋ ಜಾಲದ ಎರಡು ಲೈನ್‌ಗಳಲ್ಲಿ ಆರು ಬೋಗಿಗಳ ರೈಲುಗಳು ಸಂಚಾರ ಸೇವೆ ನೀಡುತ್ತಿವೆ. ಮಾಗಡಿ ರಸ್ತೆಯುದ್ದಕ್ಕೂ ಆರು ಬೋಗಿಗಳ ರೈಲುಗಳ ಸಂಚಾರಕ್ಕೆ ಅವಕಾಶ ಇಲ್ಲ. ಹೀಗಾಗಿ ಈ ಯೋಜನೆಯಲ್ಲಿ ನಾವು ಆರಂಭದಲ್ಲಿ ಮೂರು ಬೋಗಿಗಳ ರೈಲುಗಳನ್ನು ಓಡಿಸುತ್ತೇವೆ. ಬೇಡಿಕೆಗೆ ಅನುಗುಣವಾಗಿ ರೈಲು ಬೋಗಿ ಸಾಮರ್ಥ್ಯ ಹೆಚ್ಚಿಸಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾಹಿತಿ ನೀಡಿದ್ದಾರೆ.
ಮಾಗಡಿ ರಸ್ತೆ- ಹೊರವರ್ತುಲ ರಸ್ತೆಯ (ಪಶ್ಚಿಮ) ಮಾರ್ಗವು ಒಟ್ಟು ಒಂಬತ್ತು ನಿಲ್ದಾಣಗಳನ್ನು ಹೊಂದಲಿದೆ. ಮಾಗಡಿ ರಸ್ತೆಯಿಂದ ಹೊಸಹಳ್ಳಿ, ಕೆಎಚ್‌ಬಿ ಕಾಲೋನಿ, ಕಾಮಾಕ್ಷಿಪಾಳ್ಯ, ಸುಮನಹಳ್ಳಿ ಕ್ರಾಸ್, ಸುಂಕದಕಟ್ಟೆ, ಹೇರೋಹಳ್ಳಿ, ಬ್ಯಾಡರಹಳ್ಳಿ, ಕಾಮತ್ ಲೇಔಟ್ ಮತ್ತು ಕಡಬಗೆರೆ ವರೆಗೆ ಸಂಪರ್ಕ ಸಾಧಿಸಲಿದ್ದೇವೆ.
ಯೋಜನಾ ವೆಚ್ಚ ತುಸು ಕುಗ್ಗಲಿದೆ
ಜೆಪಿ ನಗರ 4ನೇ ಹಂತದಿಂದ-ಕೆಂಪಾಪುರಪುರ ವರೆಗೆ ಒಟ್ಟು 22 ನಿಲ್ದಾಣಗಳು ಬರುತ್ತವೆ. ಪ್ರತಿದಿನ 4.6 ಲಕ್ಷ ಪ್ರಯಾಣಿಕರನ್ನು ಹೊಂದಲಿದೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಯಲ್ಲಿ ಆರು ಮೆಟ್ರೋ ಬೋಗಿಗಳನ್ನು ಪ್ರಸ್ತಾಪಿಸಲಾಗಿದೆ. ಇವೆರಡು ಮಾರ್ಗ ನಿರ್ಮಾಣಕ್ಕೆ ಅಂದಾಜು 16,328 ಕೋಟಿ ರೂ. ವೆಚ್ಚವಾಗಲಿದೆ. ಮೂರು ಮೆಟ್ರೋ ಬೋಗಿ ಕಡಿತದಿಂದ ಯೋಜನಾ ವೆಚ್ಚ 15,600 ಕೋಟಿ ರೂಪಾಯಿಗೆ ಇಳಿಕೆ ಆಗಲಿದೆ.

ನಮ್ಮ ಮೆಟ್ರೋ ಸಂಸ್ಥೆ ಮಾಗಡಿ ರಸ್ತೆಯಲ್ಲಿ 3 ಬೋಗಿಗಳ ರೈಲುಗಳನ್ನು ನಿರ್ವಹಿಸುವುದರಿಂದ ಪ್ರಯಾಣಿಕರ ಮೇಲೆ ಯಾವುದೇ ಪರಿಣಾಮ ಉಂಟಾಗದಂತೆ ನೋಡಿಕೊಳ್ಳಲಿದೆ. ಬೆಂಗಳೂರು ಮೆಟ್ರೋ ಸದ್ಯ ಸಿಗ್ನಲಿಂಗ್ ವ್ಯವಸ್ಥೆ ಬಳಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಿತ ಸಂವಹನ-ಆಧಾರಿತ ರೈಲು ನಿಯಂತ್ರಣ (ಸಿಬಿಟಿಸಿ) ಸಿಗ್ನಲಿಂಗ್ ವ್ಯವಸ್ಥೆ ಜಾರಿಯಾಗಬಹುದು.
ಕೆಲ ಶಿಫಾರಸು ಅನುಷ್ಠಾನಕ್ಕೆ ಮೆಟ್ರೋಗೆ ಮನಸ್ಸಿಲ್ಲ
ಮೂರನೇ ಹಂತದ ಈ ಎರಡು ಕಾರಿಡಾರ್‌ಗಳ ನಿರ್ಮಾಣದ ಕೇಂದ್ರ ಸರ್ಕಾರ ಹೆಚ್ಚುವರಿ ಷರತ್ತು ವಿಧಿಸಿದೆ. ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರ ನಿರ್ಗಮನಕ್ಕೆ ಅನುಕೂಲವಾಗುವಂತೆ ಚಲಿಸುವ ರೈಲುಗಳಿಗೆ ಮುಂಭಾಗಕ್ಕೆ ಸ್ಥಳಾಂತರಗೊಳ್ಳುವ ಅವಕಾಶವನ್ನು ಡಿಪಿಆರ್‌ನಲ್ಲಿ ನೀಡಲು ಕೇಳಲಾಗಿದೆ.
ರೋಲಿಂಗ್ ಸ್ಟಾಕ್ ಪ್ರಮಾಣೀಕರಿಸುವ ಪ್ರಯತ್ನಗಳ ಭಾಗವಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು 16-ಟನ್ ಆಕ್ಸಲ್ ಲೋಡ್‌ನೊಂದಿಗೆ 2,900-ಎಂಎಂ ಕೋಚ್ ಅನ್ನು ಶಿಫಾರಸು ಮಾಡಿದೆ. ಆದರೆ ಈ ಸಲಹೆಗಳ ಅನುಷ್ಠಾನಕ್ಕೆ ಬಿಎಂಆರ್‌ಸಿಎಲ್ ಮನಸ್ಸು ಮಾಡಿಲ್ಲ.
ಏಕೆಂದರೆ ಸದ್ಯ ಮೆಟ್ರೋ ನಿಲ್ದಾಣಗಳು ಮತ್ತು ಡಿಪೋಗಳು 15 ಟನ್‌ಗಳ ಆಕ್ಸಲ್ ಲೋಡ್‌ನೊಂದಿಗೆ 2,880 ಎಂಎಂ ರೋಲಿಂಗ್ ಸ್ಟಾಕ್ ಅನ್ನು ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ನಾವು ಅಸ್ತಿತ್ವದಲ್ಲಿರುವ ಮಾರ್ಗಗಳಲ್ಲಿ ಚಲಿಸುವ ರೈಲುಗಳಿಗೆ ಸೈಡ್ ಇವಾಕೇಶನ್ ವ್ಯವಸ್ಥೆ ಹೊಂದಿದೆ. ಆದ್ದರಿಂದ ಶಿಫಾರಸ್ಸನ್ನು ಅಳವಡಿಕೆ ಮಾಡಲಾಗಿಲ್ಲ ಎಂದು ಮೆಟ್ರೋ ಮೂಲಗಳು ತಿಳಿಸಿವೆ.
ಸರ್ಕಾರಗಳ ಸಹಕಾರದಲ್ಲಿ BMRCL ಮುಂದಿನ 2025ರಲ್ಲಿ ವೇಳೆಗೆ 175 ಕಿಮೀ ಮತ್ತು 2031ರ ವೇಳೆಗೆ 317 ಕಿಮೀ ವರೆಗೆ ಮೆಟ್ರೋ ಜಾಲ ವಿಸ್ತರಣೆ ಮಾಡುವ ಗುರಿ ಹೊಂದಿದೆ.












Click it and Unblock the Notifications