Namma Metro: ನಾಗಸಂದ್ರ-ಮಾದಾವರ ರೈಲು ಆರಂಭ, ಟಿಕೆಟ್ ದರ, ರೈಲುಗಳ ಮಾಹಿತಿ
ಬೆಂಗಳೂರು, ನವೆಂಬರ್ 07: ಗುರುವಾರ ಮುಂಜಾನೆ ಉದ್ಯಾನ ನಗರಿ ಬೆಂಗಳೂರಿನ ನಮ್ಮ ಮೆಟ್ರೋ ಹಸಿರು ವಿಸ್ತರಿತ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿದೆ. ನಾಗಸಂದ್ರ-ಮಾದಾವರ ನಡುವೆ ರೈಲು ಸಂಚಾರಕ್ಕೆ ಚಾಲನೆ ಸಿಕ್ಕಿದ್ದು, ಈಗ ರೇಷ್ಮೆ ಸಂಸ್ಥೆಯಿಂದ ಹಸಿರು ಮಾರ್ಗದಲ್ಲಿ ತುಮಕೂರು ರಸ್ತೆಯ ಮಾದಾವರ ತನಕ ಜನರು ಸಂಚಾರವನ್ನು ನಡೆಸಬಹುದಾಗಿದೆ.
ಯಾವುದೇ ಉದ್ಘಾಟನೆ ಕಾರ್ಯಕ್ರಮವಿಲ್ಲದೇ ರೈಲು ಸಂಚಾರಕ್ಕೆ ಚಾಲನೆ ಸಿಕ್ಕಿದೆ. ಗುರುವಾರ ಬೆಳಗ್ಗೆ 5 ಗಂಟೆಗೆ ಮಾದವಾರ ನಿಲ್ದಾಣದಿಂದ ಮೊದಲ ರೈಲು ಸಂಚಾರ ಆರಂಭಿಸಿತು. ಬಿಎಂಆರ್‌ಸಿಎಲ್ ಕೆಲವು ಅಧಿಕಾರಿಗಳು ಮಾತ್ರ ಪ್ರಯಾಣಿಕರಾಗಿದ್ದರು. 10 ನಿಮಿಷಗಳ ಅವಧಿಯಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ನಡೆಸಲಿದೆ.

ನಾಗಸಂದ್ರ-ಮಾದಾವರ ನಡುವಿನ ವಿಸ್ತರಿತ ಮಾರ್ಗ 3.14 ಕಿ. ಮೀ. ಆಗಿದೆ. ಈ ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್ ನಗರ), ಮಾದವರ (ಬಿಐಇಸಿ) 3 ನಿಲ್ದಾಣವಿದೆ. ಈ ಮಾರ್ಗದ ಉದ್ಘಾಟನೆಯಿಂದಾಗಿ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಜಾಲ 76.95 ಕಿ. ಮೀ.ಗೆ ಹೆಚ್ಚಳವಾಗಿದೆ. ಹಸಿರು ಮಾರ್ಗದಲ್ಲಿ ಒಟ್ಟು 32 ನಿಲ್ದಾಣಗಳಿವೆ.
ಡಿ. ಕೆ. ಶಿವಕುಮಾರ್ ಸಂಚಾರ: ಬುಧವಾರ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಹಲವು ಶಾಸಕರು ಯಶವಂತಪುರದಿಂದ ಮಾದಾವರದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದರು ಮತ್ತು ನಾಗಸಂದ್ರ-ಮಾದಾವರ ವರೆಗಿನ ಮೂರು ನಿಲ್ದಾಣಗಳ ರೀಚ್-3 ವಿಸ್ತರಣೆ ಮಾರ್ಗವನ್ನು ಪರಿಶೀಲಿಸಿದ್ದರು.
ಡಿ. ಕೆ. ಶಿವಕುಮಾರ್ ಮಾತನಾಡಿ, "ಸಾರ್ವಜನಿಕರ ಅನುಕೂಲಕ್ಕಾಗಿ ನಾಳೆಯಿಂದ (ಗುರುವಾರ) ಈ ವಿಸ್ತರಣಾ ಮಾರ್ಗವನ್ನು ತೆರೆಯಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಔಪಚಾರಿಕ ಉದ್ಘಾಟನೆ ಮಾಡಲಾಗುವುದು" ಎಂದು ಹೇಳಿದ್ದರು.
ಗುರುವಾರ ಬೆಳಗ್ಗೆ 5 ಗಂಟೆಗೆ ಮಾದಾವರದಿಂದ ಮೊದಲ ರೈಲು ವಾಣಿಜ್ಯ ಸೇವೆಯನ್ನು ಪ್ರಾರಂಭಿಸಿದೆ. ದಿನದ ಕೊನೆಯ ರೈಲು ರಾತ್ರಿ 11 ಗಂಟೆಗೆ ಹೊರಡಲಿದೆ. 10 ನಿಮಿಷಗಳ ಅವಧಿಯಲ್ಲಿ ರೈಲುಗಳ ಸಂಚಾರವು ಈ ಮಾರ್ಗದಲ್ಲಿ (ಮಾದಾವರ ಮತ್ತು ನಾಗಸಂದ್ರ) ನಡೆಸಲಾಗುವುದು ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಹಸಿರು ಮಾರ್ಗದ ಇತರ ಮಾರ್ಗದಲ್ಲಿ ರೈಲು ಕಾರ್ಯಾಚರಣೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಹಾಗೂ ರೈಲು ಎಂದಿನ ವೇಳಾಪಟ್ಟಿಯ ಪ್ರಕಾರ ಚಲಿಸುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಈ ಮಾರ್ಗದಲ್ಲಿ ಕನಿಷ್ಠ ದರ 10 ರೂ. ಮತ್ತು ಗರಿಷ್ಠ ದರ 60 ರೂ.ಗಳು.
ಬಿಎಂಆರ್‌ಸಿಎಲ್ 2017ರಲ್ಲಿ 298 ಕೋಟಿ ರೂ. ವೆಚ್ಚದಲ್ಲಿ ನಾಗಸಂದ್ರ-ಮಾದಾವರ ನಡುವಿನ ವಿಸ್ತರಿತ ಮಾರ್ಗ 3.14 ಕಿ. ಮೀ. ಕಾಮಗಾರಿ ಆರಂಭಿಸಿತ್ತು. ಈ ಮಾರ್ಗದಲ್ಲಿ ಇರುವುದು ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್ ನಗರ), ಮಾದವರ (ಬಿಐಇಸಿ) ಮೂರು ನಿಲ್ದಾಣಗಳು ಮಾತ್ರ. ಆದರೆ ಕಾಮಗಾರಿ ಭಾರೀ ವಿಳಂಬವಾಗಿ 2024ರ ನವೆಂಬರ್‌ನಲ್ಲಿ ರೈಲು ಸಂಚಾರ ಆರಂಭವಾಗಿದೆ.
ಈ ವಿಸ್ತರಿತ ಮಾರ್ಗದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಆಗಸ್ಟ್ 12 ರಿಂದ 17ರ ತನಕ ಬಿಎಂಆರ್‌ಸಿಎಲ್ ಸಿಗ್ನಲಿಂಗ್ ಸೇರಿದಂತೆ ವಿವಿಧ ಪರೀಕ್ಷೆ, ರೈಲುಗಳ ಪ್ರಾಯೋಗಿಕ ಸಂಚಾರವನ್ನು ನಡೆಸಿತ್ತು. ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರನ್ನು ಪರಿಶೀಲನೆಗಾಗಿ ಆಹ್ವಾನಿಸಿತ್ತು.
ಅಕ್ಟೋಬರ್ 3ರಂದು ರೈಲ್ವೆ ಸುರಕ್ಷತಾ ಆಯುಕ್ತರು ನಾಗಸಂದ್ರ-ಮಾದಾವರ ನಡುವೆ ಸಂಚಾರ ನಡೆಸಿ, ಪರಿಶೀಲನೆ ನಡೆಸಿದ್ದರು, ಅಕ್ಟೋಬರ್ 4ರಂದು ಮಾರ್ಗದಲ್ಲಿ ವಾಣಿಜ್ಯ ಸೇವೆಗೆ ಅನುಮತಿ ಕೊಟ್ಟಿದ್ದರು. ಆದರೆ ಸರ್ಕಾರ ಉದ್ಘಾಟನೆ ದಿನಾಂಕ ನಿಗದಿ ಮಾಡದ ಕಾರಣ ರೈಲು ಸಂಚಾರ ಆರಂಭವಾಗಿರಲಿಲ್ಲ. ಈಗ ಉದ್ಘಾಟನೆ ಕಾರ್ಯಕ್ರಮ ಇಲ್ಲದೇ ರೈಲು ಸಂಚಾರವನ್ನು ಪ್ರಾರಂಭಿಸಲಾಗಿದೆ.












Click it and Unblock the Notifications