Namma Metro: ಸಿಲ್ಕ್ ಬೋರ್ಡ್- ಏರ್‌ಪೋರ್ಟ್ ಮೆಟ್ರೋ ಮಾರ್ಗ ಆರಂಭದ ಕುರಿತು ಮಹತ್ವದ ಮಾಹಿತಿ, ವರದಿ, ವಿವರ
ಬೆಂಗಳೂರು, ಸೆಪ್ಟೆಂಬರ್ 16: ಸಿಲ್ಕ್ ಬೋರ್ಡ್- ಏರ್‌ಪೋರ್ಟ್ ಮೆಟ್ರೋ ಮಾರ್ಗದ ಕುರಿತು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಹತ್ವದ ಮಾಹಿತಿ ನೀಡಿದ್ದಾರೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರಂ (ಹಂತ 2ಎ) ಮತ್ತು ಕೆಆರ್ ಪುರಂನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಹಂತ-2ಬಿ) ಮಾರ್ಗಗಳಿಂದ ಐಟಿ ಕಂಪನಿಗಳ ಉದ್ಯೋಗಿಗಳಿಗೆ ಸಹಾಯವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ವಿಚಾರವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವ್ಹಾಣ್ ಮಾಹಿತಿ ನೀಡಿದ್ದಾರೆ.

ಐಎನ್‌ಎಫ್‌ಎಚ್‌ಆರ್‌ಎ (ಮೂಲಸೌಕರ್ಯ, ಸೌಲಭ್ಯ, ಮಾನವ ಸಂಪನ್ಮೂಲ ಮತ್ತು ರಿಯಾಲ್ಟಿ ಅಸೋಸಿಯೇಷನ್) ತನ್ನ 8ನೇ ಆವೃತ್ತಿಯ ವರ್ಕ್‌ಪ್ಲೇಸ್ ಎಕ್ಸಲೆನ್ಸ್ ಸಮ್ಮೇಳನವನ್ನು ಆಯೋಜಿಸಿತ್ತು. ಇದರ ಅಂಗವಾಗಿ ನಡೆದ 'ನಮ್ಮ ಬೆಂಗಳೂರು-ಉತ್ತಮ ಮೂಲಸೌಕರ್ಯ' ಕುರಿತ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
'ಹಂತ 2A ಮತ್ತು 2B ಸಿದ್ಧವಾಗುವ ಹೊತ್ತಿಗೆ, ಎಲೆಕ್ಟ್ರಾನಿಕ್ ಸಿಟಿ ಲೈನ್ ಸಿಲ್ಕ್ ಬೋರ್ಡ್‌ಗೆ ಸಂಪರ್ಕ ಹೊಂದಿರಲಿದೆ. ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಐಟಿ ಉದ್ಯಮದ ವೃತ್ತಿಪರರು ನಿರಾಯಾಸವಾಗಿ ಪ್ರಯಾಣಿಸಬಹುದು' ಎಂದು ಅವರು ಹೇಳಿದ್ದಾರೆ.
ಸಿಲ್ಕ್‌ಬೋರ್ಡ್- ಏರ್‌ಪೋರ್ಟ್ ಮೆಟ್ರೋ ಮಾರ್ಗವು ಸೆಪ್ಟೆಂಬರ್ 2026 ರ ವೇಳೆಗೆ ಆರಂಭವಾಗಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

'ಸಮಗ್ರ ಅಭಿವೃದ್ಧಿ ಯೋಜನೆಯ ಪ್ರಕಾರ, ಬಿಎಂಆರ್‌ಸಿಎಲ್ 2031 ರ ವೇಳೆಗೆ 317 ಕಿಮೀ ಮೆಟ್ರೋ ಮಾರ್ಗವನ್ನು ಒಳಗೊಳ್ಳಲಿದೆ. ಸಾರ್ವಜನಿಕ ಸಾರಿಗೆಗೆ ಸಹಾಯ ಮಾಡಲು ನಾವು ಆ ಹೊತ್ತಿಗೆ 450 ಕಿಮೀ ತಲುಪಲು ಆಂತರಿಕವಾಗಿ ಪ್ರಯತ್ನಿಸುತ್ತಿದ್ದೇವೆ' ಎಂದು ಅವರು ಹೇಳಿದ್ದಾರೆ.
ಡಬ್ಲ್ಯುಆರ್‌ಐ ಇಂಡಿಯಾದ ಇಂಟಿಗ್ರೇಟೆಡ್ ಟ್ರಾನ್ಸ್‌ಪೋರ್ಟ್ ಮತ್ತು ರಸ್ತೆ ಸುರಕ್ಷತೆಯ ಸಹವರ್ತಿ ಅಧಿಕಾರಿ ಶ್ರೀನಿವಾಸ್ ಅಲವಿಲ್ಲಿ ಮಾತನಾಡಿ, 'ಬೆಂಗಳೂರಿನಲ್ಲಿ 1.2 ಕೋಟಿ ವಾಹನಗಳಿವೆ. ವಾಹನ ಚಲಾಯಿಸದ 18 ವರ್ಷದೊಳಗಿನವರನ್ನು ಬಿಟ್ಟರೆ, ನಮ್ಮಲ್ಲಿ ನಗರದ ಜನಸಂಖ್ಯೆಗಿಂತ ಹೆಚ್ಚು ವಾಹನಗಳಿವೆ. ತುಲನಾತ್ಮಕವಾಗಿ, 2016 ರಲ್ಲಿ ನಗರವು ಕೇವಲ 45 ಲಕ್ಷ ವಾಹನಗಳನ್ನು ಹೊಂದಿತ್ತು. ಸಾರ್ವಜನಿಕ ಸಾರಿಗೆಯನ್ನು ಬಳಸಲು ಸಾರ್ವಜನಿಕರನ್ನು ಪ್ರೇರೇಪಿಸಬೇಕಿದೆ' ಎಂದು ಅವರು ಒತ್ತಿ ಹೇಳಿದರು.
ಬಿಎಂಟಿಸಿಯ ಕಾರ್ಯಾಚರಣೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಕೆ.ಆರ್.ವಿಶ್ವನಾಥ್ ಮಾತನಾಡಿ, 'ರಸ್ತೆಯಲ್ಲಿ ಖಾಸಗಿ ವಾಹನಗಳ ಹಾವಳಿಯಿಂದ ಬಸ್ಸುಗಳ ಮೇಲೆ ಹೆಚ್ಚು ಪರಿಣಾಮ ವಾಗುತ್ತಿದೆ' ಎಂದು ಹೇಳಿದ್ದಾರೆ.

'ದಟ್ಟಣೆಯ ಸಮಯದಲ್ಲಿ, ಬಸ್ಸುಗಳು ಗಂಟೆಗೆ 8 ರಿಂದ 10 ಕಿಮೀ ವೇಗದಲ್ಲಿ ಚಲಿಸುತ್ತವೆ. ಇದು ಪಾದಚಾರಿಗಳು ನಡೆಯಬಹುದಾದ ವೇಗವಾಗಿದೆ. 6,000 ಬಸ್‌ಗಳೊಂದಿಗೆ ನಾವು ಪ್ರಸ್ತುತ 57 ಲಕ್ಷ ಟ್ರಿಪ್‌ಗಳನ್ನು ನಡೆಸುತ್ತಿದ್ದೇವೆ' ಎಂದು ಅವರು ತಿಳಿಸಿದ್ದಾರೆ.
ನಾವು 390 ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿದ್ದೇವೆ. ಆರು ತಿಂಗಳೊಳಗೆ ಅವುಗಳಲ್ಲಿ 1,500 ವಾಹನಗಳನ್ನು ಹೊಂದುವ ಭರವಸೆ ಇದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಕೆ ರೈಡ್‌ನ ನಿರ್ದೇಶಕ ಆರ್ ಕೆ ಸಿಂಗ್ ಮಾತನಾಡಿ, 'ನಾವು ಪ್ರತಿ 5 ನಿಮಿಷಗಳಿಗೊಮ್ಮೆ ಉಪನಗರ ರೈಲು ಓಡಿಸಲು ಯೋಜಿಸಿದ್ದೇವೆ' ಎಂದು ತಿಳಿಸಿದ್ದಾರೆ.
ಬೆನ್ನಿಗಾನಹಳ್ಳಿ ಮತ್ತು ಚಿಕ್ಕಬಾಣಾವರ (ಕಾರಿಡಾರ್ 2) ನಡುವಿನ ಒಂದು ಉಪನಗರ ಕಾರಿಡಾರ್‌ನಲ್ಲಿ ಕಾಮಗಾರಿ ಪ್ರಾರಂಭಗೊಂಡಿದೆ. ಇನ್ನೊಂದಕ್ಕೆ ಹೀಲಲಿಗೆ ಮತ್ತು ರಾಜನಕುಂಟೆ ನಡುವಿನ ಟೆಂಡರ್ ಶೀಘ್ರದಲ್ಲೇ ಅಂತಿಮಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಒಆರ್‌ಆರ್‌ಸಿಎ ಅಧ್ಯಕ್ಷ ಮಾನಸ್ ದಾಸ್ ಮಾತನಾಡಿ, ಎಲ್ಲಾ ಮೆಟ್ರೋ ನಿಲ್ದಾಣಗಳ ಸುತ್ತಲೂ ಫುಟ್‌ಪಾತ್‌ಗಳನ್ನು ಖಾತ್ರಿಪಡಿಸುವಲ್ಲಿ ಸಂಘವು ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.
ನಿವಾಸಿಗಳಿಗೆ ತಡೆರಹಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಸಾರ್ವಜನಿಕ ಸಾರಿಗೆ ಸಂಸ್ಥೆಗಳೊಂದಿಗೆ ನಮ್ಮ ಸಂಸ್ಥೆ ಸಹಭಾಗಿತ್ವದಲ್ಲಿದೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ ಎಸ್ ಪ್ರಹ್ಲಾದ್ ತಿಳಿಸಿದ್ದಾರೆ.












Click it and Unblock the Notifications