Namma Metro: ಮೆಟ್ರೋ ಪ್ರಯಾಣಿಕರೇ ಗಮನಿಸಿ.. ನಿಲ್ದಾಣದಲ್ಲಿ ಈ ನಿಯಮ ಪಾಲಿಸದಿದ್ರೆ ದಂಡ ಫಿಕ್ಸ್.!
Namma Metro: ಬೆಂಗಳೂರು ನಮ್ಮ ಮೆಟ್ರೋ ಆಗಾಗ ಹೊಸ ಹೊಸ ನಿಯಮಗಳನ್ನು ಜಾರಿ ಮಡುತ್ತಲೇ ಇರುತ್ತದೆ. ಇದೀಗ ನಮ್ಮ ಮೆಟ್ರೋದ ನಿಲ್ದಾಣಗಳಲ್ಲಿ 20 ನಿಮಿಷಗಳಿಗಿಂತ ಹೆಚ್ಚು ತಂಗುವ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ದಂಡ ವಿಧಿಸಲು ಮುಂದಾಗಿದೆ. ಯಾಕೆ ಈ ನಿರ್ಧಾರ ಅಂತೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಪರ್ಪಲ್ ಲೈನ್‌ನಲ್ಲಿ ಬರುವ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು 20 ನಿಮಿಷಕ್ಕೂ ಹೆಚ್ಚು ಕಾಲ ನಿಲ್ದಾಣದಲ್ಲೇ ಉಳಿದುಕೊಂಡಿದ್ದು, ಅವರಿಗೆ ದಂಡ ವಿಧಿಸಲಾಗಿದೆ. ಮೊಬೈಲ್‌ನಲ್ಲಿ ಚಾರ್ಜ್ ಇಲ್ಲದ ಹಿನ್ನೆಲೆ ಪ್ರಯಾಣಿಕರೊಬ್ಬರು ನಿಲ್ದಾಣದಲ್ಲೇ ಚಾರ್ಜಿಂಗ್ ಮಾಡಿಕೊಂಡಿದ್ದರು. ಬಳಿಕ ಹೊರಡಲು ಮುಂದಾಗಿದ್ದು, ಈ ವೇಳೆ ಮೆಟ್ರೋ ಸಿಬ್ಬಂದಿ ಅವರನ್ನು ತಡೆದು ದಂಡ ಕಟ್ಟುವಂತೆ ಹೇಳಿದ್ದಾರೆ. ಆದ್ದ ಪ್ರಯಾಣಿಕ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಬಳಿಕ ಮಾತನಾಡಿದ ಮೆಟ್ರೋ ಸಿಬ್ಬಂದಿ, "ನಮ್ಮ ಮೆಟ್ರೋ ನಿಲ್ದಾಣದಲ್ಲಿ ಕೇವಲ 20 ನಿಮಿಷ ಮಾತ್ರ ತಂಗಲು ಅವಕಾಶವಿದೆ. ಇದಕ್ಕಿಂತ ಹೆಚ್ಚು ಸಮಯ ಇದ್ದರೆ, ದಂಡ ಪಾವತಿಸಬೇಕಾಗುತ್ತದೆ," ಎಂದು ಪ್ರಯಾಣಿಕನಿಗೆ ಹೇಳಿದ್ದಾರೆ.
ಬಳಿಕ "ಹೊರಗೆ ಮಳೆ ಸುರಿಯುತ್ತಿದ್ದು, ಮೊಬೈಲ್‌ನಲ್ಲಿ ಚಾರ್ಜ್ ಇರಲಿಲ್ಲ. ಆದ್ದರಿಂದ ಮೆಟ್ರೋ ನಿಲ್ದಾಣದಿಂದ ಹೊರಡುವುದು ತಡವಾಗಿದೆ," ಎಂದು ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ. ಆದರೂ, ದಂಡ ವಸೂಲಿ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಈ ನಿಯಮ ಹೊಸದಾಗಿ ಜಾರಿಗೆ ತಂದಿರುವುದಲ್ಲ. ನಮ್ಮ ಮೆಟ್ರೋ ವಾಣಿಜ್ಯ ಸಂಚಾರ ಆರಂಭ ಆದಾಗಿನಿಂದಲೂ ಕೂಡ ಇದು ನಿಯಮ ಜಾರಿಯಲ್ಲಿದೆ. ಇನ್ನು ಪ್ರಯಾಣಕ್ಕೆ ಟೋಕನ್ ಪಡೆದ ಪ್ರಯಾಣಿಕರು 20 ನಿಮಿಷಕ್ಕಿಂತ ಹೆಚ್ಚು ಕಾಲ ನಿಲ್ದಾಣದಲ್ಲಿ ಇರುವಂತಿಲ್ಲ. ಇದರಿಂದ ಸಹ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ. ಆದ್ದರಿಂದ ನಿಯಮ ಉಲ್ಲಂಘಿಸಿವರಿಗೆ ದಂಡ ಹಾಕಲಾಗುತ್ತದೆ," ಅಂತಾ ಬಿಎಂಆರ್‌ಸಿಎಲ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್. ಯಶವಂತ್ ಚೌಹಾಣ್ ಹೇಳಿದ್ದಾರೆ.
ಸಾಮಾನ್ಯವಾಗಿ ಪ್ರಯಾಣಿಕರು ಟಿಕೆಟ್ ಪಡೆದ ನಂತರ ಒಂದು ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷ ಇರುವುದಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಈ ನಿಯಮ ಮೀರಿ ಇದಕ್ಕೂ ಹೆಚ್ಚು ಸಮಯ ಇದ್ದರೆ, ಗರಿಷ್ಠ 50 ರೂಪಾಯಿ ಅಥವಾ ಗಂಟೆಗೆ 10 ರೂಪಾಯಿ ದಂಡ ಕಟ್ಟಬೇಕಾಗುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ. ಒಟ್ಟಿನಲ್ಲಿ ಹೀಗೆ ಬೆಂಗಳೂರು ಜನರ ಜೀವನಾಡಿ ಸಾರಿಗೆಯಾದ ನಮ್ಮ ಮೆಟ್ರೋದಲ್ಲಿ ಒಂದಲ್ಲ ರೀತಿಯಲ್ಲಿ ಬದಲಾವಣೆಗಳು ಆಗುತ್ತಲೇ ಇವೆ.












Click it and Unblock the Notifications