Namma Metro: 2023-24ರಲ್ಲಿ ಮೆಟ್ರೋ ವಾರ್ಷಿಕ ಆದಾಯದಲ್ಲಿ ಭಾರೀ ಏರಿಕೆ: ಖರ್ಚು-ಆದಾಯದ ಮಾಹಿತಿ?
ಬೆಂಗಳೂರು, ಏಪ್ರಿಲ್ 23: ಬೆಂಗಳೂರಲ್ಲಿ ಹೊಸ ಮಾರ್ಗದ ಕಾರ್ಯಾಚರಣೆಗೆ ಸಿದ್ಧವಾಗಿರುವ ನಮ್ಮ ಮೆಟ್ರೋ (Namma Metro) ಕಳೆದ ಆರ್ಥಿಕ ವರ್ಷದಲ್ಲಿ (2023-24) ಅತ್ಯಧಿಕ ಲಾಭ ಪಡೆದುಕೊಂಡಿದೆ. ನಿರ್ವಹಣೆ ಖರ್ಚು ಪಡೆದು ಹೆಚ್ಚಿನ ಲಾಭ ಗಳಿಸಿ ಮೈಲಿಗಲ್ಲು ಮಾಡಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಸತತ ಎರಡನೇ ಭಾರಿಗೆ ಹೆಚ್ಚು ಲಾಭ ಗಳಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಸಾಲಿನಲ್ಲಿ ಒಟ್ಟು 129 ಕೋಟಿ ರೂಪಾಯಿ ಅಧಿಕ ಲಾಭ ಗಳಿಸಿದೆ. ಇದು ಈವರೆಗೆ ಮಟ್ರೋ ದೊರೆತ ಲಾಭದಲ್ಲಿ ಬೃಹತ್ ಪ್ರಮಾಣವಾಗಿದೆ ಎಂದು ವರದಿ ಆಗಿದೆ.

23 ಕೋಟಿ ಮಂದಿ ಮೆಟ್ರೋದಲ್ಲಿ ಪ್ರಯಾಣ
ರಾಜಧಾನಿಯಲ್ಲಿ 73 ಜಾಲ ಹಿಂದಿರುವ ನಮ್ಮ ಮೆಟ್ರೋ ಅತ್ಯಧಿಕ ಲಾಭ ಪಡೆದ ವರ್ಷದಲ್ಲಿ (2023-24) ಬರೋಬ್ಬರಿ 23ಕೋಟಿಗೂ ಹೆಚ್ಚು ಮಂದಿಗೆ ಪ್ರಯಾಣ ಸೇವೆ ಒದಗಿಸಿದೆ. ನಿರೀಕ್ಷೆಗೂ ಮೀರಿದ ಆದಾಯ ಬಂದಿದೆ. BMRCL ಸಂಚಾರ ಸೇವೆಗಾಗಿ ಕಳೆದ ವರ್ಷ ಒಟ್ಟಾರೆ 606 ಕೋಟಿ ರೂಪಾಯಿ ಖರ್ಚು ಮಾಡಿದ್ದರೆ, ಮರಳಿ ಒಟ್ಟು 735.48 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಸಾಧನೆಗೆ ಕಾರಣ ತಿಳಿಸಿದ ಅಧಿಕಾರಿಗಳು
ಈ ಕುರಿತು ಮಾತನಾಡಿದ ಬಿಎಂಆರ್‌ಸಿಎಲ್ ಅಧಿಕಾರಿಗಳು, ಹೊಸ ಮಾರ್ಗಗಳು ಇಲ್ಲವೇ ವಿಸ್ತರಣೆ ಮಾರ್ಗಗಳು ಸದಾ ಪ್ರಯಾಣಿಕರ ಹೆಚ್ಚಳಕ್ಕೆ ಅವಕಾಶ ಮಾಡಿಕೊಡುತ್ತವೆ. ಕಳೆದ ವರ್ಷ ಚಲ್ಲಘಟ್ಟವರೆಗೆ ಮೆಟ್ರೋ ವಿಸ್ತರಣೆ ಮಾಡಿದ್ದು, ಮೊದಲ ಐಟಿ ಕಾರಿಡಾರ್‌ಗೆ ಪ್ರಯಾಣ ಸೇವೆಗೆ ಪೂರ್ಣ ನೇರಳೆ ಮಾರ್ಗ ತೆರೆದಿರುವುದು ಈ ಸಾಧನೆಗೆ ಕಾರಣವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮೆಟ್ರೋದಲ್ಲಿ ಅದರ ಹಿಂದಿನ ವರ್ಷದಲ್ಲಿ (2022-23ರಲ್ಲಿ) 17.72 ಕೋಟಿ ಪ್ರಯಾಣಿಕರು ಸಂಚಾರ ಮಾಡಿದ್ದರು. ಆಗ ಒಟ್ಟು 108 ಕೋಟಿ ರೂಪಾಯಿ ಹೆಚ್ಚು ಆದಾಯ ಸಂಗ್ರಹವಾಗಿತ್ತು.
ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ
ನಾವು ಊಹೆ ಮಾಡಿದಂತೆ ಜನರು ನಮ್ಮ ಮೆಟ್ರೋದಲ್ಲಿ ಹೆಚ್ಚು ಹೆಚ್ಚು ಪ್ರಯಾಣ ಮಾಡಲು ಆಸಕ್ತಿ ತೋರ್ಪಡಿಸುತ್ತಿದ್ದಾರೆ. ಅಲ್ಲದೇ ಪೂರಕವಾಗಿ ಆದಾಯ ಹೆಚ್ಚಾಗಿರುವುದು ನಮಗೆ ಮತ್ತಷ್ಟು ವಿಶ್ವಾಸ ಬಲ ತಂದಿದೆ. ನಮ್ಮ ಮೆಟ್ರೋ ವಿಸ್ತರಣೆ ಜೊತೆಗೆ ಬಿಎಂಟಿಸಿ ಮೆಟ್ರೋ ಫೀಡರ್ ಬಸ್‌ಗಳ ಸೇವೆ ಸಹ ಈ ಅಧಿಕ ಆದಾಯ ಗಳಿಕೆಗೆ ಕೊಡುಗೆ ನೀಡಿದೆ.
ಸದ್ಯ ಇದೇ ವರ್ಷ ಫೆಬ್ರುವರಿಗೆ ಆರಂಭವಾಗಲಿದೆ ಎಂದು ಹೇಳಲಾಗಿದ್ದ ಆರ್‌ವಿ. ರಸ್ತೆ-ಬೊಮ್ಮಸಂದ್ರವರೆಗಿನ ಹಳದಿ ಮಾರ್ಗವು ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಆಗ BMRCL ಆದಾಯ ಮತ್ತಷ್ಟು ಏರಿಕೆ ಆಗಲಿದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೈನಂದಿನ ಪ್ರಯಾಣಿಕರಲ್ಲಿ ಹೆಚ್ಚಳ
ನೇರಳೆ ಮಾರ್ಗ ಸಂಪೂರ್ಣವಾಗಿ ತೆರೆದ ಬಳಿಕ ಸುಮಾರು 25- 30 ಸಾವಿರ ವರೆಗೆ ಪ್ರಯಾಣಿಕರ ಏರಿಕೆ ಆಗಿತ್ತು. ಆದರೆ ನಿರೀಕ್ಷೆಯಂತೆ ದೈನಂದಿನ ಪ್ರಯಾಣಿಕರ ಸಂಖ್ಯೆ 7 ಲಕ್ಷ ದಾಟಲಿಲ್ಲ. ನಂತರ ಕಳೆದ ಜನವರಿಗೆಯಲ್ಲಿ ಮತ್ತು ಇದೇ ತಿಂಗಳ ಮೂರನೇ ವಾರದಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ 7.8 ಲಕ್ಷವರೆಗೆ ತಲುಪಿತು. ಇದು ಸಹ ಆದಾಯ ಹೆಚ್ಚಾಗಳು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಕ್ರಮೇಣ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications