Namma Metro: ಹೊಸ ವರ್ಷಕ್ಕೆ 38ಕಿ.ಮೀ. ಹೆಚ್ಚುವರಿ ಮೆಟ್ರೋ ಸೇವೆ ನೀಡಲಿರುವ BMRCL
ಬೆಂಗಳೂರು, ಡಿಸೆಂಬರ್ 15: ಬೆಂಗಳೂರು ಮೆಟ್ರೋ ರೈಲ್ ಕಾರ್ಪರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಸದ್ಯ ನಗರಾದ್ಯಂತ ಹಾಲಿ 56 ಕಿಲೋ ಮೀಟರ್ ನೀಡುತ್ತಿದೆ. ಮುಂದಿನ ವರ್ಷ ಹೊಸ ಮಾರ್ಗಗಳ ಮೂಲಕ ಹೆಚ್ಚುವರಿಯಾಗಿ 38ಕಿ.ಮೀ. ಮೆಟ್ರೋ ಸೇವೆ ಒದಗಿಸಲಿದೆ. ಈ ಮೂಲಕ ಒಟ್ಟು 94 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸಂಚಾರ ವೇಗ ಮತ್ತು ಸುಗಮಗೊಳಿಸಲಿದೆ.
ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಜೊತೆಗೆ ವೇಗದ ಪ್ರಯಾಣ ಸೇವೆ ಒದಗಿಸುತ್ತಿರುವ ಬೆಂಗಳೂರು ನಮ್ಮ ಮೆಟ್ರೋ ನಿಗಮವು ಕೆಲವು ವರ್ಷಗಳ ಹಿಂದೆ ಹೊಸ ಮೆಟ್ರೋ ಮಾರ್ಗಗಳ ಕಾಮಗಾರಿ ಆರಂಭಿಸಿತ್ತು. ಮಾರ್ಗಗಳ ನಿರ್ಮಾಣ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಪ್ರಾಯೋಗಿಕ ಹಂತ ಮತ್ತು ಅಂತಿಮ ಹಂತ ಕೆಲಸಗಳು ನಡೆಯುತ್ತಿವೆ. ಇವೆಲ್ಲ ಕೆಲಸಗಳು ಕೆಲವೆ ವಾರಗಳಲ್ಲಿ ಮುಗಿಯಲಿದ್ದು, ಮುಂದಿನ 2023ರ ವೇಳೆಗೆ ಬೆಂಗಳೂರಿಗರಿಗೆ ಹೊಸ ಮಾರ್ಗದಲ್ಲಿನ ಸಂಚಾರ ಸೇವೆ ಲಭ್ಯವಾಗಲಿದೆ.
ಹೊಸ ವರ್ಷದ ಆರಂಭದಲ್ಲೇ ವೈಟ್‌ಫೀಲ್ಡ್ ವರೆಗೆ ಮೆಟ್ರೊ ರೈಲು ಮಾರ್ಗ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ. ಅದಕ್ಕಾಗಿ ಬಿಎಂಆರ್‌ಸಿಎಲ್ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆದರೆ ಮಳೆ ಇನ್ನಿತರ ಕಾರಣಗಳಿಂದ ಬೆನ್ನಿಗಾನಹಳ್ಳಿ ಮೆಟ್ರೊ ರೈಲು ನಿಲ್ದಾಣದ ಹತ್ತಿರ ಕಾಮಗಾರಿ ತುಸು ನಿಧಾನವಾಗುವ ಸಾಧ್ಯತೆ ಇದೆ. 2023ರ ಮಾರ್ಚ್ ಮಧ್ಯದಲ್ಲಿ ಈ ಮಾರ್ಗದಲ್ಲಿ ಮೆಟ್ರೋ ರೈಲುಗಳ ಓಡಾಟ ಶುರುವಾಗಲಿದೆ.

ವೈಟ್‌ಫೀಲ್ಡ್-ಕೆ.ಆರ್.ಪುರ ಮೆಟ್ರೋ ಮಾರ್ಗ ಆರಂಭ
ಮೊದಲ ಹಂತದಲ್ಲಿ ವೈಟ್‌ಫೀಲ್ಡ್‌ನಿಂದ ಕೆ.ಆರ್.ಪುರ ರೈಲು ಸಂಚಾರ ಆರಂಭವಾದರೆ, ಎರಡನೇ ಹಂತದಲ್ಲಿ ಕೆ.ಆರ್.ಪುರದಿಂದ ಬೈಯಪ್ಪನಹಳ್ಳಿವರೆಗೆ ಮೆಟ್ರೊ ಸಂಪರ್ಕ ಸಾಧಿಸುವ ಗುರಿ ಹೊಂದಲಾಗಿದೆ. ಬೆನ್ನಿಗಾನಹಳ್ಳಿ ಬಳಿ 65 ಮೀಟರ್ ಉದ್ದದ ಮಾರ್ಗದಲ್ಲಿ ಕಾಮಗಾರಿ ನಿರ್ವಹಣೆ ಸವಾಲಿನ ಕೆಲಸವಾಗಿದೆ. ಅಲ್ಲಿ ಸ್ಟೀಲ್ ಗರ್ಡರ್‌ಗಳನ್ನು ಅಳವಡಿಸಲಾಗಿದೆ. ರೈಲ್ವೆ ಹಳಿ ಕೂಡು ಹಾದು ಹೋಗಿದೆ. ನೈರುತ್ಯ ರೈಲ್ವೆ ಇಲಾಖೆ ಜೊತೆಗೆ ಸಹಕಾರ ಪಡೆದು ಕಾಮಗಾರಿ ನಡೆಸಲಾಗುತ್ತಿದೆ.

ಹಳದಿ ಮಾರ್ಗದ ಕಾಮಗಾರಿ ಪೂರ್ಣ
ಅಷ್ಟೇ ಅಲ್ಲದೇ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರಕ್ಕೆ ಮೆಟ್ರೊ ರೈಲು ಸಂಪರ್ಕಿಸುವ ಹಳದಿ ಮಾರ್ಗ ನಿರ್ಮಾಣವು ಬಹುತೇಕ ಮುಗಿದಿದೆ. ಇದು ವೈಟ್‌ಫಿಲ್ಡ್- ಕೆಆರ್ ಪುರಂ ನಂತರ ಸಾರ್ವಜನಿಕ ಸಂಚಾರಕ್ಕೆ ತೆರೆದುಕೊಳ್ಳಲಿದೆ. ಈಗಾಗಲೇ ಉದ್ದೇಶಿತ ಮೂರು ಯೋಜನೆಗಳ ಕಾಮಗಾರಿ ಪೂರ್ಣಗೊಂಡಿದೆ. 2023ರ ಜೂನ್ ಹೊತ್ತಿಗೆ ಈ ಹೊಸ ಮಾರ್ಗದಲ್ಲಿ ಮೆಟ್ರೊ ರೈಲುಗಳು ಸಂಚರಿಸಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡಬಲ್ ಡೆಕ್ಕರ್ ಎಲಿವೆಟೆಡ್ ಕಾರಿಡಾರ್ ನಿರ್ಮಾಣ
ಮೆಟ್ರೋ ರೈಲು ಮಾರ್ಗ ವಿಸ್ತರಣೆ, ಹೊಸ ಮಾರ್ಗಗಳ ನಿರ್ಮಾಣದ ಜೊತೆಗೆ ಬಸ್‌ಗಳ ಸಂಚಾರಕ್ಕೆ ಅನುಕೂಲವಾಗುವ ಡಬಲ್ ಡೆಕ್ಕರ್ ಎಲಿವೆಟೆಡ್ ಕಾರಿಡಾರ್ ನಿರ್ಮಿಸುತ್ತಿರುವ ಮೊದಲ ಮೆಟ್ರೋ ರೈಲು ಮಾರ್ಗ ಬೆಂಗಳೂರಿನ ನಮ್ಮ ಮೆಟ್ರೋ ಆಗಿದೆ. ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ತನಕ ಡಬಲ್ ಡೆಕ್ಕರ್ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ನಡೆಯುತ್ತಿದೆ. ಜಯದೇವ ವೃತ್ತದಲ್ಲಿ ಬಸ್ ಮಾರ್ಗ ಬದಲಾವಣೆಯ ಜಂಕ್ಷನ್ ನಿರ್ಮಿಸಲಾಗುತ್ತಿದೆ. ಇಲ್ಲಿ ಒಟ್ಟು ಐದು ಹಂತದ ಸಾರಿಗೆ ವ್ಯವಸ್ಥೆ ಕಾಣಬಹುದಾಗಿದೆ.

ಬಿಐಇಸಿವರೆಗಿನ ವಿಸ್ತರಿಸಿದ ಮಾರ್ಗ ಜೂನ್‌ಗೆ ಮುಕ್ತ
ಮೆಟ್ರೋ ಮಾರ್ಗ ಹಾಲಿ ನಾಗಸಂದ್ರದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ)ವರೆಗೆ 3.14 ಕಿ.ಮೀ. ವಿಸ್ತರಣೆ ಕಾಮಗಾರಿ ಕೆಲಸ ಚುರುಕಿನಿಂದ ನಡೆಯುತ್ತಿದೆ. ಜೂನ್ ವೇಳೆಗೆ ಕಾಮಗಾರಿ ಮುಗಿದು ಪ್ರಾಯೋಗಿಕ ಸಂಚಾರವು ಪೂರ್ಣಗೊಳ್ಳಲಿದೆ.
ಇನ್ನೂ ಜಿಂದಾಲ್‌ನಿಂದ ಪ್ರೆಸ್ಟೀಜ್ ಲೇಔಟ್ ಮೂಲಕ ಅಂಚೆಪಾಳ್ಯ ಹಾಗೂ ಚಿಕ್ಕಬಿದರಕಲ್ಲು ಮೆಟ್ರೊ ನಿಲ್ದಾಣಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಹೆಚ್ಚುವರಿ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳಬೇಕಿತ್ತು. ಕೆಲವು ಅಡೆತಡೆಗಳ ಬಳಿಕ ಪ್ರೆಸ್ಟೀಜ್ ಸಂಸ್ಥೆ 12.5 ಅಡಿ ಅಗಲದ ರಸ್ತೆ ನಿರ್ಮಿಸಿ ಸಾರ್ವಜನಿಕರ ಬಳಕೆಗೆ ನೀಡಲು ಒಪ್ಪಿದೆ. ಹೀಗಾಗಿ ಈ ಮಾರ್ಗದಲ್ಲೂ ಮೆಟ್ರೋ ರೈಲುಗಳು ಮುಂದಿನ ವರ್ಷ ಓಡಾಲಿವೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.












Click it and Unblock the Notifications