Bengaluru Metro: ORR ರಸ್ತೆಯ ನೀಲಿ ಮಾರ್ಗದಲ್ಲಿ ಸಂಯೋಜಿತ ಗರ್ಡರ್ ಸ್ಥಾಪನೆ
ಬೆಂಗಳೂರು: ನಮ್ಮ ಮೆಟ್ರೋ ನಿಗಮದಿಂದ ನಗರದ ಹೊರ ವರ್ತುಲ ರಸ್ತೆಯ ಮಾರತ್ತಹಳ್ಳಿ, ಎಚ್‌ಎಸ್‌ಆರ್ ಬಡಾವಣೆ, ಮಹಾದೇವಪುರ ಉದ್ದಕ್ಕೂ ನೀಲಿ ಮೆಟ್ರೋ ಮಾರ್ಗದ (Blue Line Metro) ಕಾಮಗಾರಿ ನಡೆಯುತ್ತಿದೆ. ಇದರ ಭಾಗವಾಗಿ ಮಾರತ್ತಹಳ್ಳಿ ಸೇತುವೆಯ ಬಳಿ ನಾಲ್ಕು ಸಂಯೋಜಿತ ಗರ್ಡರ್‌ಗಳಲ್ಲಿ ಎರಡನ್ನು ನಿರ್ಮಿಸಲಾಗಿದೆ
ನಮ್ಮ ಮೆಟ್ರೋ ಹಂತ 2ಎ ಯೋಜನೆಯಡಿ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂವರೆಗೆ ನೀಲಿ ಮಾರ್ಗದ ನಿರ್ಮಾಣ ಕೆಲಸ ಆಗುತ್ತಿದೆ. ಇದರ ವ್ಯಾಪ್ತಿಯಲ್ಲಿ ಗರ್ಡರ್ ಸ್ಥಾಪಿಸಲಾಗಿದೆ. ಅದಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಮತ್ತು ಶಂಕರನಾರಾಯಣ ಕನ್‌ಸ್ಟ್ರಕ್ಷನ್ಸ್ (SNC) ತಂಡಗಳು ಜಂಟಿಯಾಗಿ ಶನಿವಾರ ಬೆಳಗ್ಗೆ ಹೊತ್ತಿಗೆ ಹಳೆಯ ವಿಮಾನ ನಿಲ್ದಾಣ ರಸ್ತೆಯ ಹೊರ ವರ್ತುಲ ರಸ್ತೆಯ ಜಂಕ್ಷನ್‌ನಲ್ಲಿ ಎರಡು ಸಂಯೋಜಿತ ಗರ್ಡರ್ ಸ್ಥಾಪಿಸಿದ್ದನ್ನು ಅಧಿಕಾರಿಗಳು ಖಚಿಪಡಿಸಿದ್ದಾರೆ.

ಗರ್ಡರ್ ಅಳವಡಿಕೆ ಮುಂದುವರಿದಿದೆ ಎಂದ ತಿಳಿಸಿರುವ ಮಹಾದೇವಪುರ ಟಾಸ್ಕ್ ಫೋರ್ಸ್-ಮೊಬಿಲಿಟಿ, ನಾಗರಿಕರ ಗುಂಪು ಬಾಕಿ ಗರ್ಡರ್ಗಳ ಅಳವಡಿಕೆಗೆ ಮತ್ತಷ್ಟು ಪೂರ್ವ ಸಿದ್ಧತೆ ಕಾರ್ಯ ನಡೆಸಿದೆ. ಅದೆಲ್ಲವು ಸೋಮವಾರ (ಮಾ.30) ಹೊತ್ತಿಗೆ ಕೆಲಸ ಪೂರ್ಣಗೊಳ್ಳಲಿವೆ. ಮಧ್ಯರಾತ್ರಿಯಿಂದ ಬೆಳಗಿನ ಜಾವ 3 ಗಂಟೆಯ ನಡುವೆ ಸ್ಥಾಪಿಸಲಾಗುವುದು ಎಂದು ತಿಳಿಸಿದೆ.
ಎತ್ತರ ಮೆಟ್ರೋ ಹಳಿಗಳ ನಿರ್ಮಾಣದಲ್ಲಿ ಬಳಸಲಾಗುವ ಈ ಸಂಯೋಜಿತ ಗಿರ್ಡರ್ ಎರಡು ವಿಭಿನ್ನ ವಸ್ತುಗಳನ್ನು ಸಂಯೋಜಿಸಿ ರಚನಾತ್ಮಕವಾಗಿ ಬಳಕೆಗೆ ಅನುಕೂಲವಾಗುವಂತೆ ನಿರ್ಮಿಸಲಾಗುತ್ತದೆ. ಇದೇ ವರ್ಷ ಡಿಸೆಂಬರ್ ವೇಳೆಗೆ ಅಥವಾ 2027ರ ಮೊದಲಾರ್ಧದಲ್ಲಿ ಸಿಲ್ಕ್ ಬೋರ್ಡ್-ಕೆ.ಆರ್.ಪುರಂ 2ಎ ಯೋಜನೆ ಪ್ರಯಾಣಿಕರಿಗೆ ಮುಕ್ತವಾಗಲಿದೆ.
ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ
ಚಲಘಟ್ಟ ಮತ್ತು ವೈಟ್‌ಫಿಲ್ಡ್‌ವರೆಗಿನ ನೇರಳೆ ಮಾರ್ಗದಲ್ಲಿ ಇಂದು ಭಾನುವಾರ ಬೆಳಗ್ಗೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದೆ. ಈ ಮಾರ್ಗದ ಎಂಜಿ ರಸ್ತೆ ಹಾಗೂ ಗರುಡಾಚಾರ್ ಪಾಳ್ಯದಲ್ಲಿ ಮೆಟ್ರೋ ನಿಲ್ದಾಣಗಳ ಮಧ್ಯ ತುರ್ತು ನಿರ್ವಹಣಾ ಕಾರ್ಯ ಕೈಗೊಂಡಿದ್ದರಿಂದಾಗಿ ಬೆಳಗ್ಗೆ 7 ಗಂಟೆಯಿಂದ 7.45ರವರೆಗೆ ಸಂಚಾರ ಸ್ಥಗಿತವಾಗಿತ್ತು. ಬಳಿಕ ಅಧಿಕಾರಿಗಳ ತಂಡ ಉಂಟಾದ ಸಂಚಾರ ಸಮಸ್ಯೆಯನ್ನು 7.45ರ ಹೊತ್ತಿಗೆ ಪೂರ್ಣಗೊಳಿಸುತ್ತಿದ್ದಂತೆ ಸುಗಮ ಸಂಚಾರ ಪುನಾರಂಭವಾಯಿತು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಹಸಿರು ಮಾರ್ಗ (ಮಾದಾವರ-ರೇಷ್ಮೆ ಸಂಸ್ಥೆ) ಹಾಗೂ ಮೂರನೇ ಮಾರ್ಗವಾದ ಹಳದಿ ಲೈನ್‌ನಲ್ಲಿ (ಆರ್.ವಿ.ರಸ್ತೆ-ಬೊಮ್ಮಸಂದ್ರ) ಯಾವುದೇ ಅಡಚಣೆ ಇಲ್ಲದೇ ಸುಗಮ ಸಂಚಾರ ಕಂಡು ಬಂದಿದೆ. ಆದ ತೊಂದರೆಗೆ ಸಹಕರಿಸುವಂತೆ ಬಿಎಂಆರ್‍ಸಿಎಲ್ ಪ್ರಕಟಣೆಯಲ್ಲಿ ಕೋರಿತ್ತು.












Click it and Unblock the Notifications