Namma Metro: ನೂರಾರು ಬೋಗಿಗಳ ಪೂರೈಕೆ ಗುತ್ತಿಗೆ ಪಡೆದ BEML, ಯಾವ ಮಾರ್ಗಗಳಿಗೆ ಇವು ಬಳಕೆ? ವಿವರ
ಬೆಂಗಳೂರು, ಆಗಸ್ಟ್ 09: ಬೆಂಗಳೂರು ನಮ್ಮ ಮೆಟ್ರೋ ಗಳಿಗೆ (Namma Metro) ಬೋಗಿ ಪೂರೈಕೆಗೆ ಕರೆಯಲಾಗಿದ್ದ ಬಿಡ್ ನಲ್ಲಿ ಪಾಲಗೊಂಡಿದ್ದ ಕಂಪನಿಗಳ ಪೈಕಿ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಗೆ(BEML) ಗುತ್ತಿಗೆ ಲಭಿಸಿದೆ. ಮುಂದಿನ ದಿನಗಳಲ್ಲಿ ಈ ಕಂಪನಿಯಿಂದ ಒಟ್ಟು ಸುಮಾರು 318 ಮೆಟ್ರೋ ಬೋಗಿಗಳು ಪೂರೈಕೆ ಆಗಲಿವೆ.
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಈ ಸಂಬಂಧ ಅಗತ್ಯವಾದ 318 ಬೋಗಿಗಳ ಪೂರೈಕೆಗೆ ಟೆಂಡರ್ ಕರೆಯಲಾಗಿತ್ತು. ಇದರಲ್ಲಿ ಬಿಇಎಂಎಲ್ 3,177 ಕೋಟಿ ರೂಪಾಯಿ ಮೊತ್ತದ ವೆಚ್ಚದಲ್ಲಿ 318 ಮೆಟ್ರೋ ಬೋಗಿಗಳ ಪೂರೈಕೆ ಮಾಡಲು ಒಪ್ಪಿದೆ. ವಿಶೇಷವೆಂದರೆ ತಾನು ಪೂರೈಸುವ ಬೋಗಿಗಳ ನಿರ್ವಹಣೆ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡಿದೆ.

ಸದ್ಯ BEML ಕಂಪನಿ 10 ವಂದೇ ಭಾರತ್ ರೈಲುಗಳ ಸ್ಲೀಪರ್ ಬೋಗಿಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ. ಅದಾದ ಬಳಿಕ ಮುಂದಿನ ವರ್ಷ ಈ ಉದ್ದೇಶಿತ 318 ಮೆಟ್ರೋ ರೈಲು ಬೋಗಿಗಳ ನಿರ್ಮಾಣ ಮಾಡಿ ಬೆಂಗಳೂರು ಮೆಟ್ರೋ ರೈಲ್ ನಿಗಮಕ್ಕೆ (BMRCL) ಪೂರೈಸಲಿದೆ. ಇವೆಲ್ಲ ಬೋಗಿಗಳು 2025ರಲ್ಲಿ ಸಂಚಾರಕ್ಕೆ ಮುಕ್ತಗೊಳ್ಳುವ ಮೆಟ್ರೋ ಮಾರ್ಗಗಳಲ್ಲಿ ಸೇವೆಗೆ ಬಳಕೆ ಆಗಲಿದೆ.
ಯಾವ ಯಾವ ಮಾರ್ಗಗಳಿಗೆ ಬೋಗಿ ಬಳಕೆ
BEML ಪೂರೈಕೆ ಮಾಡುವ ಒಟ್ಟು ಬೋಗಿಗಳ ಪೈಕಿ 126 ಬೋಗಿಗಳನ್ನು ಮುಂಬರುವ ನೀಲಿ ಮಾರ್ಗವಾದ ಬಿ2 ಹಂತದ ಕೆ.ಆರ್.ಪುರ-ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರಿಡಾರ್(37 ಕಿ.ಮೀ) ಯೋಜನೆಗೆ ಬಳಕೆ ಆಗಲಿವೆ. ಇನ್ನೂ 18.2 ಕಿಲೋ ಮಿಟರ್ ಉದ್ದದ ರೇಷ್ಮೇ ಕೇಂದ್ರ-ಕೆ.ಆರ್.ಪುರದ ಮಾರ್ಗಕ್ಕೆ 96 ಬೋಗಿಗಳು ಪೂರೈಕೆ ಆಗಲಿವೆ.
ಇನ್ನೂ 96 ಬೋಗಿಗಳು 21.3 ಕಿಲೋ ಮೀಟರ್ ಉದ್ದದ ಮತ್ತೊಂದು ನೂತನ ಮೆಟ್ರೋ ಮಾರ್ಗವಾಗಿರುವ ಕಾಳೇನ ಅಗ್ರಹಾರ-ನಾಗವಾರ ಗುಲಾಬಿ ಕಾರಿಡಾರ್‌ನಲ್ಲಿ ಬಳಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಒಟ್ಟಾರೆ ಮುಂದಿನ ಹದಿನೈದು ವರ್ಷಗಳ ನಿರ್ವಹಣೆಯನ್ನು ಗುತ್ತಿಗೆ ಪಡೆದ ಬಿಇಎಂಎಲ್ ನಿರ್ವಹಿಸಲು ಸಜ್ಜಾಗುತ್ತಿದೆ.

ಬೆಂಗಳೂರಿನಲ್ಲಿ ಹಾಲಿ 70 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಾಗಸಂದ್ರದಿಂದ ರೇಷ್ಮೇ ಸಂಸ್ಥೆ ವರೆಗೆ (Metro Green Line) ಹಾಗೂ ಬೈಯಪ್ಪನಹಳ್ಳಿಯಿಂದ ಕೆಂಗೇರಿವರೆಗೆ (Purple Line) ಮಾರ್ಗದಲ್ಲಿ ನಮ್ಮ ಮೆಟ್ರೋ ಸೇವೆ ದೊರೆಯುತ್ತಿದೆ. ಕಳೆದ ಜುಲೈ ತಿಂಗಳಲ್ಲಿ ದೈನಂದಿನದಲ್ಲಿ 6.11 ಲಕ್ಷ ಜನರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಅಂದರೆ ಕಳೆದ ನಾಲ್ಕು ತಿಂಗಳಿಗೆ ಹೋಲಿಸಿದರೆ ಈ ಸಂಖ್ಯೆ ಶೇಕಡಾ 16ರಷ್ಟು ಅಧಿಕ ಎನ್ನಲಾಗಿದೆ.
ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆ ಸಾಧ್ಯತೆ
ಇನ್ನೂ ಇದೇ ಅಗಸ್ಟ್ ತಿಂಗಳಾಂತ್ಯಕ್ಕೆ ಕೆ.ಆರ್.ಪುರ-ಬೈಯ್ಯಪ್ಪನಹಳ್ಳಿ ಹಾಗೂ ಕೆಂಗೇರಿ-ಚೆಲ್ಲಘಟ್ಟವರೆಗಿನ ಒಟ್ಟು 4 ಕಿಲೋ ಮೀಟರ್ ಮಾರ್ಗ ಸಂಚಾರ ಮುಕ್ತವಾದರೆ ಸೆಪ್ಟಂಬರ್ ಹೊತ್ತಿಗೆ ನಮ್ಮ ಮೆಟ್ರೋ ದಲ್ಲಿ ಓಡಾಡುವವರ ಸಂಖ್ಯೆ ನಿತ್ಯ 07 ಲಕ್ಷ ದಾಟಲಿದೆ ಎಂದು ಅಂದಾಜಿಸಲಾಗಿದೆ.
ಕೆ.ಆರ್.ಪುರ-ಬೈಯ್ಯಪ್ಪನಹಳ್ಳಿ ಹಾಗೂ ಕೆಂಗೇರಿ-ಚೆಲ್ಲಘಟ್ಟ ಮಾರ್ಗ ಜನಸಂಚಾರಕ್ಕೆ ಸಿದ್ಧವಾಗಿದೆ. ಈಗಾಗಲೇ ಇವೆರಡೂ ಮಾರ್ಗಗಳಲ್ಲಿ BMRCL ಈಗಾಗಲೇ ಪ್ರಾಯೋಗಿಕ ಸಂಚಾರ ನಡೆಸಲಾಗಿದೆ. ಮೆಟ್ರೋ ಮೊದಲ ಬಾರಿಗೆ ಐಟಿ ಕಾರಿಡಾರ್ ಸಂಪರ್ಕ ಸಾಧಿಸಿದ್ದರಿಂದ ಈ ಭಾಗದ ಸಂಚಾರ ದಟ್ಟಣೆ ಕಡಿಮೆ ಆಗುವ ನಿರೀಕ್ಷೆ ಇದೆ.












Click it and Unblock the Notifications