Bengaluru metro: ಪಾನಮತ್ತ ಪ್ರಯಾಣಿಕನಿಂದ ಮೆಟ್ರೋ ಸಿಬ್ಬಂದಿಗೆ ಹೊಡೆತ, ಹಲ್ಲೆ
ಬೆಂಗಳೂರು, ಡಿಸೆಂಬರ್ 25: ಬೆಂಗಳೂರು ನಮ್ಮ ಮೆಟ್ರೋ (Bengaluru namma metro) ಇತ್ತೀಚೆಗೆ ತನ್ನ ಸೇವೆಯ ಜೊತೆ ಜೊತೆಗೆ ನಿಯಮ ಉಲ್ಲಂಘನೆ, ಗಲಾಟೆ ಪ್ರಕರಣಗಳಿಂದಲೇ ಸದ್ದು ಮಾಡುತ್ತಿದೆ. ಮೆಟ್ರೋ ನಿಯಮಗಳ ಉಲ್ಲಂಘನೆಯ ಕೆಲವು ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ಇದೀಗ ಪಾನಮತ್ತ ವ್ಯಕ್ತಿಯೊಬ್ಬ ಮೆಟ್ರೋ ಸಿಬ್ಬಂದಿಗೆ ಹೊಡೆದು, ಹಲ್ಲೆ ಮಾಡಿದ ಘಟನೆ ವರದಿ ಆಗಿದೆ.
ತಾನು ರಕ್ಷಣಾ ವೇದಿಕೆಯವನು ಎಂದು ಹೇಳಿಕೊಂಡಿದ್ದ ವ್ಯಕ್ತಿಯು ಕುಡಿದು ಬಂದು ಮೆಟ್ರೋ ನಿಲ್ದಾಣ ಒಳಗೆ ಪ್ರವೇಶಿಸುತ್ತಿದ್ದ. ಈ ವೇಳೆ ಪಾನಮತ್ತರಿಗೆ ನಿಲ್ದಾಣದೊಳಕ್ಕೆ ಅವಕಾಶ ಇಲ್ಲ ಎಂದು ಮೆಟ್ರೋ ಸಿಬ್ಬಂದಿ ಆತನನ್ನು ತಡೆದಿದ್ದರು. ಈ ವೇಳೆ ಗಲಾಟೆ ನಡೆದು ಆತ ಆ ಸಿಬ್ಬಂದಿಗೆ ಹೊಡೆದು, ಹಲ್ಲೆ ಮಾಡಿದ್ದಾನೆ.

ಈ ಹಲ್ಲೆ ಘಟನೆ ಡಿಸೆಂಬರ್ 16 ರಂದು ರಾತ್ರಿ ನಡೆದಿದೆ. ಪಾನಮತ್ತರಾಗಿ ನಿಲ್ದಾಣ ಪ್ರವೇಶಿಸುತ್ತಿದ್ದ ಆರೋಪಿ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಮೆಟ್ರೋ ಸಿಬ್ಬಂದಿಯು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ. ಈತನ ವಿರುದ್ಧ ಹಲ್ಲೆ ಪ್ರಕರಣ, ಎಫ್‌ಐಆರ್ ದಾಖಲಾಗಿರುವುದಾಗಿ ತಿಳಿದು ಬಂದಿದೆ.
ತಪಾಸಣೆ ವೇಳೆ ಮದ್ಯೆ ಸೇವಿಸಿದ್ದು ಗೊತ್ತಾಗಿದೆ
ಮದ್ಯ ಕುಡಿದು ಬಂದಿದ್ದ ಚಂದ್ರಶೇಖರ್ ಅಂದು ಡಿಸೆಂಬರ್ 16ರಂದು ರಾತ್ರಿ ಮೆಜೆಸ್ಟಿಕ್ ರೈಲಿನಲ್ಲಿ ಹೋಗಲು ದಾಸರಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ್ದ. ಈ ವೇಳೆ ಅವರನ್ನು ತಪಾಸಣಾ ಮಾಡಲು ಮುಂದಾದ ಸಿಬ್ಬಂದಿಗೆ ಆತ ಕುಡಿದು ಬಂದಿದ್ದನ್ನು ಕಂಡು ಒಳ ಹೋಗದಂತೆ ತಡೆದಿದ್ದಾರೆ.
ಪಾನಮತ್ತರಿಗೆ ಮೆಟ್ರೋ ನಿಲ್ದಾಣದೊಳಗೆ ಪ್ರವೇಶ ಇಲ್ಲ. ನಿಮಗೆ ಮೆಟ್ರೋ ರೈಲಿನಲ್ಲಿ ಸಂಚರಿಸಲು ಅವಕಾಶ ಇಲ್ಲ. ಹೀಗಾಗಿ ನಿಮ್ಮನ್ನು ನಿಲ್ದಾಣದ ಒಳಗೆ ಬಿಡುವುದಿಲ್ಲ ಎಂದು ತಿಳಿಸಿ ಹೇಳಿದ್ದಾರೆ. ಈ ವೇಳೆ ಚಂದ್ರಶೇಖರ್ ಒಳ ಹೋಗಲೇ ಬೇಕು ಎಂದು ಪಟ್ಟು ಹಿಡಿದ ಕಾರಣ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಈ ವೇಳೆ ಸಿಬ್ಬಂದಿಗೆ ಪಾನಮತ್ತ ವ್ಯಕ್ತಿ ಹೊಡೆದು ಹಲ್ಲೆ ಮಾಡಿದ್ದಾನೆ. ಕೂಡಲೇ ಸ್ಥಳದಲ್ಲಿದ್ದವರು ಗಲಾಟೆ ಬಿಡಿಸಿದ್ದಾರೆ.
ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲೇ, ಹಲ್ಲೆ ಮಾಡಿದ್ದರ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಮೆಟ್ರೋ ಸಿಬ್ಬಂದಿ ದೂರು ದಾಖಲಿಸಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಕೆಲವು ಘಟನೆ ಬೆಳಕಿಗೆ
ಇತ್ತೀಚೆಗೆ ನಮ್ಮ ಮೆಟ್ರೋ ರೈಲಿನಲ್ಲಿ ಯುವತಿಯೊಬ್ಬರಿಗೆ ಕಿರುಕುಳ ನೀಡಿದ ಪ್ರಕರಣ ವರದಿ ಆಗಿತ್ತು. ಅದೇ ರೀತಿ ಮೆಟ್ರೋ ಸಿಸಿಟಿವಿ ಗೆ ಕವರ್ ಮಾಡಿರುವುದು, ನಿಲ್ದಾಣ, ರೈಲುಗಳಲ್ಲಿ ಭಿಕ್ಷೆ ಬೇಡುವುದು, ಬಾಕ್ಸ್ ಹಿಡಿದು ಹಣ ಸಂಗ್ರಹಿಸುವ, ನಿಯಮ ಮೀರಿ ಆಹಾರ ಸೇವಿಸುವ ಘಟನೆಗಳು ವರದಿ ಆಗಿದ್ದವು. ಅಲ್ಲದೇ ವಿದೇಶಿ ಯೂಟ್ಯೂಬರ್ ಒಬ್ಬ ಟಿಕೆಟ್ ಇಲ್ಲದೇ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡುವುದು ಹೇಗೆ? ಎಂದು ತಿಳಿಸಿ ವಿಡಿಯೋ ಮಾಡಿದ್ದ ಘಟನೆಗಳು ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications