RV Raod-Bommasandra Line: ಬೆಂಗಳೂರಿಗೆ ಬಂದ 8ನೇ ಮೆಟ್ರೋ ರೈಲು ಕಾರ್ಯಾಚರಣೆಯ ಅಪ್ಡೇಟ್
ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗದ (Namma Metro Yellow Line) ಆರು ಬೋಗಿಗಳನ್ನು ಒಳಗೊಂಡ ಎಂಟನೇ ರೈಲು ಬೆಂಗಳೂರಿಗೆ ಇತ್ತೀಚೆಗೆ ಆಗಮಿಸಿದೆ. ಈಗಾಗಲೇ ಆರ್‌ವಿ.ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ಒಟ್ಟು ಏಳು ಡ್ರೈವರ್‌ಲೆಸ್ ರೈಲುಗಳು ಸೇವೆ ಆರಂಭಿಸಿವೆ. ಹಾಗಾದರೆ ಹೊಸ ರೈಲಿನ ಪರೀಕ್ಷೆಗಳು ಮುಗಿಯುವುದು ಯಾವಾಗ? ಅದರ ಸೇವೆ ಪ್ರಯಾಣಿಕರಿಗೆ ಸಿಗುವ ಅಪ್ಡೇಟ್ ಮಾಹಿತಿ ಇಲ್ಲಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಹಾಗೂ ಸುರಕ್ಷತಾ ಅಧಿಕಾರಿಗಳು ಹೊಸ ಎಂಟನೇ ರೈಲನ್ನು ಮೆಟ್ರೋ ಹಳಿಗೆ ಜೋಡಿಸಿದ್ದಾರೆ. ಕಾರ್ಯಕ್ಷಮತೆ, ಸಿಗ್ನಲಿಂಗ್ ಟೆಸ್ಟ್ ಸೇರಿ ಕೆಲವು ಪರೀಕ್ಷೆಗಳನ್ನು ನಡೆಸಲಿದ್ದಾರೆ. ಇದೆಲ್ಲ ಪರೀಕ್ಷೆಗಳು ಪೂರ್ಣಗೊಳ್ಳಲು ಸುಮಾರು ಎರಡರಿಂದ ಮೂರು ವಾರಗಳು ಬೇಕಾಗುತ್ತದೆ. ಈ ಪರೀಕ್ಷೆಗಳು ಹೆಚ್ಚಾಗಿ ರಾತ್ರಿ ವೇಳೆ ನಡೆಯುತ್ತವೆ. ಅದು ಪೂರ್ಣಗೊಳ್ಳುತ್ತಿದ್ದಂತೆ ಹಳದಿ ಮಾರ್ಗದ ಸೇವೆ ಹೊಸ ರೈಲು ನಿಯೋಜನೆಗೊಳ್ಳಲಿದೆ.

ಫೆಬ್ರವರಿಗೆ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್
ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗವು ಸುಮಾರು 19.6 ಕಿಲೋ ಮೀಟರ್ ಉದ್ದವಿದೆ. ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ರೈಲುಗಳಿಗೆ ಬೇಡಿಕೆ ಇದೆ. ಪ್ರತಿ ಹೊಸ ರೈಲು ಬಂದಾಗ ಅದರ ಪರೀಕ್ಷೆಗಳನ್ನು ಕೆಲವು ದಿನಗಳಲ್ಲಿ ಮುಗಿಸಿ ಸೇವೆಗೆ ನಿಯೋಜಿಸುವಂತೆ ಎಂಟನೇ ರೈಲಿನ ಕಾರ್ಯಾಚರಣೆಯನ್ನು ಫೆಬ್ರವರಿ ಮಧ್ಯ ಭಾಗಕ್ಕೆ ಇಲ್ಲವೇ ತಿಂಗಳಾಂತ್ಯಕ್ಕೆ ಆರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಈ ಹೊಸ ಮೆಟ್ರೋ ಆರು ಬೋಗಿಗಳ ರೈಲನ್ನು ಕಳೆದ ಜನವರಿ 08ರಂದು ಪಶ್ಚಿಮ ಬಂಗಾಳದ ಕೊಲ್ಲತ್ತದಲ್ಲಿರುವ ಟಿಟಾಗರ್ ತಯಾರಿಕಾ ಘಟಕದಿಂದ ಲಾರಿಯಲ್ಲಿ ರವಾನಿಸಲಾಗಿತ್ತು. ಅದು ಜನವರಿ 20ರಂದು ಸೋಮವಾರ ಬೆಂಗಳೂರು ಹೆಬ್ಬಗೋಡಿ ಮೆಟ್ರೋ ಡಿಪೋಗೆ ತಲುಪಿದೆ. ಬಿಎಂಆರ್‌ಸಿಎಲ್ ಜೊತೆಗೆ ಬಹುಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದ್ದ ಚೀನಾ ಕಂಪನಿಯು ಮೆಟ್ರೋ ರೈಲು ಪೂರೈಕೆಯಲ್ಲಿ ಈ ಹಿಂದೆ ವಿಳಂಬ ಮಾಡಿತ್ತು. ಕಳೆದ ವರ್ಷ ನೀಡಿದ ಮಾತಿನಂತೆ ಇತ್ತೀಚೆಗೆ ತಿಂಗಳಿಗೊಂದು ಡ್ರೈವರ್‌ಲೆಸ್ ರೈಲನ್ನು ಪೂರೈಕೆ ಮಾಡುತ್ತಿದೆ. ಇದರಿಂದ ಹಳದಿ ಮಾರ್ಗದಲ್ಲಿ ಹೆಚ್ಚಾದ ಪ್ರಯಾಣಿಕರ ನಿರ್ವಹಣೆ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ಮಾರ್ಗದಲ್ಲಿ ಇನ್ನಷ್ಟು ಹೊಸ ಮೆಟ್ರೋ ರೈಲುಗಳು ಸೇವೆ ನಿಯೋಜನೆಗೊಳ್ಳಲಿವೆ.
ನಮ್ಮ ಮೆಟ್ರೋ ಗುಲಾಬಿ ಮಾರ್ಗ
ಬೆಂಗಳೂರು ಮೆಟ್ರೋ ಜಾಲದಲ್ಲಿ ಹೊಸದಾಗಿ ಕೆಲವೇ ತಿಂಗಳಲ್ಲಿ ಗುಲಾಬಿ ಮಾರ್ಗವು ಸಾರ್ವಜನಿಕರಿಗೆ ಮುಕ್ತಗೊಳ್ಳಲಿದೆ. ಈ ಸಂಬಂಧ ಪ್ರೊಟೋಟೈಪ್ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರವನ್ನು ಅಧಿಕಾರಿಗಳು ಆರಂಭಿಸಿದ್ದಾರೆ. ಈ ಮಾರ್ಗವು ಕಾಳೇನ ಅಗ್ರಹಾರದಿಂದ ನಾಗವಾರವರೆಗೆ ಇದೆ. ಒಟ್ಟು 21.56 ಕಿಲೋ ಮೀಟರ್ ಮಾರ್ಗವನ್ನು ಎರಡು ಹಂತಗಲ್ಲಿ ಪ್ರಯಾಣೀಕರಿಗೆ ತೆರೆಯಲು ಮೆಟ್ರೋ ಅಧಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಮುಂದಿನ ಮೇ ತಿಂಗಳಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ 7.5 ಕಿಮೀ. ಎತ್ತರಿಸಿದ ಮಾರ್ಗವನ್ನು ತೆರೆಯಲಾಗುತ್ತದೆ. ಈ ಸಂಬಂಧ ಮೆಟ್ರೋ ರೈಲಿನ ಪರೀಕ್ಷಾರ್ಥ ಸಂಚಾರ ಶುರುವಾಗಿದೆ. ವಿವಿಧ ಪರೀಕ್ಷೆಗಳನ್ನು ಮೇ ಒಳಗೆ ಪೂರ್ಣಗೊಳಿಸಿ ಬಳಿಕ ವಾಣಿಜ್ಯ ಸಂಚಾರ ಆರಂಭಿಸಲಾಗುತ್ತದೆ. ಎರಡನೇ ಹಂತದಲ್ಲಿ ಡೈರಿ ವೃತ್ತದಿಂದ ನಾಗರವಾರವರೆಗೆ 13.8 ಕಿಲೋ ಮೀಟರ್ ಸುರಂಗ ಮಾರ್ಗವಿದ್ದು, ಅದನ್ನು ಇದೇ ವರ್ಷ ಡಿಸೆಂಬರ್‌ನಲ್ಲಿ ತೆರೆಯುವ ಚಿಂತನೆ ಮೆಟ್ರೋ ಅಧಿಕಾರಿಗಳಲ್ಲಿದೆ.












Click it and Unblock the Notifications