ಚುನಾವಣೆ 2023: ಮತದಾರರ ಜಾಗೃತಿಗಾಗಿ "ವಿಶೇಷ ಐಕಾನ್ಸ್"ಗಳ ನೇಮಿಸಿದ ಬಿಬಿಎಂಪಿ, ಅವರ ವಿವರ ಇಲ್ಲಿದೆ
ಬೆಂಗಳೂರು, ಮಾರ್ಚ್ 28: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023 ಇನ್ನೇನು ಸಮೀಪಿಸುತ್ತಿದೆ. ಈ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಲ್ಲಿ ಜಾಗೃತಿ ಮೂಡಿಸಲು ಸಜ್ಜಾಗಿರುವ ರಾಜ್ಯ ಚುನಾವಣೆ ಆಯೋಗದ ನಿರ್ದೇಶನದ ಮೇರೆಗೆ ಬಿಬಿಎಂಪಿ ವಿಶೇಷ ಐಕಾನ್ ಗಳನ್ನು ನೇಮಕ ಮಾಡಿದೆ.
ವಿಧಾನಸಭೆ ಚುನಾವಣೆ ಸಂಬಂಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಖ್ಯ ಆಯುಕ್ತರು ಆಗಿರುವ ಜಿಲ್ಲಾ ಚುನಾವಣಾದಿಕಾರಿಗಳು 5 ಪ್ರಮುಖ ವ್ಯಕ್ತಿಗಳನ್ನು 'ನಮ್ಮ ಬೆಂಗಳೂರು ಐಕಾನ್ಸ್" ಗಳಾಗಿ ನೇಮಕ ಮಾಡಿದ್ದಾರೆ. ಈ ಕುರಿತು ಅವರೇ ಅಧಿಕೃತ ಮಾಹಿತಿ ನೀಡಿದ್ದಾರೆ.

ಮಂಗಳವಾರ "ನಮ್ಮ ಬೆಂಗಳೂರು ಐಕಾನ್ಸ್" ಕಾರ್ಯಕ್ರಮಕ್ಕೆ ಇಂದು ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್)ನಲ್ಲಿ ಚಾಲನೆ ನೀಡಿದ ನಂತರ ಮಾತನಾಡಿದ ತುಷಾರ್ ಗಿರಿನಾಥ್, ಮತದಾನ ಮಾಡುವ ಸಲುವಾಗಿ ನಗರದ ಜನತೆಗೆ ಹುಮ್ಮಸ್ಸು ತುಂಬಿಸುವ ಸಲುವಾಗಿ ಹಾಗೂ ಚುನಾವಣಾ ಹಬ್ಬಕ್ಕಾಗಿ ಈ 5 ಪ್ರಮುಖ ವ್ಯಕ್ತಿಗಳು ನಮ್ಮ ಜೊತೆ ಕೈಜೋಡಿಸಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ವ್ಯವಸ್ಥಿತವಾಗಿ ಮತದಾನ ಮಾಡುವ ಸಲುವಾಗಿ 10 ದಿನಗಳ ಮುಮಚಿತವಾಗಿಯೇ ಮತದಾನದ ಚೀಟಿ ಹಾಗೂ ಮತಗಟ್ಟೆಯ ಮಾಹಿತಿ ನೀಡಲಾಗುವುದು. ಇಲ್ಲವೇ ವಿ.ಹೆಚ್.ಎ ತಂತ್ರಾಂಶದಲ್ಲಿ ಮತದಾರರ ಗುರುತಿನ ಚೀಟಿ ಸಂಖ್ಯೆ ನಮೂದಿಸಿದರೆ ಸಾಕು ಎಲ್ಲಾ ಮಾಹಿತಿ ಲಭ್ಯವಾಗಲಿದೆ ಎಂದರು.
ಮತ ಚಲಾಯಿಸುವುದು ಎಲ್ಲರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಹಿಂದಿನ ದಿನಗಳಲ್ಲಿ ಮತದಾನ ಮಾಡುವ ದಿನ ಮತಗಟ್ಟೆಗಳ ಬಳಿ ಯಾವುದೇ ರೀತಿಯ ಸೌಲಭ್ಯಗಳು ಇರುತ್ತಿರಲಿಲ್ಲ. ಆದರೀಗ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿದ್ದರೂ ಕೂಡಾ ಮತ ಚಲಾಯಿಸುವ ಸಂಖ್ಯೆ ಬಹಳಷ್ಟು ಕಡಿಮೆಯಿದೆ. ನಿಮಗೆ ಮತ ಚಲಾಯಿಸಲು ಇಷ್ಟವಿಲ್ಲದಿದ್ದರೆ ನೋಟ ಮಾಡಲು ಕೂಡಾ ಅವಕಾಶವಿರುತ್ತದೆ. ಆದ್ದರಿಂದ ಎಲ್ಲರೂ ಮತ ಚಲಾಯಿಸಲು ಮನವಿ ಮಾಡಿದರು.

ಬೆಂಗಳೂರು ನಗರದ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿ, ಬರಲಿರುವ ಚುನಾವಣೆಯಲ್ಲಿ ಮತದಾರರು ಉತ್ತಮ ರೀತಿಯಲ್ಲಿ ಭಾಗವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಬೇಕು. ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಆದರೇ ಮತ ಚಲಾವಣೆಯಲ್ಲಿ ಮಾತ್ರ ಶೇಕಡಾಚಾರು ಸಾಕಷ್ಟು ಹಿಂದಿದ್ದಾರೆ. ಈ ಬಗ್ಗೆ ನಾಗರಿಕರಲ್ಲಿ ಹೆಚ್ಚು ಜಾಗೃತಿ ಮೂಡಿಸಿ ಎಲ್ಲರೂ ಮತದಾನ ಮಾಡುವಂತೆ ಪ್ರೇರೆಪಿಸಬೇಕು ಎಂದು ಹೇಳಿದರು.
ಜಾಗೃತಿ ಮೂಡಿಸಲಿರುವ 'ನಮ್ಮ ಬೆಂಗಳೂರು ಐಕಾನ್ಸ್'ಗಳ ವಿವರ
1. ಶರತ್ ಎಂ. ಗಾಯಕ್ವಾಡ್, ಅಂತಾರಾಷ್ಟ್ರೀಯ ಪ್ಯಾರಾ ಈಜುಗಾರರು.
2. ಮೋಹನ್ ಕುಮಾರ್.ಎನ್, ಬುಡಕಟ್ಟು ಜನಾಂಗದ ಗಾಯಕರು.
3. ಅನುಪ್ ಶ್ರೀಧರ್, ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್(ಅರ್ಜುನ ಪ್ರಶಸ್ತಿ ವಿಜೇತರು)
4. ತೇಜಸ್ವಿನಿ ಬಾಯ್ .ವಿ, ಅಂತಾರಾಷ್ಟ್ರೀಯ ಕಬ್ಬಡಿ ಆಟಗಾರ್ತಿ(ಅರ್ಜುನ ಪ್ರಶಸ್ತಿ ವಿಜೇತರು)
5. ಆನಂದ್.ಹೆಚ್(ಮಾಸ್ಟರ್ ಆನಂದ್), ಕನ್ನಡ ಚಿತ್ರ ಮತ್ತು ಕಿರುತೆರೆ ಕಲಾವಿದ ಮತ್ತು ನಿರೂಪಕರು.
ಸಮಾರಂಭದಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಶ್ರೀ ಉಜ್ವಲ್ ಕುಮಾರ್ ಘೋಷ್, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷಾದ ಸಂಗಪ್ಪ, ಅಪರ ಜಿಲ್ಲಾ ಚುನಾವಣಾ ಅಧಿಕಾರಿಗಳಾದ ಡಾ. ಹರೀಶ್ ಕುಮಾರ್, ಡಾ. ಜಗದೀಶ್ ನಾಯ್ಕ್, ಸ್ವೀಪ್ ನೋಡಲ್ ಅಧಿಕಾರಿ ಸಿದ್ದೇಶ್ವರ್ ಚುನಾವಣಾ ವಿಭಾಗದ ಉಪ ಆಯುಕ್ತರಾದ ಉಮೇಶ್ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.












Click it and Unblock the Notifications