ಬೆಂಗಳೂರು ಸಿಟಿ ವಿ.ವಿಗೆ ಮನಮೋಹನ್ ಸಿಂಗ್ ಹೆಸರು ಗೌರವ ಅಲ್ಲ, ಅವಮಾನ: ಅಶೋಕ್
ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಹೆಸರನ್ನು ಮರುನಾಮಕರಣ ಮಾಡಲು ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಈ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ವಿವಿಗೆ ಹೆಸರು ಮರುನಾಮಕರಣವನ್ನು ಘೋಷಣೆ ಮಾಡಿದ್ದರು. ಆದರೆ ಇದಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ವಿಶ್ವವಿದ್ಯಾಲಯಕ್ಕೆ ಮನಮೋಹನ್ ಸಿಂಗ್ ಅವರ ಹೆಸರು ಮರುನಾಮಕರಣ ಮಾಡುತ್ತಿರುವುದು ಅವರಿಗೆ ಕೊಟ್ಟಿರುವ ಗೌರವ ಅಲ್ಲ, ಅವರ ವ್ಯಕ್ತಿತ್ವಕ್ಕೆ ಮಾಡಿರುವ ಅವಮಾನ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಇರುವ ವಿಶ್ವವಿದ್ಯಾಲಯಕ್ಕೆ ಮನಮೋಹನ್ ಸಿಂಗ್ ಅವರ ಹೆಸರನ್ನ ನಾಮಕರಣ ಮಾಡುವುದು ಯಾವ ಮಹಾ ಸಾಧನೆ? ಇದರ ಬದಲು ಒಂದು ಹೊಸ ವಿಶ್ವವಿದ್ಯಾಲಯ ಅಥವಾ ಸಂಶೋಧನಾ ಸಂಸ್ಥೆಯನ್ನ ಸ್ಥಾಪನೆ ಮಾಡಿ, ಅದಕ್ಕೆ ಡಾ. ಮನಮೋಹನ್ ಸಿಂಗ್ ಅವರ ಹೆಸರಿಟ್ಟಿದ್ದರೆ ಒಪ್ಪಿಕೊಳ್ಳುತ್ತಿದ್ದೆವು. ಇದು ಅವರಿಗೆ ಕೊಟ್ಟಿರುವ ಗೌರವ ಅಲ್ಲ, ಕಾಂಗ್ರೆಸ್ ಸರ್ಕಾರ ಅವರ ವ್ಯಕ್ತಿತ್ವಕ್ಕೆ ಮಾಡಿರುವ ಅವಮಾನ ಎಂದು ಅಶೋಕ್ ಖಂಡಿಸಿದ್ದಾರೆ.

ಮನಮೋಹನ್ ಸಿಂಗ್ ಅವರ ಬಗ್ಗೆ ನಮಗೆ ಯಾವುದೇ ತಕರಾರಿಲ್ಲ. ಅವರು ಪ್ರಧಾನಿಯಾಗಿದ್ದಾಗ ನಾನೂ ಅವರನ್ನು ಭೇಟಿಯಾಗಿದ್ದೀನಿ. ಬೆಂಗಳೂರಿನ ಬಗ್ಗೆ ನನಗೆ ವಿಶೇಷ ಪ್ರೀತಿ ಇದೆ, ಬೆಂಗಳೂರು ಕರ್ನಾಟಕದ ಹಬ್ ಅಲ್ಲ, ಇಡೀ ದೇಶದ್ದು ಎಂದು ಅವರೂ ಹೇಳಿದ್ದರು. ಹಾಗಾಗಿ ನಮಗೂ ಆ ಪ್ರೀತಿ ಇದೆ ಎಂದಿದ್ದಾರೆ.
ಮೊದಲು ಬೆಂಗಳೂರು ವಿಶ್ವವಿದ್ಯಾಲಯ ಆಗಿತ್ತು. ನಂತರ ಸೆಂಟ್ರಲ್ ವಿವಿ ಆಯ್ತು, ಆ ಮೇಲೆ ಬೆಂಗಳೂರು ಸಿಟಿ ವಿವಿ ಅಂತ ಹೆಸರು ಬದಲಾಯಿತು. ಈಗ ಕಾಂಗ್ರೆಸ್‌ನವರು ಮನಮೋಹನ್ ಸಿಂಗ್ ಅವರ ಹೆಸರಿಡಲು ಮುಂದಾಗಿದ್ದಾರೆ. ಇದು ಹಳೇ ಪಾತ್ರೆಗೆ ಕಲಾಯಿ ಹೊಡೆದಂತಿದೆ. ಅದರ ಬದಲು ಹೊಸ ವಿವಿ ಮಾಡಿ. ಮನಮೋಹನ್ ಸಿಂಗ್ ಅವರಂತಹ ದೊಡ್ಡ ವ್ಯಕ್ತಿಗೆ ಹೊಸ ಸಂಸ್ಥೆಯನ್ನ ಸ್ಥಾಪಿಸಿ, ಹಳೆಯದಕ್ಕೇ ಬಣ್ಣ ಹೊಡೆಯಲು ಯಾಕೆ ಹೋಗುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ತೇಪೆ ಯಾಕೆ ಹಾಕ್ತಿದ್ದೀರಿ?
ಬೆಂಗಳೂರು ಅನ್ನೋದು ಬ್ರ್ಯಾಂಡ್ ಇದೆ. ಬೆಂಗಳೂರು ಸಿಟಿ ಯೂನಿವರ್ಸಿಟಿ ಅಂದ್ರೆ ಒಂದು ಹೆಸರಿದೆ. ಮನಮೋಹನ್ ಸಿಂಗ್ ಅವರಿಗೆ ಇನ್ನೂ ದೊಡ್ಡ ವಿವಿ ಕಟ್ಟಿ. ಅವರು ಪ್ರಧಾನ ಮಂತ್ರಿ ಹುದ್ದೆಯಲ್ಲಿದ್ದವರು. ಅವರ ಘನತೆಗೆ ತಕ್ಕಂತೆ ನಿರ್ಮಿಸಿ. ಅದನ್ನೂ ನಾವು ಸ್ವಾಗತಿಸುತ್ತೇವೆ. ಆದ್ರೆ ನೀವು ಹಳೆಯದಕ್ಕೆ ಬಣ್ಣ ಹೊಡೆಯುವ ಕೆಲಸ ಮಾಡುತ್ತಿದ್ದೀರಿ. ಬೆಂಗಳೂರು ಸಿಟಿ ವಿವಿ ಹೆಸರು ತೆಗೆದು, ಮನಮೋಹನ್ ಸಿಂಗ್ ಹೆಸರು ನಿಲ್ಲಿಸುವ ತೇಪೆ ಕೆಲಸ ಏಕೆ? ಎಂದು ಸಚಿವ ಸುಧಾಕರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆ ವ್ಯಕ್ತಿಯ ಘನತೆಯನ್ನು ಹೆಚ್ಚಿಸುವಂತಹ ಹೊಸ ವಿಶ್ವವಿದ್ಯಾಲಯ ಕಟ್ಟಿ, ದಯವಿಟ್ಟು ಈ ಬಗ್ಗೆ ಸ್ವಲ್ಪ ಯೋಚನೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಅಶೋಕ್ ಸಲಹೆ ನೀಡಿದ್ದಾರೆ.












Click it and Unblock the Notifications