Breaking; ಬೆಂಗಳೂರು-ಮಂಗಳೂರು ನಡುವೆ ಹೆಚ್ಚುವರಿ ರೈಲಿಗೆ ಮನವಿ
ಬೆಂಗಳೂರು, ಜುಲೈ 19; ಬೆಂಗಳೂರು-ಮಂಗಳೂರು ನಡುವೆ ಹೆಚ್ಚುವರಿ ರೈಲುಗಳನ್ನು ಓಡಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಭೇಟಿಯಾಗಿ ಈ ಕುರಿತು ಸಂಸದರು ಮನವಿ ಸಲ್ಲಿಕೆ ಮಾಡಿದ್ದಾರೆ. ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ ಮೇಲೆ ಸಂಪಾಜೆ ಮತ್ತು ಚಾರ್ಮಾಡಿ ಘಾಟ್‌ಗಳಲ್ಲಿ ವಾಹನ ಸಂಚಾರ ದುಸ್ತರವಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಸಂಸದರು, "ನನ್ನ ಮನವಿಗೆ ಸ್ಪಂದಿಸಿದ ರೈಲ್ವೆ ಸಚಿವರು, ಈ ಕುರಿತು ಕ್ರಮ ಕೈಗೊಳ್ಳುತ್ತೇವೆ" ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ದೋಣಿಗಲ್ ಪ್ರದೇಶದಲ್ಲಿ ಭೂ ಕುಸಿತವಾದ ಹಿನ್ನಲೆಯಲ್ಲಿ ಮಂಗಳೂರು-ಬೆಂಗಳೂರು ಸಂಪರ್ಕಿಸುವ ಮುಖ್ಯ ರಸ್ತೆ ಶಿರಾಡಿ ಘಾಟ್‌ನಲ್ಲಿ ಅನಿರ್ಧಿಷ್ಟಾವಧಿಗೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ಕೆಲವು ಷರತ್ತುಗಳೊಂದಿಗೆ ಕಾರು, ಜೀಪು, ಚಿಕ್ಕ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಶಿರಾಡಿ ಬಂದ್ ಆದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕಿಸುವ ಚಾರ್ಮಾಡಿ ಘಾಟ್, ಆಗುಂಬೆ ಘಾಟ್, ಬಿಸಿಲೆ ಘಾಟ್, ಸಂಪಾಜೆ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ.
ಕರಾವಳಿ-ಬೆಂಗಳೂರು ನಡುವಿನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ಹಿನ್ನಲೆಯಲ್ಲಿ ಸಂಸದರು ಬೆಂಗಳೂರು ಮತ್ತು ಮಂಗಳೂರು ನಡುವೆ ಹೆಚ್ಚುವರಿ ರೈಲುಗಳ ಸಂಚಾರಕ್ಕೆ ಮನವಿ ಮಾಡಿದ್ದಾರೆ.
ಲಘು ವಾಹನಗಳಿಗೆ ಮುಕ್ತ; ಶಿರಾಡಿ ಘಾಟ್ ಮೂಲಕ ಲಘು ವಾಹನಗಳು ಮಂಗಳೂರು-ಬೆಂಗಳೂರು ಸಂಚಾರ ನಡೆಸಲು ಅವಕಾಶ ನೀಡಲಾಗಿದೆ. ಕಾರು, ಟೆಂಪೋ, ಮಿನಿ ವ್ಯಾನ್, ದ್ವಿಚಕ್ರ ವಾಹನ ಮತ್ತು ಆಂಬ್ಯುಲೆನ್ಸ್‌ಗಳಿಗೆ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಮಂಗಳೂರು-ಬೆಂಗಳೂರು ನಡುವೆ ಸಂಚಾರ ನಡೆಸುವ ಲಘು ವಾಹನಗಳು ಶಿರಾಡಿ ಘಾಟ್ ಮೂಲಕ ಮಾರನಹಳ್ಳಿ-ಕಾಡುಮನೆ-ಹಾರ್ಲೆ-ಕೂಡಿಗೆ-ಆನೆಮಹಲ್-ಸಕಲೇಶಪುರ ಮಾರ್ಗದ ಮೂಲಕ ಸಂಚಾರ ನಡೆಸಬೇಕು.
ಬೆಂಗಳೂರು-ಮಂಗಳೂರು ಲಘು ವಾಹನ ಪ್ರಯಾಣಿಕರು ಸಕಲೇಶಪುರ-ಆನೆಮಹಲ್-ಕ್ಯಾನಹಳ್ಳಿ-ಚಿನ್ನಳ್ಳಿ-ಕಡಗರವಳ್ಳಿ-ಮಾರನಹಳ್ಳಿ ಮೂಲಕ ಶಿರಾಡಿ ಘಾಟ್ ಸಂಪರ್ಕ ಸಾಧಿಸಿ ಮಂಗಳೂರಿಗೆ ತೆರಳಬೇಕು. ಈ ಎರಡೂ ಮಾರ್ಗಗಳಲ್ಲಿ ಏಕಮುಖ ಸಂಚಾರವನ್ನು ಮಾತ್ರ ಮಾಡಬಹುದಾಗಿದೆ.












Click it and Unblock the Notifications