KSDL Record: ₹1787 ಕೋಟಿ ವಹಿವಾಟು, ದಾಖಲೆ ಮಾರಾಟ! ನಿವ್ಹಳ ಲಾಭವೆಷ್ಟು? ಈ ಜಿಲ್ಲೆಯಲ್ಲಿ ಹೊಸ ಘಟಕ
ಬೆಂಗಳೂರು, ಏಪ್ರಿಲ್ 02: ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (KSDL) ಕಳೆದ 2024-25ನೇ ಸಾಲಿನಲ್ಲಿ ಅತ್ಯಧಿಕ ವಹೀವಾಟು ನಡೆಸಲಾಗಿದೆ. ಇದರಿಂದ ಅತ್ಯಧಿಕ ಲಾಭ ಗಳಿಕೆ ಆಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಮತ್ತು KSDL ಅಧ್ಯಕ್ಷರೂ ಆದ ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ ಅವರು ಬುಧವಾರ ಮಾಹಿತಿ ನೀಡಿದರು.
ಜಂಟಿ ಹೇಳಿಕೆ ನೀಡಿರುವ ಅವರು, ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (KSDL) 2024-25ರಲ್ಲಿ 1,787 ಕೋಟಿ ರೂಪಾಯಿ ದಾಖಲೆ ವಹಿವಾಟು ನಡೆಸಿ, ₹416 ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಕಳೆದ ಸಾಲಿಗಿಂತ ₹54 ಕೋಟಿ ಹೆಚ್ಚು ಆದಾಯ ಎಂದು ತಿಳಿಸಿರು.

ಕಳೆದ ಹಣಕಾಸು ವರ್ಷದಲ್ಲಿ ಸಂಸ್ಥೆಯು 43,144 ಮೆಟ್ರಿಕ್ ಟನ್ ಸಾಬೂನು ಮತ್ತು ಮಾರ್ಜಕಗಳನ್ನು ಮಾರಾಟ ಮಾಡಿ, ದಾಖಲೆಯ ಲಾಭ ಗಳಿಸಿದೆ. ಲಾಭದಲ್ಲಿ ನಿಯಮಾನುಸಾರ ಶೇಕಡಾ 30ರಷ್ಟನ್ನು, ಅಂದರೆ ₹123 ಕೋಟಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು ಎಂದರು.
ಸಂಸ್ಥೆಯು 2023-24ರಲ್ಲಿ 37,916 ಟನ್ ಉತ್ಪನ್ನ ಮಾರಾಟ ಮಾಡಿ, 1,570 ಕೋಟಿ ರೂಪಾಯಿ ವಹಿವಾಟು ನಡೆಸುವ ಮೂಲಕ 362 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿತ್ತು. ಆ ಪೈಕಿ 108 ಕೋಟಿ ರೂ.ಗಳನ್ನು ಸರಕಾರಕ್ಕೆ ಕೊಡಲಾಗಿತ್ತು. ಹಿಂದೆ ಸಂಸ್ಥೆಯು ಲಾಭಾಂಶ ಕೊಡುವ ಸರ್ಕಾರಿ ಉದ್ದಿಮೆಗಳ ಪೈಕಿ 21ನೇ ಸ್ಥಾನದಲ್ಲಿತ್ತು. ಈಗ 3ನೇ ಸ್ಥಾನದಲ್ಲಿದೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.
2024-25ರಲ್ಲಿ ಸಂಸ್ಥೆಯು ಉತ್ಪಾದನೆ, ಮಾರಾಟ ಮತ್ತು ಲಾಭ ಮೂರರಲ್ಲೂ ಸಾರ್ವಕಾಲಿಕ ದಾಖಲೆ ಬರೆದಿದೆ. ಕಳೆದ ಸಾಲಿನಲ್ಲಿ ರಫ್ತು ವಹಿವಾಟಿನ ಮೂಲಕವೂ KSDL 23.2 ಕೋಟಿ ರೂಪಾಯಿ ಮೊತ್ತದ ವಹಿವಾಟು ನಡೆಸಿದೆ.

ಸಂಸ್ಥೆಯು ಗ್ರಾಹಕರ ನಿರೀಕ್ಷೆಗೆ ತಕ್ಕಂತೆ 19 ಉತ್ಪನ್ನಗಳನ್ನು ಒಳಗೊಂಡಿದೆ. ಇದರಲ್ಲಿ ಮೈಸೋಪು, ಹ್ಯಾಂಡ್ ವಾಶ್, ಶವರ್ ಜೆಲ್, ಕುಡಿಯುವ ನೀರು, ಅಗರಬತ್ತಿ ಮುಂತಾದ ಉತ್ಕೃಷ್ಟ ಉತ್ಪನ್ನಗಳನ್ನು ಹೊಂದಿದೆ. ಮಾರುಕಟ್ಟೆ ವಿಸ್ತರಣೆ ಮತ್ತು ದಕ್ಷ ಉತ್ಪಾದನಾ ವಿಧಾನದ ಮೂಲಕ ಲಾಭವನ್ನು ಮತ್ತಷ್ಟು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
KSDLನಿಂದ ಇ-ಕಾಮರ್ಸ್: ಬೇರೆ ರಾಜ್ಯಗಳಲ್ಲೂ ವ್ಯಾಪಾರ
ಸಂಸ್ಥೆಯು ಈಗ ಇ-ಕಾಮರ್ಸ್ ಮತ್ತು ಆಧುನಿಕ ವ್ಯಾಪಾರ ಮಾದರಿಗಳನ್ನು ಅಳವಡಿಸಿಕೊಂಡಿದೆ. ಸಂಸ್ಥೆಯ ಚೆನ್ನೈ, ಹೈದರಾಬಾದ್, ಮುಂಬೈ, ಅಹಮದಾಬಾದ್, ದೆಹಲಿ, ಛತ್ತೀಸಗಢ ಮತ್ತು ಕೋಲ್ಕತಾ ಹಾಗೂ ಒಡಿಶಾ ಶಾಖೆಗಳಲ್ಲಿ ಕೂಡ ವಹಿವಾಟು ಹೆಚ್ಚಳ ಕಂಡಿದೆ ಎಂದು ಅವರು ನುಡಿದಿದ್ದಾರೆ.
ವಿಜಯಪುರದಲ್ಲಿ KSDL ಘಟಕ ಸ್ಥಾಪನೆ
ಸಂಸ್ಥೆಯಲ್ಲಿ ಈಗ ಮೂರು ಪಾಳಿಗಳ ಕೆಲಸದ ವ್ಯವಸ್ಥೆ ಇದೆ. ವಿಜಯಪುರದಲ್ಲಿ 250 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಸ್ಥೆಯ ಘಟಕವನ್ನು ತೆರೆಯಲಾಗುವುದು. ಇದಕ್ಕೆ 50 ಎಕರೆ ಜಾಗವನ್ನು ಕೆಐಎಡಿಬಿ ಹಂಚಿಕೆ ಮಾಡಿದೆ. 2025-26ರಲ್ಲಿ ಸಂಸ್ಥೆಯು 1,819 ಕೋಟಿ ರೂಪಾಯಿ ಮೊತ್ತದ ವಹಿವಾಟು ನಡೆಸುವ ಗುರಿ ಹೊಂದಿದೆ ಎಂದು ಸಚಿವರು ಹೇಳಿದರು.
ಕೆಎಸ್ ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಎಂ.ಪ್ರಶಾಂತ ಅವರು ಮಾತನಾಡಿ, ಕಳೆದ ಎರಡು ವರ್ಷಗಳಿಂದ ಸಂಸ್ಥೆಯ ಲಾಭದ ಪ್ರಮಾಣ ಏರುಮುಖವಾಗಿದೆ. ಪಾರದರ್ಶಕತೆ, ದಕ್ಷತೆ, ಮಾರುಕಟ್ಟೆ ವಿಸ್ತರಣೆ ಮತ್ತು ಗುಣಮಟ್ಟ ಈ ನಾಲ್ಕು ಅಂಶಗಳಿಗೆ ಆದ್ಯತೆ ನೀಡಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದರು.
ಸಂಸ್ಥೆಯ ಸಾಬೂನು ಘಟಕವು ಕಳೆದ ಸಾಲಿನಲ್ಲಿ 36,268 ಟನ್, ಡಿಟರ್ಜೆಂಟ್ ಘಟಕವು 5,788 ಟನ್ ಮತ್ತು ಸೌಂದರ್ಯ ವರ್ಧಕಗಳ ಘಟಕವು 1,087 ಟನ್ ಉತ್ಪನ್ನಗಳನ್ನು ತಯಾರಿಸಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications