ಸಾರಿಗೆ ಸಚಿವರೇ ಸಾರ್ವಜನಿಕರ ದುಡ್ಡಂದ್ರೆ ಜೆರಾಕ್ಸ್ ಪೇಪರಾ?
ನಾಲ್ಕೈದು ತಿಂಗಳ ಕೆಳಗೆ ಉತ್ತರ ಕರ್ನಾಟಕದ ನಾನಾ ಪ್ರದೇಶಗಳಿಗೆ ಕೆಂಪೇಗೌಡ ಬಸ್ ನಿಲ್ದಾಣದ ಮೂಲಕ ಸಂಚರಿಸುತ್ತಿದ್ದ ಕರ್ನಾಟಕ ಸಾರಿಗೆ ಬಸ್ಸುಗಳನ್ನು ಪೀಣ್ಯ ಬಸವೇಶ್ವರ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿತ್ತು. ನೂತನ ಬಸ್ ನಿಲ್ದಾಣಕ್ಕೆ 40 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು.
ಇದರಿಂದಾಗಿ KSRTCಯ ವಿವಿಧ ಘಟಕಗಳು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುತ್ತಿದೆ ಎನ್ನುವ ಕಾರಣಕ್ಕಾಗಿ ಮತ್ತೆ ಮೆಜೆಸ್ಟಿಕ್ ನಿಲ್ದಾಣಕ್ಕೆ ಮರು ಸ್ಥಳಾಂತರ ಮಾಡುವ ನಿರ್ಧಾರಕ್ಕೆ ಸರಕಾರ ಬಂದಿದೆ. ಪೀಣ್ಯಗೆ ಸ್ಥಳಾಂತರಿಸುವ ನಿರ್ಧಾರದ ಹಿಂದೆ ಸಂಚಾರ ದಟ್ಟಣೆ ಕಮ್ಮಿಗೊಳಿಸುವ ಸದುದ್ದೇಶ ಇತ್ತು ಎಂದು ಸರಕಾರ ಹೇಳಿಕೊಳ್ಳುತ್ತಿದ್ದರೂ ವಾಸ್ತವತೆ ಏನು?
ಬಸವೇಶ್ವರ ನಿಲ್ದಾಣಕ್ಕೆ ಪೀಣ್ಯದ ತುಮಕೂರು ರಸ್ತೆಯಿಂದ ಸುಮಾರು ಎರಡು ಕಿಲೋಮೀಟರ್ ಒಳಗೆ ಸಂಚರಿಸ ಬೇಕಾಗುತ್ತದೆ. ಈ ನಿಲ್ದಾಣದ ಶಂಕುಸ್ಥಾಪನೆಯ ಹಂತದಲ್ಲೇ ಇದಕ್ಕೆ ಅಪಸ್ವರ ಎದ್ದಿತ್ತು ಮತ್ತು ಇದು ಯಶಸ್ವಿಯಾಗುವುದರ ಬಗ್ಗೆ ಸಂಶಯ ಕೂಡಾ ವ್ಯಕ್ತವಾಗಿತ್ತು. (ಪೀಣ್ಯ ನಿಲ್ದಾಣ ಸ್ಥಳಾಂತರ: ಸಚಿವರ ಹೇಳಿಕೆ)

ಆದರೂ, ಇದ್ಯಾವುದನ್ನೂ ಲೆಕ್ಕಿಸದೇ ಸರಕಾರ ಈ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂದಾಯಿತು. 2005ರಲ್ಲಿ ಸ್ಥಾಪನೆಯಾದ ಮೈಸೂರು ರಸ್ತೆಯ ಸ್ಯಾಟಲೈಟ್ ಮತ್ತು 2010ರಲ್ಲಿ ಸ್ಥಾಪನೆಯಾದ ಕೆ ಎಚ್ ರಸ್ತೆಯ ಶಾಂತಿನಗರ ಬಸ್ ನಿಲ್ದಾಣಕ್ಕೂ, ಪೀಣ್ಯದ ಬಸ್ ನಿಲ್ದಾಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಏಕೆಂದರೆ ಅವೆರಡೂ ನಗರದ ಹೃದಯ ಭಾಗದಲ್ಲಿವೆ.
ಹೊಸ ಬಸ್ ನಿಲ್ದಾಣ ಸ್ಥಾಪನೆ ಮಾಡಿದರೆ ಜನರು ಪೀಣ್ಯಕ್ಕೆ ಹೋಗುತ್ತಾರೆ. ಒಂದೆರಡು ದಿನ ಪ್ರತಿಭಟನೆ ನಡೆಸಿ ನಂತರ ಅಲ್ಲಿಂದಲೇ ಬಸ್ಸು ಹತ್ತುತ್ತಾರೆ ಎನ್ನುವ ಸರಕಾರದ ಅತಿಯಾದ ಆತ್ಮವಿಶ್ವಾಸಕ್ಕೆ ಜನರು ಸ್ಪಂದಿಸಲಿಲ್ಲ. ಹಾಗಾಗಿ ನಿರೀಕ್ಷೆಯಂತೆ ಉದ್ಘಾಟನೆಗೊಂಡ ನಾಲ್ಕೇ ತಿಂಗಳಲ್ಲಿ ಸರಕಾರ ಪೀಣ್ಯ ಬಸ್ ಟರ್ಮಿನಲ್ ಸ್ಥಳಾಂತರದ ನಿರ್ಧಾರಕ್ಕೆ ಹೆಚ್ಚುಕಮ್ಮಿ ಬಂದಿದೆ.
ಬೆಂಗಳೂರು ಮಹಾನಗರದಲ್ಲಿ ಸಾರ್ವಜನಿಕರ ದೈನಂದಿನ ಜೀವನಕ್ಕೆ ಜೀವನಾಡಿಯಂತಿರುವ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ವಿಚಾರದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸರಕಾರಕ್ಕೆ ಕನಿಷ್ಠ ಮುಂದಾಲೋಚನೆ ಬೇಡವೇ? ಕೋಟ್ಯಾಂತರ ತೆರಿಗೆದಾರರ ದುಡ್ಡನ್ನು ಬೇಕಾಬಿಟ್ಟಿ ಪೋಲು ಮಾಡಲು ಇವರಿಗೆ ಒಂದು ಲೆಕ್ಕಾಚಾರ ಅನ್ನೋದು ಬೇಡ್ವಾ?

ಮೆಜೆಸ್ಟಿಕ್‌ನಿಂದ ಪೀಣ್ಯ ನಿಲ್ದಾಣಕ್ಕೆ ಹೋಗಲು ಬಸ್ ವ್ಯವಸ್ಥೆ ಮಾಡಲಾಗಿದ್ದರೂ, ಸಾರ್ವಜನಿಕರು ಅಪ್ ಎಂಡ್ ಡೌನ್ ಪ್ರಯಾಣಕ್ಕೆ 30 ರೂಪಾಯಿ ಪಾವತಿಸಬೇಕು. ಅದಲ್ಲದೇ ಪೀಣ್ಯ ಏನೂ ಹತ್ತಿರ ಇದೆಯಾ? ಲಗೇಜು ತುಂಬಾ ಇದ್ದು ಆಟೋ ಹಿಡಿದರಂತೂ ಹೋಗಿ ಬರಲು ನಾಲ್ಕುನೂರು ರೂಪಾಯಿ!
ಇಷ್ಟೆಲ್ಲಾ ಖರ್ಚು ಮಾಡಿ ರಾಜ್ಯ ಸಾರಿಗೆ ಬಸ್ಸಿನಲ್ಲಿ ಹೋಗೋಕೆ ಜನ ಮನಸ್ಸು ಮಾಡ್ತಾರಾ? ಖಾಸಗಿ ಬಸ್ಸುಗಳು ಮನೆಯ ಪಕ್ಕದಿಂದಲೇ ಪಿಕ್ ಅಪ್ ಮಾಡುತ್ತಿರ ಬೇಕಾದರೆ ಸರಕಾರೀ ಬಸ್ಸನಲ್ಲೇ ಪ್ರಯಾಣಿಸೋಕೆ kSRTC ಅಂದರೆ ಜನರಿಗೆ ಪ್ರೀತಿನಾ, ಸ್ನೇಹನಾ?
ಈಗಾಗಲೇ ಅಲ್ಲಿ ಕೋಟ್ಯಾಂತರ ರೂಪಾಯಿ ಠೇವಣಿ ಇಟ್ಟು ಮಳಿಗೆ ತೆರೆದಿರುವ ವ್ಯಾಪಾರಿಗಳ ಪಾಡೇನು? ಇವರಿಗಾಗುವ ನಷ್ಟದ ಬಗ್ಗೆ ಸರಕಾರಕ್ಕೆ ಕಾಳಜಿ ಇದೆಯಾ? ಇವರ ಬಗ್ಗೆ ಮುಂದಾಲೋಚನಾ ಕ್ರಮ ಏನಾದರೂ ತೆಗೆದುಕೊಂಡಿದ್ದೀಯಾ ಎನ್ನುವುದಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರೇ ಉತ್ತರ ನೀಡಬೇಕು. (ಪೀಣ್ಯ ಬಸ್ ನಿಲ್ದಾಣ ಹೇಗಿದೆ ಗೊತ್ತಾ)
ಇಷ್ಟೆಲ್ಲಾ ಸಾರ್ವಜನಿಕರ ದುಡ್ಡನ್ನು ಪೋಲು ಮಾಡುವ ಬದಲು ಮೆಜೆಸ್ಟಿಕ್ ಭಾಗದಲ್ಲಿ ಖಾಸಗಿ ಬಸ್ಸುಗಳಿಗೆಂದೇ ಮೀಸಲಾಗಿರುವ ಜಾಗವನ್ನು ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಬಳಸಿಕೊಳ್ಳಬಹುದಾಗಿತ್ತಲ್ಲ? ಖಾಸಗಿ ಬಸ್ಸುಗಳಿಗೆ ಪೀಣ್ಯದಲ್ಲಿ ಅವಕಾಶ ನೀಡಬಹುದಾಗಿತ್ತಲ್ಲಾ? ಅಥವಾ ಇದರ ಹಿಂದೆ ಖಾಸಗಿ ಬಸ್ ಮಾಲೀಕರ ಲಾಬಿ/ಹಿತಾಶಕ್ತಿ ಏನಾದರೂ ಇದೆಯಾ?
ಈಗಲೇ ಖಾಲಿ ಹೊಡೆಯುತ್ತಿರುವ (ಸಾರಿಗೆ ಸಂಸ್ಥೆಯ ಅಧಿಕಾರಿಗಳ ಪ್ರಕಾರ) ಬಸವೇಶ್ವರ ಬಸ್ ನಿಲ್ದಾಣ, ನಾಳೆಯ ದಿನ ಇನ್ನಷ್ಟು ಬಿಕೋ ಅನಿಸಿ ಅಕ್ರಮ ಚಟುವಟಿಕೆಗಳ ತಾಣವಾಗದಿದ್ದರೆ ಸಾಕು. ಸಾರ್ವಜನಿಕರ ಹಣವನ್ನು ಮುಂದಾಲೋಚನೆ ಮೂಲಕ ಸದ್ವಿನಿಯೋಗ ಮಾಡಬೇಕು ಎನ್ನುವ ಮನಸ್ಸು ಸರಕಾರಕ್ಕೆ ಇರಬೇಕು, ಅದಿಲ್ವೇ?












Click it and Unblock the Notifications