ವಾಣಿವಿಲಾಸ ಮಾದರಿಯಲ್ಲೇ ಕೆ.ಸಿ ಜನರಲ್ ತಾಯಿ-ಶಿಶು ಆರೈಕೆ ವಿಭಾಗ: ಡಾ.ಕೆ ಸುಧಾಕರ್
ಬೆಂಗಳೂರು, ಏಪ್ರಿಲ್ 20 : ನಿರ್ಮಾಣ್ ಹಾಗೂ ಓಪನ್ ಟೆಕ್ಸ್ಟ್ ನೆರವಿನಲ್ಲಿ ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಐಸಿಯು ಉನ್ನತೀಕರಣ ಹಾಗೂ ವೈದ್ಯಕೀಯ ಉಪಕರಣಗಳ ಅಳವಡಿಕೆ ಕಾರ್ಯಕ್ರಮದಲ್ಲಿ ಬುಧವಾರ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಭಾಗಿಯಾಗಿದ್ದರು.
ಬಳಿಕ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಸಚಿವರು, "ವಾಣಿ ವಿಲಾಸ ಆಸ್ಪತ್ರೆಯ ಮಾದರಿಯಲ್ಲೇ ಕೆ.ಸಿ ಜನರಲ್ ಆಸ್ಪತ್ರೆಯಲ್ಲೂ 100 ಹಾಸಿಗೆಗಳ ತಾಯಿ-ಶಿಶು ಆರೈಕೆ ಕೇಂದ್ರ ನಿರ್ಮಿಸಲಾಗುತ್ತದೆ. ಈಗಾಗಲೇ ಅಯವ್ಯಯದಲ್ಲಿ ಘೋಷಿಸಿದಂತೆ, ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ಕನಿಷ್ಟ 500 ಹಾಸಿಗೆ ಸಾಮರ್ಥ್ಯ ಇರುವ ಸೂಪರ್ ಸ್ಟೆಪಾಲಿಟಿ ಆಸ್ಪತ್ರೆಗಳನ್ನ ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಾಗುತ್ತದೆ. ಈ ವರ್ಷದಲ್ಲೇ ಎಲ್ಲಾ ಪ್ರಸ್ತಾವಗಳು ಬರಲಿದ್ದು, ಜಾಗಗಳನ್ನು ಗುರುತಿಸಲಾಗುವುದು. ಶೀಘ್ರದಲ್ಲಿ ಶಿಲಾನ್ಯಾಸ ಕೂಡ ನೇರವೇರಿಸಲಾಗುವುದು," ಎಂದು ಸಚಿವರು ಭರವಸೆ ನೀಡಿದ್ದಾರೆ.
Koo Appಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಡಿ ಜಾರಿಯಲ್ಲಿರುವ ವಿವಿಧ ಯೋಜನೆಗಳ ಅನುಷ್ಠಾನ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಚಿಕಿತ್ಸಾ ವೆಚ್ಚ ಪಾವತಿ, ಸಂಭಾವ್ಯ ಕೊರೊನಾ 4ನೇ ಅಲೆಗೆ ಅಗತ್ಯ ಮುಂಜಾಗ್ರತಾ ಕ್ರಮ ಹಾಗು ಪೂರ್ವಸಿದ್ಧತೆ ಸೇರಿದಂತೆ ಹಲವು ವಿಷಯಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಇಂದು ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. - Dr. Sudhakar K (@drsudhakark.official) 20 Apr 2022
ಖಾಸಗಿ ಸಂಸ್ಥೆಗಳು ಕೆ.ಸಿ ಜನರಲ್ ಆಸ್ಪತ್ರೆಗೆ 10 ಹಾಸಿಗೆಗಳ ಐಸಿಯು ವ್ಯವಸ್ಥೆಯನ್ನು ಮಾಡಿಕೊಟ್ಟಿವೆ. ಜೊತೆಗೆ ಇದಕ್ಕೆ ಬೇಕಿರುವ ಉಪಕರಣಗಳನ್ನೂ ಕೂಡ ನೀಡಿದ್ದಾರೆ ಎಂದರು. ಅಲ್ಲದೆ ದೇಶದಲ್ಲಿರುವ 5 ವರ್ಷದೊಳಗಿನ ಒಂದೂವರೆ ಲಕ್ಷದಷ್ಟು ಮಕ್ಕಳು ನ್ಯುಮೋನಿಯಾಗೆ ತುತ್ತಾಗುತ್ತಿದ್ದಾರೆ. ರಾಜ್ಯದಲ್ಲಿ 1,000 ನವಜಾತ ಶಿಶುಗಳು ಜನಿಸಿದರೆ, ಅದರಲ್ಲಿ 28 ಸಾವುಗಳು ನ್ಯುಮೋನಿಯಾದಿಂದ ಸಂಭವಿಸುತ್ತಿವೆ. ಹೀಗಾಗಿ ಇದನ್ನು ನಾಲ್ಕು, ಐದಕ್ಕೆ ಇಳಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಗುರಿ ನೀಡಿದೆ. ಇದಕ್ಕಾಗಿ ಹೆಚ್ಚು ಅರಿವು ತರುವ ಕಾರ್ಯಕ್ರಮ ನಡೆಯಬೇಕಿದೆ.

ಮುನ್ನೆಚ್ಚರಿಕೆಯಿಂದಲೇ ಅನೇಕ ರೋಗಗಳನ್ನು ತಡೆಗಟ್ಟಲು ಸಾಧ್ಯವಿದೆ. ಮಕ್ಕಳ ಆರೋಗ್ಯ ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ ಎಂದರು. ಜೊತೆಗೆ ರಾಜ್ಯದಲ್ಲೂ ಕೂಡ 5 ವರ್ಷದೊಳಗಿನ ಮಕ್ಕಳು ನ್ಯುಮೋನಿಯಾದಿಂದ ಸಾವೀಗಾಡಗುವುದನ್ನ ತಪ್ಪಿಸಲು ರಾಜ್ಯ ಮಟ್ಟದಲ್ಲಿ ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಕಾರ್ಯಕ್ರಮದ ಭಾಗವಾಗಿ ಆಶಾ ಕಾರ್ಯಕರ್ತೆಯರು, ಇತರೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಘೋಷಿಸಿ ಹೆಣ್ಣುಮಕ್ಕಳ ರಕ್ಷಣೆಗೆ ಒತ್ತು ನೀಡಿದ್ದಾರೆ. ಇದೇ ರೀತಿ ಭ್ರೂಣ ಪತ್ತೆ ಮಾಡಿ ಹತ್ಯೆ ಮಾಡುವುದನ್ನು ತಡೆಯಲು ಕಠಿಣ ಕಾನೂನು ಕ್ರಮ ಜಾರಿಯಲ್ಲಿದೆ. ಹೊಸ ಎನ್‌ಟಿಪಿ ಕಾನೂನಿನಲ್ಲಿ ಆಪತ್ತು ಇರುವ ತಾಯಂದಿರುವ ಹಾಗೂ ಆರೋಗ್ಯಕರವಾಗಿ ಬೆಳೆಯದ ಭ್ರೂಣಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಗರ್ಭಪಾತ ಮಾಡಲು ಅವಕಾಶವಿದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಅಂತ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದರು.

ಕೆ.ಸಿ.ಜನರಲ್ ಆಸ್ಪತ್ರೆಗೆ ಉತ್ತಮ ಬದಲಾವಣೆ ಬೇಕಿದೆ
"ಕೆ.ಸಿ.ಜನರಲ್ ಆಸ್ಪತ್ರೆ ನಗರದ ಹೃದಯಭಾಗದಲ್ಲಿದ್ದು, ಉತ್ತಮ ಆಸ್ಪತ್ರೆಯಾಗಿದೆ. ಇಲ್ಲಿಗೆ ಬರುವ ರೋಗಿಗಳನ್ನು ಮನೆಯವರಂತೆ ಆರೈಕೆ ಮಾಡುವ ಅಗತ್ಯವಿದೆ. ಆದರೆ ಅಂತಹ ನಿರೀಕ್ಷಿತ ಬದಲಾವಣೆ ಈ ಆಸ್ಪತ್ರೆಯಲ್ಲಿ ಕಂಡುಬಂದಿಲ್ಲ. ಜಯದೇವ, ವಾಣಿ ವಿಲಾಸ ಮೊದಲಾದ ಆಸ್ಪತ್ರೆಗಳಲ್ಲಿ ಖಾಸಗಿಗಿಂತ ಹೆಚ್ಚು ಗುಣಮಟ್ಟದ ಸೇವೆ ದೊರೆಯುತ್ತಿದೆ. ಇದೇ ರೀತಿ ಕೆ.ಸಿ.ಜನರಲ್ ಆಸ್ಪತ್ರೆಯಲ್ಲೂ ಏಕೆ ಸೇವೆ ದೊರೆಯುತ್ತಿಲ್ಲ ಎಂದು ಚಿಂತಿಸಬೇಕಿದೆ.

ಆಸ್ಪತ್ರೆಯ ಎಲ್ಲರೂ ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಬೇಕು. ಆಸ್ಪತ್ರೆಯ ಸಂಪೂರ್ಣ ವ್ಯವಸ್ಥೆಯನ್ನು ನಿರ್ವಹಣೆ ಮಾಡುವವರು ಉತ್ತಮವಾಗಿ ಕೆಲಸ ಮಾಡಬೇಕು. ಒಳ್ಳೆಯ ಸೇವೆ ನೀಡಿದರೆ ಜನರಿಗೆ ಒಳ್ಳೆಯದಾಗುತ್ತದೆ. ಇದರಿಂದ ಸರ್ಕಾರಕ್ಕೂ ಹೆಸರು ಬರುತ್ತದೆ,"ಎಂದು ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರಿಗೆ ಸಚಿವರು ಕಿವಿಮಾತು ಹೇಳಿದರು.












Click it and Unblock the Notifications