ಬೆಂಗಳೂರು:ಕೊರೊನಾದಿಂದ ಮೃತಪಟ್ಟ ಬಹುತೇಕರಿಗೆ ಈ 2 ಸಮಸ್ಯೆಯಿತ್ತು
ಬೆಂಗಳೂರು, ನವೆಂಬರ್ 17: ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ರೋಗಿಗಳಲ್ಲಿ ಸಾಮಾನ್ಯವಾಗಿ ಈ ಎರಡು ಸಮಸ್ಯೆಗಳಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮೃತಪಟ್ಟ ರೋಗಿಗಳಲ್ಲಿ ಮಧುಮೇಹ ಮತ್ತು ರಕ್ತದೊತ್ತಡ ಹೆಚ್ಚಾಗಿ ಕಾಣಿಸಿಕೊಂಡಿತ್ತು.
ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದು, ದ್ವಿತೀಯಕ ಸೋಂಕಿಗೆ ಒಳಗಾಗುತ್ತಾರೆ. ಕೊವಿಡ್-19 ನಂತಹ ಸೋಂಕಿಗೆ ಒಂದು ಬಾರಿ ತುತ್ತಾದರೆ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಹೆಚ್ಚಾಗುತ್ತದೆ.
ಕೊವಿಡ್-19 ಸೋಂಕಿಗೆ ತುತ್ತಾದ ಬಹುತೇಕ ವೃದ್ಧರ ಸಾವಿಗೆ ಮಧುಮೇಹವೇ ಕಾರಣವಾಗಿದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಮತ್ತು ಕಡಿಮೆ ರೋಗ ನಿರೋಧಕ ಶಕ್ತಿ ಇರುವುದು ಅಧ್ಯಯನದಲ್ಲಿ ತಿಳಿದುಬಂದಿದೆ. ಅಧಿಕ ರಕ್ತದೊತ್ತಡ ಸಮಸ್ಯೆಯೂ ಕೂಡಾ ಸಾವಿಗೆ ಕಾರಣವಾಗಿರಬಹುದು ಎಂದು ಡಾ. ಮಹೇಶ್ ತಿಳಿಸಿದ್ದಾರೆ.
ಬೌರಿಂಗ್ ಆಸ್ಪತ್ರೆಯಲ್ಲಿ 61 ರಿಂದ 70 ವರ್ಷದ 50 ರೋಗಿಗಳು, 51ರಿಂದ 60 ವರ್ಷದೊಳಗಿನ 47 ರೋಗಿಗಳು, 71ರಿಂದ 80 ವರ್ಷದೊಳಗಿನ 44 ರೋಗಿಗಳು, 41 ರಿಂದ 50 ವರ್ಷದೊಳಗಿನ 38 ರೋಗಿಗಳು, 31ರಿಂದ 40 ವರ್ಷದೊಳಗಿನ 17 ಸೋಂಕಿತರು, 21ರಿಂದ 30 ವರ್ಷದೊಳಗಿನ 8 ರೋಗಿಗಳು, 11ರಿಂದ 20 ವರ್ಷದೊಳಗಿನ ಇಬ್ಬರು ಸಾವನ್ನಪ್ಪಿದ್ದಾರೆ. ಒಟ್ಟು 221 ಸಾವಿನ ಪೈಕಿಯಲ್ಲಿ 145 ಪುರುಷರು ಮತ್ತು 76 ಮಹಿಳೆಯರು ಆಗಿದ್ದಾರೆ.

ಈ ಸಮಸ್ಯೆಗಳಿದ್ದರೆ ಗುಣಮುಖರಾಗಲು ಸಾಧ್ಯವಿಲ್ಲ
ಅಲ್ಲದೇ ಅವರ ಶ್ವಾಸಕೋಶವು ವೈರಸ್ ನಿಂದ ಪ್ರಭಾವಿತವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅವರು ಗುಣಮುಖರಾಗಲು ಸಾಧ್ಯವಿರುವುದಿಲ್ಲ ಎಂದು ಬೌರಿಂಗ್ ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕ ಡಾ. ಮನೋಜ್ ಕುಮಾರ್ ಆಂಗ್ಲ ಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.

ಅಧಿಕ ರಕ್ತದೊತ್ತಡ
ಅಧಿಕ ರಕ್ತದೊತ್ತಡ ಇರುವ ರೋಗಿಗಳಲ್ಲಿ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಕೊರೊನಾ ಸೋಂಕಿಗೆ ಒಳಪಟ್ಟ ರೋಗಿಗಳಲ್ಲಿ ಹೃದಯ ಸ್ನಾಯುಗಳಲ್ಲಿ ಊರಿಯೂತವಾಗಿ ಸಾವಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಎರಡು ರೀತಿಯ ಮಧುಮಹ
ಟೈಪ್1 ಮತ್ತು ಟೈಪ್ 2 ಮಧುಮೇಹ ಎರಡೂ ದೀರ್ಘಕಾಲದ ಕಾಯಿಲೆಗಳಾಗಿವೆ, ಅದು ರಕ್ತದಲ್ಲಿ ಹೆಚ್ಚಿನ ಸಕ್ಕರೆ ಮಟ್ಟವನ್ನು ಉತ್ಪಾದಿಸುತ್ತದೆ. ಮಧುಮೇಹಿಗಳಲ್ಲಿ ದೇಹವು ಗ್ಲೂಕೋಸ್ ಅನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಇನ್ಸುಲಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ, ದೇಹದಲ್ಲಿ ಗ್ಲೂಕೋಸ್ ಹೆಚ್ಚಾಗುತ್ತದೆ ಎಂದು ಅಸ್ಟರ್ ಸಿಎಂಐ ಆಸ್ಪತ್ರೆಯ ಸಮಾಲೋಚಕ ವೈದ್ಯ ಡಾ. ಮಹೇಶ್ ಹೇಳುತ್ತಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ 221 ಮಂದಿಸಾವು
ನಗರದ ಸರ್ಕಾರಿ ಆಸ್ಪತ್ರೆ ಲೇಡಿ ಕರ್ಜನ್ ಬೌರಿಂಗ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನವೆಂಬರ್ 8ರವರೆಗೂ ಒಟ್ಟಾರೆಯಾಗಿ 221 ಕೊವಿಡ್-19 ಸೋಂಕಿತರು ಮೃತಪಟ್ಟಿದ್ದಾರೆ. ಇವರಲ್ಲಿ ಬಹುತೇಕ ಸೋಂಕಿತರು ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಅಥವಾ ಮಧುಮೇಹಿಗಳು ಎಂಬುದು ತಿಳಿದುಬಂದಿದೆ.












Click it and Unblock the Notifications