Ganja Plants: ಯಲಹಂಕ ಅಟ್ಟೂರು ಸ್ಮಶಾನದ ಜಾಗದಲ್ಲಿ ಗಾಂಜಾ ಘಾಟು... ಸ್ಥಳೀಯರಲ್ಲಿ ಆತಂಕ!
ಬೆಂಗಳೂರು ಆಗಸ್ಟ್ 21: ರಾಜ್ಯವನ್ನು ಡ್ರಗ್ಸ್ ಮುಕ್ತವಾಗಿ ಮಾಡಬೇಕು ಎನ್ನುವ ಪ್ರಯತ್ನದಲ್ಲಿ ಪೊಲೀಸ್ ಇಲಾಖೆ ಹಾಗೂ ಸರ್ಕಾರ ಪ್ರಯತ್ನ ಮಾಡುತ್ತಿದೆ. ಆದರೆ ನಿರ್ಜನ ಪ್ರದೇಶವನ್ನು ಆಯ್ಕೆ ಮಾಡಿಕೊಂಡ ಕೆಲ ವ್ಯಸನಿಗಳು ಅವುಗಳನ್ನು ಗಾಂಜಾ ಅಡ್ಡೆಗಳನ್ನಾಗಿ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಯಲಹಂಕ ಅಟ್ಟೂರು ಸ್ಮಶಾನದ ಜಾಗದಲ್ಲಿ ಗಾಂಜಾ ಗಿಡಗಳು ಬೆಳೆದಿರುವುದು ಬೆಳಕಿಗೆ ಬಂದಿದೆ.
ಯಲಹಂಕ ಅಟ್ಟೂರು ಸ್ಮಶಾನದಲ್ಲಿ ಹತ್ತಕ್ಕೂ ಹೆಚ್ಚು ಗಾಂಜಾ ಗಿಡಗಳು ಪತ್ತೆಯಾಗಿವೆ. ನಿತ್ಯ ಕೆಲ ಯುವಕರು ಬಂದು ಇಲ್ಲಿ ಗಾಂಜಾ ಸೇವನೆ ಮಾಡಿ ಹೋಗುತ್ತಾರೆ. ಸಣ್ಣ ವಯಸ್ಸಿನಲ್ಲಿ ಯುವಕರು ದಾರಿ ತಪ್ಪುತ್ತಿರುವುದು ಜನರಲ್ಲಿ ತಮ್ಮ ಮಕ್ಕಳ ಬಗ್ಗೆ ಆತಂಕ ಹೆಚ್ಚಿಸಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಯಾರೂ ಇಲ್ಲದ ಸಮಯದಲ್ಲಿ ಸ್ಮಶಾನವನ್ನು ಅಡ್ಡೆಯನ್ನಾಗಿ ಮಾಡಿಕೊಂಡ ವ್ಯಸನಿಗಳು ಗಾಂಜಾ ಸೇವನೆ ಮಾಡುತ್ತಿದ್ದಾರೆ. ಈ ವೇಳೆ ಬಿದ್ದ ಬೀಜಗಳಿಂದ ಸ್ಮಶಾನದಲ್ಲಿ ಗಿಡಗಳು ಬೆಳೆದಿವೆ. ಇದೇ ಗಿಡಗಳನ್ನು ಪುನ: ಬಳಕೆಗೆ ವ್ಯಸನಿಗಳು ಬಳಕೆ ಮಾಡುತ್ತಿರಬಹುದು ಎಂದು ಶಂಕಿಸಲಾಗಿದೆ.
ಸಾಮಾನ್ಯವಾಗಿ ಸ್ಮಶಾನ ನಿರ್ಜನ ಪ್ರದೇಶ ಆಗಿದ್ದರಿಂದ ಯಾರೂ ಕೂಡ ಓಡಾಡುವುದಿಲ್ಲ. ಇಂತಹ ಸ್ಥಳಗಳನ್ನು ಗಾಂಜಾ ಸೇವನೆಗೆ ಯುವಕರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಸ್ಮಶಾನಗಳು ವ್ಯಸನಿಗಳ ಅಡ್ಡೆಗಳಾಗುತ್ತಿವೆಯಾ ಎನ್ನುವ ಅನುಮಾನ ಶುರುವಾಗಿದೆ.
ಸಿನಿಮಾ ಮೂಲಕ ಜಾಗೃತಿ
ಇತ್ತೀಚೆಗೆ ತೆರೆಕಂಡ ದುನಿಯಾ ವಿಜಯ್ ಅಭಿನಯದ 'ಭೀಮ' ಸಿನಿಮಾದಲ್ಲಿ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಜನರು ಹೇಗೆ ಹಾಳಾಗುತ್ತಿದ್ದಾರೆ ಎಂಬುದನ್ನು ತೋರಿಸಲಾಗಿದೆ. ಬೆಂಗಳೂರು ಅಲ್ಲದೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಗಾಂಜಾ ಮತ್ತು ಡ್ರಗ್ಸ್ನಿಂದ ಯುವಕ, ಯುವತಿಯರು ಎಷ್ಟರ ಮಟ್ಟಿಗೆ ಹಾಳಾಗಿದ್ದಾರೆ ಅನ್ನೋದೇ ಭೀಮ ಸಿನಿಮಾದ ಕಥೆಯಾಗಿದೆ.

ಇನ್ನೂ ಏಳೆಂಟನೇ ತರಗತಿಯಲ್ಲಿಯೇ ಗಾಂಜಾಗೆ ಅಡಿಕ್ಟ್ ಆಗಿ ಕೊನೆಗೆ ವ್ಯಸನಮುಕ್ತ ಕೇಂದ್ರದಲ್ಲಿ ಸೇರಿಕೊಂಡು ಈಗ ಗುಣಮುಕ್ತನಾಗುತ್ತಿರುವ ಗಂಜಾ ವ್ಯಸನಿಯನ್ನು ಸ್ವತ: ದುನಿಯಾ ವಿಜಯ್ ಮಾತನಾಡಿಸಿದ್ದು, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Petrol price: ಆಗಸ್ಟ್ 21 ರಂದು ಭಾರತದ ವಿವಿಧ ನಗರಗಳಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ತಿಳಿಯಿರಿ
ವಿಡಿಯೋದಲ್ಲಿ ಮಾತನಾಡಿದ ವಿಜಯ್, ಎಷ್ಟನೇ ವಯಸ್ಸಿಗೆ ನೀನು ಗಾಂಜಾ ಸೇದುತ್ತಿದ್ದೆಯೆಂದು ಪ್ರಶ್ನಿಸಿದರು. ನಾನು ಎಂಟನೇ ತರಗತಿಗೆ ಗಾಂಜಾ ಸೇದೋದಿಕ್ಕೆ ಶುರು ಮಾಡಿದೆ. ಸ್ನೇಹಿತರ ಸಹವಾಸದಿಂದ ನಾನು ಗಾಂಜಾಗೆ ದಾಸನಾಗಿದ್ದೆ. ಸದ್ಯ ಗುಣಮುಖನಾಗುತ್ತಿದ್ದೇನೆ ಎಂದು ಹುಡುಗ ತಿಳಿಸಿದ್ದಾನೆ. ಈ ಸಂಪೂರ್ಣ ವಿಡಿಯೋವನ್ನು ನಟ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಿನಿಮಾ ಬಳಿಕವೂ ಗಾಂಜಾ ವಿರುದ್ಧ ಹೋರಾಡುವುದಾಗಿ ದುನಿಯಾ ವಿಜಯ್ ತಿಳಿಸಿದ್ದಾರೆ.
ಗಾಂಜಾ ಹಾಗೂ ಡ್ರಗ್ಸ್ ಬಗ್ಗೆ ಕೆಲ ದಾಖಲೆಯ ವಿಡಿಯೋಗಳನ್ನು ಹಂಚಿಕೊಂಡಿರುವುದಕ್ಕೆ ನನಗೆ ಈಗಾಗಲೇ ಗಾಂಜಾ ಮಾಫಿಯಾದವರು ಫೋನ್ ಮಾಡಿ ಬೆದರಿಕೆಗಳನ್ನ ಹಾಕುತ್ತಿದ್ದಾರೆ. ಅದಕ್ಕೆ ನಾನು ಬಗ್ಗೋ ಮಗನೇ ಅಲ್ಲ. ನನಗೂ ಕಾನೂನು ಗೊತ್ತಿದೆ. ಇದಕ್ಕೆಲ್ಲ ಹೆದರಲ್ಲ. ನನ್ನ ಉದ್ದೇಶ ಇಷ್ಟೇ, ಕಾಲೇಜು ಯುವಕ, ಯುವತಿಯರು ಹಾಳಾಗುತ್ತಿರೋದನ್ನು ತಪ್ಪಿಸಬೇಕೆಂಬುದರ ನಿಟ್ಟಿನಲ್ಲಿ ನನ್ನದೊಂದು ಪುಟ್ಟ ಪ್ರಯತ್ನ ಎಂದು ವಿಜಯ್ ಹೇಳಿದ್ದಾರೆ.












Click it and Unblock the Notifications