Bengaluru Rain: ಮುಂಗಾರು ಮಳೆ, ನಗರದಲ್ಲಿ ಹೊಸ ಸವಾಲು
ಬೆಂಗಳೂರು, ಮೇ 16: ಉದ್ಯಾನ ನಗರಿ ಬೆಂಗಳೂರಿನಲ್ಲಿ ಬಿರು ಬಿಸಿಲಿನ ದಿನಗಳು ಕಡಿಮೆಯಾಗಿದ್ದು, ಪ್ರತಿದಿನ ಮಳೆಯಾಗುತ್ತಿದೆ. ಪೂರ್ವ ಮುಂಗಾರು ಮಳೆ ಇನ್ನಷ್ಟು ದಿನ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ಅಲ್ಲದೇ ನೈಋತ್ಯ ಮುಂಗಾರು ಸಹ ಆರಂಭವಾಗುತ್ತಿದ್ದು, ಹೊಸ ಸವಾಲು ಎದುರಾಗಲಿದೆ.
ನಗರದಲ್ಲಿ ಸಂಚಾರ ದಟ್ಟಣೆ ಬಗೆಹರಿಸುವುದು ಮೊದಲ ಸವಾಲು. ಅದರಲ್ಲೂ ಈಗ ಸುರಿಯುತ್ತಿರುವ ಸಂಜೆ ಮಳೆಯ ಕಾರಣಕ್ಕೆ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುತ್ತಿದ್ದಾರೆ. ಈಗ ಮುಂಗಾರು ಮಳೆಯ ಅವಧಿಯಲ್ಲಿಯೂ ಇದೆ ಸಮಸ್ಯೆ ಪೊಲೀಸರನ್ನು ಕಾಡಲಿದೆ.

ನಡೆಯುತ್ತಿರುವ ವಿವಿಧ ಕಾಮಗಾರಿ, ಒಳ ಚರಂಡಿ ತುಂಬುವುದು, ರಸ್ತೆ ಗುಂಡಿ, ರಸ್ತೆಯಲ್ಲಿ ನೀರು ನಿಲ್ಲುವುದು ಮುಂತಾದ ಕಾರಣಗಳಿಂದ ನಗರದಲ್ಲಿ ಮಳೆಗಾಲದಲ್ಲಿ ಸಂಚಾರ ದಟ್ಟಣೆ ಉಂಟಾಗಲಿದೆ. ಇದನ್ನು ಪರಿಹರಿಸಲು ಬೆಂಗಳೂರು ಸಂಚಾರಿ ಪೊಲೀಸರು ಈಗಾಗಲೇ ಯೋಜನೆ ರೂಪಿಸುತ್ತಿದ್ದಾರೆ.
ನಗರದಲ್ಲಿ ಮಳೆಯಾದಾಗ ಮೊದಲು ನೀರು ನಿಲ್ಲುವ ರಸ್ತೆಗಳನ್ನು ಬಿಬಿಎಂಪಿಯ ಸಹಾಯದಿಂದ ಸಂಚಾರಿ ಪೊಲೀಸರು ಗುರುತಿಸಿದ್ದಾರೆ. ನಮ್ಮ ಮೆಟ್ರೋ, ಸಬ್ ಅರ್ಬನ್ ರೈಲು ಯೋಜನೆ, ವೈಟ್ ಟಾಪಿಂಗ್ ಸೇರಿ ವಿವಿಧ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ಮೂಲಕ ಸಂಚಾರ ದಟ್ಟಣೆಯನ್ನು ನಿವಾರಣೆ ಮಾಡಲು ಪೊಲೀಸರು ಮುಂದಾಗಿದ್ದಾರೆ.
ಮಳೆಗಾಲ ಆರಂಭ: ಜೂನ್ ತಿಂಗಳಿನಲ್ಲಿ ನೈಋತ್ಯ ಮುಂಗಾರು ಮಳೆ ಆರಂಭವಾಗಲಿದೆ. ಆಗಲೇ ಶಾಲಾ-ಕಾಲೇಜುಗಳು ಸಹ ಆರಂಭವಾಗುತ್ತವೆ. ಆಗ ಮುಂಜಾನೆಯ ವಾಹನ ದಟ್ಟಣೆ ಹೆಚ್ಚಾಗಿಯೇ ಇರುತ್ತದೆ. ಇದನ್ನು ಬಗೆಹರಿಸಲು ಪೊಲೀಸರು ಯೋಜನೆ ರೂಪಿಸಿದ್ದಾರೆ. ಬಿಬಿಎಂಪಿ ಸೇರಿದಂತೆ ಇತರ ಸಂಸ್ಥೆಗಳು ಪೊಲೀಸರ ಜೊತೆ ಕೈ ಜೋಡಿಸಲಿವೆ.
ಬಿಡಿಎ, ಜಲಮಂಡಳಿ ಕೆಲವು ರಸ್ತೆಗಳಲ್ಲಿ ಕಾಮಗಾರಿಯನ್ನು ಕೈಗೊಂಡಿದೆ. ಈ ಮಾರ್ಗದಲ್ಲಿ ಮಳೆ ಬಂದಾಗ ನೀರು ನಿಂತು ಉಂಟಾಗುವ ಸಂಚಾರ ದಟ್ಟಣೆ ಬಗೆಹರಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ನೀರು ಸರಾಗವಾಗಿ ಹರಿದು ಹೋದರೆ ಸಮಸ್ಯೆ ಬಗೆಹರಿದಂತೆಯೇ.
ಮರಗಳು ಬಿದ್ದು, ವಿದ್ಯುತ್ ಕಂಬಗಳು ಬಿದ್ದು ಸಂಚಾರ ದಟ್ಟಣೆ ಉಂಟಾದರೆ ಪರ್ಯಾಯ ಮಾರ್ಗದಲ್ಲಿ ಸಂಚಾರ ನಡೆಸಬೇಕು. ಆಗ ಬಿಬಿಎಂಪಿ, ಬೆಸ್ಕಾಂ ಸಿಬ್ಬಂದಿಗಳ ನೆರವನ್ನು ಪೊಲೀಸರು ಪಡೆಯಬೇಕಿದೆ. ರಸ್ತೆಯಲ್ಲಿ ನೀರು ನಿಂತಾಗ ಪ್ರಮುಖವಾಗಿ ಬೈಕ್ ಸವಾರರು ಸಂಕಷ್ಟಕ್ಕೆ ಸಿಲುಕುತ್ತಾರೆ.
ಬೆಂಗಳೂರು ನಗರ ಸಂಚಾರಿ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಯಾವುದೇ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ ಉಂಟಾದರೆ ತಕ್ಷಣ ಫೇಸ್‌ಬುಕ್, ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಳ್ಳುತ್ತಾರೆ. ಜನರು ಇದನ್ನು ಪರಿಶೀಲನೆ ನಡೆಸಿ ವಾಹನ ಸಂಚಾರದ ಮಾರ್ಗವನ್ನು ಬದಲಾಯಿಸಿಕೊಳ್ಳಬಹುದು.
ಕಳೆದ ಶುಕ್ರವಾರ ಬೆಂಗಳೂರು ನಗರದಲ್ಲಿ ಸುರಿದ ಪೂರ್ವ ಮುಂಗಾರು ಮಳೆಯಿಂದಾಗಿ 38 ಪ್ರದೇಶಗಳಲ್ಲಿ ನೀರು ನಿಂತಿತ್ತು. ಅದರಲ್ಲೂ ನಗರದ ಹೊರ ವರ್ತುಲ ರಸ್ತೆಯಲ್ಲಿ ಹೆಚ್ಚು ಸಮಸ್ಯೆ ಉಂಟಾಗಿತ್ತು. ಈಗ ಮುಂಗಾರು ಮಳೆಯ ಅವಧಿಯಲ್ಲಿಯೂ ನೀರು ನಿಲ್ಲುವ ಪ್ರಮುಖ ಸ್ಥಳಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಅಂಡರ್‌ಪಾಸ್‌ನಲ್ಲಿ ನೀರು ನಿಂತು ವಾಹನಗಳು ಮುಂದೆ ಸಾಗಲು ಅನಾನುಕೂಲವಾಗುತ್ತದೆ. ಇಂತಹ ಅಂಡರ್‌ಪಾಸ್‌ಗಳನ್ನು ಗುರುತಿಸಿ ಬಿಬಿಎಂಪಿ ಸಹಾಯದಿಂದ ನೀರನ್ನು ಹೊರ ಹಾಕಲು ಮೋಟಾರು ವ್ಯವಸ್ಥೆ ಮಾಡಲಾಗುತ್ತಿದೆ.
ಮರಗಳು ಬಿದ್ದು ರಸ್ತೆಗಳು ಬ್ಲಾಕ್ ಆಗುವ ಸಮಸ್ಯೆ ನಿವಾರಣೆಗೆ ಬಿಬಿಎಂಪಿ ಜೊತೆ ಚರ್ಚೆ ನಡೆಸಲಾಗಿದೆ. ಬಿಬಿಎಂಪಿಯ ಅರಣ್ಯ ಘಟಕ ಸಣ್ಣ ಕೊಂಬೆ, ಮರಗಳನ್ನು ತಕ್ಷಣ ತೆರವು ಮಾಡಲು ಅನುಕೂಲವಾಗುವಂತೆ ಬೈಕ್ ಗಸ್ತು ಸಹ ಆರಂಭಿಸುತ್ತಿದೆ.












Click it and Unblock the Notifications