ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ವಜಾ
ಬೆಂಗಳೂರು, ಮಾರ್ಚ್ 02 : ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ಮೊಹಮ್ಮದ್ ನಲಪಾಡ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.
ಶುಕ್ರವಾರ ಬೆಂಗಳೂರಿನ 63ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಅವರು ಜಾಮೀನು ಅರ್ಜಿಯ ತೀರ್ಪು ಪ್ರಕಟಿಸಿದರು. ಮೊಹಮ್ಮದ್ ನಲಪಾಡ್ ಸೇರಿದಂತೆ ಎಲ್ಲಾ 7 ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು.
ಮೊಹಮ್ಮದ್ ನಲಪಾಡ್ ಬೆಂಗಳೂರಿನ ಯು.ಬಿ.ಸಿಟಿಯಲ್ಲಿನ ಫರ್ಜಿ ಕೆಫೆಯಲ್ಲಿ ವಿದ್ವತ್ ಎಂಬ ಯುವಕನ ಮೇಲೆ ಹಲ್ಲೆ ಮಾಡಿದ್ದರು. ಈ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಬಂಧಿತರಾಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಮೊಹಮ್ಮದ್ ನಲಪಾಡ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಮೊಹಮ್ಮದ್ ನಲಪಾಡ್ ಪರ ವಕೀಲರು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು.
ವಿದ್ವತ್ ಪರ ವಿಶೇಷ ಸರ್ಕಾರಿ ಅಭಿಯೋಜಕ ಶ್ಯಾಮ್ ಸುಂದರ್ ವಾದ ಮಂಡನೆ ಮಾಡಿದ್ದರು. ಮೊಹಮ್ಮದ್ ನಲಪಾಡ್ ಪರ ಟಾಮಿ ಸೆಬಾಸ್ಟಿಯನ್ ವಾದ ಮಂಡನೆ ಮಾಡಿದ್ದರು.
ವಜಾ ಆಗಿದ್ದೇಕೆ? : ಮೊಹಮ್ಮದ್ ನಲಪಾಡ್‌ವಿದ್ವತ್ ಮೇಲೆ ಹಲ್ಲೆ ಮಾಡಿದ್ದಲ್ಲದೇ ಆಸ್ಪತ್ರೆ ತನಕವೂ ಹಿಂಬಾಲಿಸಿಕೊಂಡು ಬಂದಿದ್ದ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೋರ್ಟ್, ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡಿದರೆ ತನಿಖೆಗೆ ಹಿನ್ನಡೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದು, ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಬೆಂಗಳೂರಿನ ಯು.ಬಿ.ಸಿಟಿಯ ಫರ್ಜಿ ಕೆಫೆಯಲ್ಲಿ ಫೆ.17ರ ಶನಿವಾರ ಮೊಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ವಿದ್ವತ್‌ನನ್ನು ಸ್ನೇಹಿತರು ಮಲ್ಯ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆಸ್ಪತ್ರೆಗೂ ನುಗ್ಗಿದ ಗುಂಪು ಬೆದರಿಕೆ ಹಾಕಿತ್ತು.
ಫೆ.19ರಂದು ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ಮೊಹಮ್ಮದ್ ನಲಪಾಡ್ ಶರಣಾಗಿದ್ದರು. ನ್ಯಾಯಾಲಯ ಎರಡು ದಿನಗಳ ಕಾಲ ಆರೋಪಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿತ್ತು. ನಂತರ ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ಹಸ್ತಾಂತರ ಮಾಡಲಾಗಿದೆ.












Click it and Unblock the Notifications