ನಮೋ ಸಮಾವೇಶಕ್ಕೆ ನಾವು ಸಿದ್ಧ, ನೀವು ಬನ್ನಿ
ಬೆಂಗಳೂರು, ನ. 15 : ನರೇಂದ್ರ ಮೋದಿ ಅವರ ಭಾರತ ಗೆಲ್ಲಿಸಿ ಸಮಾವೇಶಕ್ಕಾಗಿ ರಾಜ್ಯ ಬಿಜೆಪಿ ಘಟಕ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಇದೊಂದು ಐತಿಹಾಸಿಕ ಸಮಾವೇಶವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಸಮಾವೇಶಕ್ಕಾಗಿ ಕೂಪನ್ ಮೂಲಕ ಸಂಗ್ರಹಿಸಿದ ಹಣವನ್ನು ಸರ್ದಾರ್ ಪಟೇಲ್ ಪ್ರತಿಮೆ ನಿರ್ಮಾಣಕ್ಕೆ ನೀಡಲು ಬಿಜೆಪಿ ನಿರ್ಧರಿಸಿದೆ.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಪ್ರಹ್ಲಾದ್ ಜೋಶಿ, ಭಾರತ ಗೆಲ್ಲಿಸಿ ಸಮಾವೇಶಕ್ಕಾಗಿ ಮಾಡಿಕೊಂಡಿರುವ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು. ಸಮಾವೇಶ ನಡೆಯುವ ಅರಮನೆ ಮೈದಾನದಲ್ಲಿ 16 ಅಡಿ ಎತ್ತರದ ವೇದಿಕೆ ನಿರ್ಮಿಸಲಾಗಿದ್ದು, 10*80 ವಿಸ್ತೀರ್ಣವನ್ನು ಅದು ಹೊಂದಿದೆ ಎಂದರು.

ಸಮಾವೇಶಕ್ಕಾಗಿ 3.5 ಲಕ್ಷ ಕೂಪನ್ ಗಳನ್ನು ಮಾರಾಟ ಮಾಡಲಾಗಿದ್ದು, ಇದರಿಂದ ಸಂಗ್ರಹಿಸಲಾದ 35 ಲಕ್ಷ ರೂ.ಗಳನ್ನು ಗುಜರಾತಿನಲ್ಲಿ ನಿರ್ಮಿಸಲಾಗುತ್ತಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಯುನಿಟಿ ಪ್ರತಿಮೆಗಾಗಿ ನೀಡಲಾಗುವುದು. ನರೇಂದ್ರ ಮೋದಿ ಅವರಿಗೆ ಈ ಹಣವನ್ನು ಸಮಾವೇಶದಲ್ಲಿ ಹಸ್ತಾಂತರಿಸಲಾಗುವುದು ಎಂದು ಮಾಹಿತಿ ನೀಡಿದರು. (ನಮೋ ಭಾಷಣದಲ್ಲಿ ಏನಿರುತ್ತೆ?)
ಕೂಪನ್ ಪಡೆದವರಿಗೆ ಮಾತ್ರ ಸಮಾವೇಶಕ್ಕೆ ಪ್ರವೇಶ ಎಂಬ ಕಲ್ಪನೆ ಬೇಡ, ಎಲ್ಲರಿಗೂ ಸಮಾವೇಶಕ್ಕೆ ಪ್ರವೇಶ ನೀಡಲಾಗುತ್ತದೆ ಎಂದರು. ಹಿರಿಯ ಸಾಹಿತಿಗಳು, ಸ್ವಾಮೀಜಿಗಳು ಸಮಾವೇಶಕ್ಕೆ ಆಗಮಿಸಲಿದ್ದು, ಅವರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಸಮಾವೇಶಕ್ಕೆ ಬೆಂಗಳೂರಿಗೆ ಆಗಮಿಸುವ ಕಾರ್ಯಕರ್ತರಿಗಾಗಿ 2,500 ಬಸ್, 10 ರೈಲು, 250 ಇತರ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಹುಬ್ಭಳ್ಳಿ, ಬೀದರ್, ಶಿವಮೊಗ್ಗ, ಬಾಗಲಕೋಟೆ ಮುಂತಾದ ಜಿಲ್ಲೆಯಗಳಿಂದ ವಿಶೇಷ ರೈಲು ಆಗಮಿಸಲಿದೆ ಎಂದು ಜೋಶಿ ತಿಳಿಸಿದರು.
ವೇದಿಕೆಯ ಕಾರ್ಯಕ್ರಮ ಎಲ್ಲರಿಗೂ ಕಾಣುವಂತೆ ವ್ಯವಸ್ಥೆ ಮಾಡಲಾಗಿದೆ. 40 ಎಲ್ ಇಡಿ ಸ್ಕ್ರೀನ್ ಗಳನ್ನು ಅಳವಡಿಸಲಾಗಿದೆ. ಸಮಾವೇಶಕ್ಕೆ ಬರುವ ಜನರ ಊಟದ ವ್ಯವಸ್ಥೆಗಾಗಿ 300 ಕೌಂಟರ್ ತೆರೆಯಲಾಗಿದೆ. ಪೊಲೀಸರು ಅಗತ್ಯ ವ್ಯವಸ್ಥೆಗಳನ್ನು ಕೈಗೊಂಡಿದ್ದು, ಸಮಾವೇಶದ ಭದ್ರತೆ ಬಗ್ಗೆ ಯಾರಿಗೂ ಆತಂಕ ಬೇಡ ಎಂದು ಜೋಶಿ ಮನವಿ ಮಾಡಿದರು.











Click it and Unblock the Notifications