IPL 2026 Final: ಶಾಸಕರ ಫ್ರೀ ಟಿಕೆಟ್ ಕಿರಿಕಿರಿ; ಚಿನ್ನಸ್ವಾಮಿಯಿಂದ ಐಪಿಎಲ್ ಫೈನಲ್ ಪಂದ್ಯ ಸ್ಥಳಾಂತರ?
ಬೆಂಗಳೂರು: ಈ ಬಾರಿಯ ಐಪಿಎಲ್ (IPL) ಫೈನಲ್ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕುಳಿತು ಕಣ್ತುಂಬಿಕೊಳ್ಳಬೇಕು ಎಂದು ಕಾಯುತ್ತಿದ್ದ ಕನ್ನಡಿಗರಿಗೆ ಹಾಗೂ ಕ್ರಿಕೆಟ್ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗುವ ಸಾಧ್ಯತೆ ಹೆಚ್ಚಿದೆ. ಹಾಲಿ ಚಾಂಪಿಯನ್ಸ್ ಆಗಿರುವ ಆರ್‌ಸಿಬಿ (RCB) ತಂಡದ ತವರು ಮೈದಾನವಾಗಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯವು 'ಉಚಿತ ಟಿಕೆಟ್' ವಿವಾದದ ಬಿಸಿಯಿಂದಾಗಿ ಬೇರೆಡೆಗೆ ಸ್ಥಳಾಂತರಗೊಳ್ಳುವ ಭೀತಿ ಎದುರಾಗಿದೆ.
ಸಾಮಾನ್ಯವಾಗಿ ಐಪಿಎಲ್ ನಿಯಮಗಳ ಪ್ರಕಾರ, ಹಾಲಿ ಚಾಂಪಿಯನ್ ತಂಡದ ತವರು ಮೈದಾನದಲ್ಲಿ ಟೂರ್ನಿಯ ಉದ್ಘಾಟನಾ ಪಂದ್ಯ ಹಾಗೂ ಫೈನಲ್ ಪಂದ್ಯ ನಡೆಯುವುದು ವಾಡಿಕೆ. ಇದರ ಅನ್ವಯ ಈ ಬಾರಿ ಕನಿಷ್ಠ 1 ಪ್ಲೇಆಫ್ ಮತ್ತು ಫೈನಲ್ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ, ಕರ್ನಾಟಕದ ಶಾಸಕರು (ಎಂಎಲ್‌ಎ), ವಿಧಾನ ಪರಿಷತ್ ಸದಸ್ಯರು (ಎಂಎಲ್‌ಸಿ) ಮತ್ತು ಸಂಸದರಿಗೆ (ಎಂಪಿ) ವಿತರಿಸಲಾಗುತ್ತಿರುವ ಉಚಿತ ವಿಐಪಿ ಟಿಕೆಟ್‌ಗಳ ವಿವಾದವೇ ಈ ಎಲ್ಲ ಅನಿಶ್ಚಿತತೆಗೆ ಪ್ರಮುಖ ಕಾರಣ ಎಂದು ವರದಿಯಾಗಿದೆ.

ವಿವಾದದ ಮೂಲ
ಈ ಉಚಿತ ಟಿಕೆಟ್ ವಿವಾದ ಆರಂಭವಾಗಿದ್ದು ವಿಧಾನಸೌಧದ ಕಲಾಪದಲ್ಲಿ. ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಸದನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. "ಚುನಾಯಿತ ಪ್ರತಿನಿಧಿಗಳಿಗೆ ಐಪಿಎಲ್ ಪಂದ್ಯ ವೀಕ್ಷಿಸಲು ಉಚಿತ ವಿಐಪಿ ಟಿಕೆಟ್‌ಗಳನ್ನು ನೀಡಬೇಕು. ಶಾಸಕರು ಸಾಮಾನ್ಯ ಅಭಿಮಾನಿಗಳಂತೆ ಸರತಿ ಸಾಲಿನಲ್ಲಿ ನಿಂತು ಪಂದ್ಯ ವೀಕ್ಷಿಸುವುದು ಸಾಧ್ಯವಿಲ್ಲ" ಎಂದು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಆರಂಭದಲ್ಲಿ ಪ್ರತಿ ಜನಪ್ರತಿನಿಧಿಗೆ ತಲಾ 2 ಟಿಕೆಟ್ ನೀಡಲು ತೀರ್ಮಾನಿಸಲಾಗಿತ್ತು. ಆದರೆ, ಒತ್ತಡ ಹೆಚ್ಚಾದಂತೆ ಇದನ್ನು 3ಕ್ಕೆ ಏರಿಸಲು ಕ್ರಿಕೆಟ್ ಮಂಡಳಿ ಒಪ್ಪಲಾಗಿತ್ತು.
ಇದೀಗ ಕೆಲವು ಶಾಸಕರು ತಲಾ 4 ರಿಂದ 5 ಉಚಿತ ಟಿಕೆಟ್ ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರ, ಗುಜರಾತ್ ಹಾಗೂ ದೆಹಲಿಯಲ್ಲಿ ಶೇ.50-60ರಷ್ಟು ಟಿಕೆಟ್‌ಗಳನ್ನು ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗುತ್ತದೆ, ಹಾಗಾಗಿ ಇಲ್ಲಿ 4-5 ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ ಎಂಬುದು ಇವರ ವಾದವಾಗಿದೆ.
ಬಿಸಿಸಿಐಗೆ ಶುರುವಾಯ್ತು ಟೆನ್ಷನ್
ರಾಜ್ಯದಲ್ಲಿ ಒಟ್ಟು 299 ಜನಪ್ರತಿನಿಧಿಗಳಿದ್ದಾರೆ. ತಲಾ 2ರಂತೆ ಲೆಕ್ಕ ಹಾಕಿದರೂ 598 ಟಿಕೆಟ್‌ಗಳಾಗುತ್ತವೆ. ಇದೀಗ ತಲಾ 4-5 ಟಿಕೆಟ್ ನೀಡಬೇಕು ಎಂದರೆ ಕ್ರಿಕೆಟ್ ಸಂಸ್ಥೆಗಳಿಗೆ ಇದು ಬಹುದೊಡ್ಡ ಹೊರೆಯಾಗಲಿದೆ. ಹಿಂದೊಮ್ಮೆ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿದ ಘಟನೆಯ ಬಳಿಕ, ಚಿನ್ನಸ್ವಾಮಿಯಲ್ಲಿ ಪ್ರಮುಖ ಪಂದ್ಯಗಳಿಗೆ ಬ್ರೇಕ್ ಬಿದ್ದಿತ್ತು. ಸದ್ಯ ಪಂದ್ಯಗಳನ್ನು ನಡೆಸಲು ಅನುಮತಿ ಸಿಕ್ಕಿದೆಯಾದರೂ, ಜನಪ್ರತಿನಿಧಿಗಳ ಈ 'ಫ್ರೀ ಟಿಕೆಟ್' ಕಿರಿಕಿರಿಯಿಂದ ಬೇಸತ್ತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಬೇರೆಡೆಗೆ ಸ್ಥಳಾಂತರಿಸುವ ಕುರಿತು ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಕೆಎಸ್‌ಸಿಎ ಹೇಳುವುದೇನು?
ಈ ಎಲ್ಲಾ ಬೆಳವಣಿಗೆಗಳ ನಡುವೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ವಕ್ತಾರ ವಿನಯ್ ಮೃತ್ಯುಂಜಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. "ಐಪಿಎಲ್ ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸಲಿದೆ. ಪ್ಲೇಆಫ್ ಅಥವಾ ಫೈನಲ್ ಪಂದ್ಯವನ್ನು ಎಲ್ಲಿ ಆಯೋಜಿಸಬೇಕು ಎಂಬ ಅಂತಿಮ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಳ್ಳುತ್ತದೆ. ಆದರೆ, ಫೈನಲ್ ಪಂದ್ಯ ಬೆಂಗಳೂರಿನಿಂದ ಸ್ಥಳಾಂತರವಾಗಿದೆ ಎಂಬ ಬಗ್ಗೆ ನಮಗೆ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ವಿಐಪಿಗಳ ಉಚಿತ ಟಿಕೆಟ್ ವ್ಯಾಮೋಹವು, ಸಾವಿರಾರು ಹಣ ಕೊಟ್ಟು ಪಂದ್ಯ ನೋಡಲು ಕಾಯುವ ನಿಜವಾದ ಕ್ರಿಕೆಟ್ ಅಭಿಮಾನಿಗಳಿಗೆ ಕಂಟಕವಾಗಿ ಪರಿಣಮಿಸುವ ಆತಂಕ ಮೂಡಿಸಿದೆ.












Click it and Unblock the Notifications