Bengaluru: ನಾಪತ್ತೆಯಾದ ಬಾಲಕ- ಜ್ಯೋತಿಷಿಗಳು ಹೇಳಿದ ಸ್ಥಳದಲ್ಲಿ ಮಗನನ್ನು ಹುಡುಕಿದ ಪೋಷಕರು
ಮೂಢನಂಬಿಕೆ ಜನರಲ್ಲಿ ಈಗಲೂ ಆಳವಾಗಿ ಬೇರೂರಿದೆ ಎನ್ನುವ ಮಾತು ಇದೊಂದು ಘಟನೆಯಿಂದ ನಿಜವಾದಂತೆ ತೋರುತ್ತಿದೆ. ಬೆಂಗಳೂರಿನಲ್ಲಿ ನಾಪತ್ತೆಯಾದ ಬಾಲಕನನ್ನು ಜ್ಯೋತಿಷಿಗಳು ಹೇಳಿದ ಸ್ಥಳದಲ್ಲಿ ಪೋಷಕರು ಹುಡುಕಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರಿನ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 9ನೇ ತರಗತಿ ಓದುತ್ತಿದ್ದ ಆದಿತ್ಯಾ ಎಂಬ ಬಾಲಕ ಕಾಣೆಯಾಗಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಬಾಲಕ ನಾಪತ್ತೆಯಾಗುವ ಮುನ್ನ ತಾಯಿಯ ಮೊಬೈಲ್ ಫೋನ್‌ನಲ್ಲಿ ಕೆಲವು ಪ್ರವಾಸಿ ಸ್ಥಳಗಳ ಬಗ್ಗೆ ಸರ್ಚ್ ಮಾಡಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಕಾಣೆಗೂ ಮುನ್ನ ಬಾಲಕ ಕಟ್ಟಿಂಗ್ ಶಾಪ್‌ಗೆ ಹೋಗುವುದಾಗಿ ಹೇಳಿ ಬಟ್ಟೆಯನ್ನು ಬ್ಯಾಗ್ ಅಲ್ಲಿ ಇರಿಸಿಕೊಂಡು ಮನೆಯಿಂದ ಹೊರಟು ಹೋಗಿದ್ದಾನೆ.

ಮನೆಗೆ ಮಗ ತಡವಾದರೂ ಬಾರದೇ ಇದ್ದಾಗ ಪೋಷಕರು ಜ್ಯೋತಿಷಿಗಳ ಬಳಿ ಹೋಗಿದ್ದಾರೆ. ಜ್ಯೋತಿಷಿ ಹೇಳಿದ ಸ್ಥಳದಲ್ಲಿ ಪೋಷಕರು ಬಾಲಕನನ್ನು ಹುಡುಕಿದ್ದಾರೆ. ಆದರೂ ಬಾಲಕ ಇನ್ನೂ ಪತ್ತೆಯಾಗಿಲ್ಲ. ಸ್ಥಳೀಯ ಸಿಸಿ ಟಿವಿ ಕ್ಯಾಮರಾದಲ್ಲಿ ಬಾಲಕನ ರಸ್ತೆಯಲ್ಲಿ ನಡೆದು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ. ಹಗಲು-ರಾತ್ರಿ ಹುಡುಕಾಟ ನಡೆಸಿದರೂ ಬಾಲಕನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಮನೆಯಲ್ಲಿ ಯಾವುದಾದರೂ ಸಾಕ್ಷಿ ಸಂಗ್ರಹವಾಗಬಹುದು ಎಂಬ ಅನುಮಾನದಿಂದ ಪೊಲೀಸರು ಮನೆಯನ್ನು ಜಾಲಾಡಿದ್ದಾರೆ. ಮನೆಯಲ್ಲಿರುವ ಎಲ್ಲರ ಫೋನ್‌ಗಳನ್ನು ಚೆಕ್ ಮಾಡಿದ್ದಾರೆ. ಬಾಲಕ ಹೆಚ್ಚು ಬಳಕೆ ಮಾಡುತ್ತಿದ್ದ ತಾಯಿಯ ಫೋನ್ ಅನ್ನು ಪರೀಶೀಲನೆ ಮಾಡಿದ್ದಾರೆ. ಈ ವೇಳೆ ಬಾಲಕ ಆದಿತ್ಯಾ ತಾಯಿಯ ಮೊಬೈಲ್‌ನಲ್ಲಿ ಮಲ್ಪೆ, ಮೈಸೂರಿನ ಕೆಲ ಭಾಗಗಳ ಬಗ್ಗೆ ಸರ್ಚ್ ಮಾಡಿರುವುದು ಗೊತ್ತಾಗಿದೆ. ಮೇ 29ರಂದು ಕಟ್ಟಿಂಗ್ ಶಾಪ್‌ಗೆ ಹೋಗುವುದಾಗಿ ಹೇಳಿ ಆದಿತ್ಯಾ ಮನೆಯಿಂದ ಹೊರಟಿದ್ದಾನೆ. ಇವತ್ತಿಗೆ ಬಾಲಕ ಮನೆ ಬಿಟ್ಟು ಒಂದುವಾರ ಕಳೆಯುತ್ತಾ ಬಂದಿದೆ. ಆದರೆ ಬಾಲಕ ಈವರೆಗೂ ಪತ್ತೆಯಾಗಿಲ್ಲ.

ಪೋಷಕರು ಬಾಲಕ ನಾಪತ್ತೆಯಾದ ಬಳಿಕ ಸರಿಯಾಗಿ ಹುಡುಕಾಟ ನಡೆಸಿಲ್ಲ. ಬದಲಿಗೆ ಜ್ಯೋತಿಷ್ಯ ಕೇಳಿಕೊಂಡು ಗುರುಜಿ ಹೇಳಿದ ಸ್ಥಳದಲ್ಲಿ ಬಾಲಕನ್ನು ಹುಡುಕಿದ್ದಾರೆ. ಇದರಿಂದ ಬಾಲಕನನ್ನು ಬೇಗ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಜ್ಯೋತಿಷ್ಯ ಮಾತು ಕೇಳಿ ಕರಾವಳಿ ಭಾಗದಲ್ಲಿ ಹುಡುಕಾಟ ನಡೆಸಿದ್ದಾರೆ.
ಸಿಸಿ ಟಿವಿ ದೃಶ್ಯವನ್ನು ಆಧರಿಸಿ ಪೊಲೀಸರು ಆರ್.ಟಿ ನಗರ ಸೇರಿ ಮಲ್ಪೆ ಭಾಗದ ಹಾಗೂ ಸುತ್ತಮುತ್ತಲಿನ ಠಾಣೆಗೆ ಮಾಹಿತಿ ನೀಡಲಾಗಿದೆ. ಸದ್ಯ ಬಾಲಕ ಮೈಸೂರಿನಲ್ಲಿ ಇದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಯಾವ ಮಾಹಿತಿ ಬಗ್ಗೆ ನಿಖರತೆ ಇಲ್ಲ. ಹಗಲು ರಾತ್ರಿ ಎನ್ನದೆ ಪೋಷಕರು ಹಾಗೂ ಪೊಳೀಸರು ಬಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಜೊತೆಗೆ ಬಾಲಕ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎನ್ನುವ ಬಗ್ಗೆಯೂ ಪೊಲೀಸರು ತನಿಖೆ ನಡೆಸಿದ್ದಾರೆ. ಆದರೆ ಈ ಬಗ್ಗೆ ಕೂಡ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.
ಮಕ್ಕಳು ನಾಪತ್ತೆ
2022ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿ ತಿಂಗಳು ಕನಿಷ್ಠ ಐದು ಮಕ್ಕಳು ನಾಪತ್ತೆಯಾಗುತ್ತಿರುವ ಪ್ರಕರಣಗಳು ವರದಿಯಾಗಿವೆ. ಮಕ್ಕಳ ಕಲ್ಯಾಣ ಸಮಿತಿಯ ಮಾಹಿತಿಯ ಪ್ರಕಾರ 2022ರಲ್ಲಿ 33 ಹುಡುಗಿಯರು ಸೇರಿದಂತೆ ಒಟ್ಟು 62 ಮಕ್ಕಳು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಅವರಲ್ಲಿ 60 ಮಂದಿಯನ್ನು ಪೊಲೀಸರು ಗುರುತಿಸಿದ್ದು, ಇನ್ನೂ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಂದ ಮಾಹಿತಿ ಸಂಗ್ರಹಿಸಲಾಗಿದೆ.












Click it and Unblock the Notifications